ನವದೆಹಲಿ: ಸರಳಭಾಷೆಯಲ್ಲಿರುವ, ಗೊಂದಲಗಳಿಲ್ಲದ, ವ್ಯಾಜ್ಯಗಳಿಗೆ ಹೆಚ್ಚಿನ ಅವಕಾಶ ನೀಡದ ಕೇಂದ್ರ ಸರ್ಕಾರದ ಹೊಸ ಆದಾಯ ತೆರಿಗೆ ಮಸೂದೆ-2025 ಗುರುವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.
ಹೊಸ ಕಾಯ್ದೆಯು ಹಾಲಿ ಕಾನೂನಿನಲ್ಲಿರುವ ''''''''ಹಿಂದಿನ ವರ್ಷ ಅಥವಾ ತೆರಿಗೆ ನಿರ್ಧಾರ ವರ್ಷ'''''''' ಎಂಬ ಪರಿಕಲ್ಪನೆಯನ್ನು ತೆಗೆದು ಹಾಕಿ ಆ ಜಾಗದಲ್ಲಿ ‘ತೆರಿಗೆ ವರ್ಷ’ ಎಂಬ ಪದವನ್ನು ಸೇರ್ಪಡೆ ಮಾಡಲಿದೆ. ಇದರಿಂದ ತೆರಿಗೆದಾರರು ಯಾವುದೇ ಗೊಂದಲಗಳಿಲ್ಲದೆ ಆದಾಯ ತೆರಿಗೆ ನಿಯಮಗಳಿಗೆ ಬದ್ಧರಾಗಲು ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಡಿಮೆ ಪುಟಗಳು: 1961ರಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ಆ ಕಾಲದ ತೆರಿಗೆ ವ್ಯವಸ್ಥೆಗೆ ಅನುಗುಣವಾಗಿ ರೂಪಿಸಲಾಗಿತ್ತು. ಹಳೆಯ ಕಾಯ್ದೆಯು ಅನುಷ್ಠಾನಕ್ಕೆ ಬರುವಾಗಲೇ 880 ಪುಟಗಳನ್ನು ಒಳಗೊಂಡಿತ್ತು. ಆ ಬಳಿಕ ಈ ಕಾಯ್ದೆಗೆ ಸಾಕಷ್ಟು ತಿದ್ದುಪಡಿಗಳೂ ಆಗಿದ್ದವು. ಆದರೆ ಇದೀಗ ಜಾರಿ ಮಾಡಲು ಉದ್ದೇಶಿಸಿರುವ ಹೊಸ ಕಾಯ್ದೆಯು 622 ಪುಟಗಳನ್ನು ಹೊಂದಿರಲಿದೆ.ಹೊಸ ಕಾಯ್ದೆಯು 536 ಸೆಕ್ಷನ್‌ಗಳನ್ನು ಹೊಂದಿರಲಿದ್ದು, ಹಾಲಿ ಕಾಯ್ದೆಗೆ ಹೋಲಿಸಿದರೆ 298 ಸೆಕ್ಷನ್‌ಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಹಾಲಿ ಕಾಯ್ದೆ 14 ಶೆಡ್ಯೂಲ್‌ಗಳನ್ನು ಹೊಂದಿದ್ದರೆ ಹೊಸ ಕಾಯ್ದೆಯಲ್ಲಿ ಅದನ್ನು 16ಕ್ಕೇರಿಸಲಾಗಿದೆ. ಕಾಯ್ದೆಯು ಎಲ್ಲರಿಗೂ ಅರ್ಥವಾಗುವಂತೆ ರೂಪಿಸಲಾಗಿದೆ. ಗೊಂದಲಗಳನ್ನು ಕಡಿಮೆ ಮಾಡಲಾಗಿದೆ. ಅನಗತ್ಯವಾದ ನಿಯಮಗಳನ್ನು ತೆಗೆದುಹಾಕಲಾಗಿದೆ.
ಲೋಕಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಿದ ಬಳಿಕ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಿಕೊಡಲಾಗುತ್ತದೆ.