ಡಿ.5ರ ಮುಹೂರ್ತ ಫಿಕ್ಸ್‌ : ಫಡ್ನವೀಸ್‌ ಮಹಾರಾಷ್ಟ್ರ ಸಿಎಂ? ಮಹಾಯುತಿ ಮೈತ್ರಿಕೂಟದ ನೂತನ ಸರ್ಕಾರ ರಚನೆ

KannadaprabhaNewsNetwork |  
Published : Dec 01, 2024, 01:31 AM ISTUpdated : Dec 01, 2024, 07:41 AM IST
ದೇವೇಂದ್ರ ಫಡ್ನವೀಸ್‌ | Kannada Prabha

ಸಾರಾಂಶ

ಫಲಿತಾಂಶ ಘೋಷಣೆಯಾಗಿ ಎರಡು ವಾರ ಕಳೆದರೂ ಕಗ್ಗಂಟಾಗಿಯೇ ಉಳಿದಿದ್ದ ಮಹಾರಾಷ್ಟ್ರ ಸರ್ಕಾರ ರಚನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಡಿ.5ರಂದು ಸಂಜೆ 5 ಗಂಟೆಗೆ ಮುಂಬೈನ ಆಜಾದ್‌ ಮೈದಾನದಲ್ಲಿ ಮಹಾಯುತಿ ಮೈತ್ರಿಕೂಟದ ನೂತನ ಸರ್ಕಾರ ರಚನೆಯಾಗಲಿದೆ.

 ಮುಂಬೈ: ಫಲಿತಾಂಶ ಘೋಷಣೆಯಾಗಿ ಎರಡು ವಾರ ಕಳೆದರೂ ಕಗ್ಗಂಟಾಗಿಯೇ ಉಳಿದಿದ್ದ ಮಹಾರಾಷ್ಟ್ರ ಸರ್ಕಾರ ರಚನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಡಿ.5ರಂದು ಸಂಜೆ 5 ಗಂಟೆಗೆ ಮುಂಬೈನ ಆಜಾದ್‌ ಮೈದಾನದಲ್ಲಿ ಮಹಾಯುತಿ ಮೈತ್ರಿಕೂಟದ ನೂತನ ಸರ್ಕಾರ ರಚನೆಯಾಗಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯಾಗಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬಾವನ್‌ಕುಲೆ ತಿಳಿಸಿದ್ದಾರೆ.

ಈ ನಡುವೆ ನೂತನ ಸರ್ಕಾರದಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿಯಾಗಲಿದ್ದಾರೆ, ಮೈತ್ರಿಕೂಟದ ಶಿವಸೇನೆ ಮತ್ತು ಎನ್‌ಸಿಪಿಗೆ ಉಪಮುಖ್ಯಮಂತ್ರಿ ಪಟ್ಟ ಸಿಗಲಿದೆ ಎಂದು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಮಾಹಿತಿ ನೀಡಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎಂಬ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.

ಹೀಗಾಗಿ ಬಿಜೆಪಿಯಲ್ಲಿ ಸಿಎಂ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ದೇವೇಂದ್ರ ಫಡ್ನವೀಸ್‌ ಅವರೇ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಇನ್ನು ಎನ್‌ಸಿಪಿಯಿಂದ ಅಜಿತ್‌ ಪವಾರ್ ಡಿಸಿಎಂ ಪಟ್ಟ ಏರುವುದು ಖಚಿತವಾಗಿದೆ. ಆದರೆ ಶಿವಸೇನೆಯಿಂದ ಮಾಜಿ ಸಿಎಂ ಏಕನಾಥ್‌ ಶಿಂಧೆ ಡಿಸಿಎಂ ಆಗುವ ಕುರಿತು ಪಕ್ಷ ಇನ್ನೂ ಯಾವುದೇ ಸುಳಿವು ನೀಡಿಲ್ಲ. ಹೀಗಾಗಿ ಆ ಕುರಿತ ಕುತೂಹಲ ಹಾಗೆಯೇ ಉಳಿದಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ನ.23ರಂದೇ ಪ್ರಕಟವಾಗಿತ್ತು. 288ರ ಪೈಕಿ 230 ಸ್ಥಾನ ಗೆದ್ದಿರುವ ಬಿಜೆಪಿ, ಶಿವಸೇನೆ (ಶಿಂಧೆ ಬಣ), ಎನ್‌ಸಿಪಿ (ಅಜಿತ್‌ ಪವಾರ್‌) ಒಳಗೊಂಡ ಮಹಾಯುತಿ ಮೈತ್ರಿಕೂಟ ಸರ್ಕಾರ ರಚಿಸುವುದು ಖಚಿತವಾಗಿತ್ತು. ಆದರೆ ಸಿಎಂ ಪಟ್ಟ ಕಳೆದುಕೊಂಡ ಮಾಜಿ ಸಿಎಂ ಏಕನಾಥ್‌ ಶಿಂಧೆ, ಡಿಸಿಎಂ ಪಟ್ಟ ವಹಿಸಿಕೊಳ್ಳುವ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಸರ್ಕಾರ ರಚನೆ ವಿಳಂಬವಾಗಿತ್ತು. ಜೊತೆಗೆ ಡಿಸಿಎಂ ಪಟ್ಟ ಒಪ್ಪಿದರೆ ಗೃಹ ಸೇರಿದಂತೆ ಕೆಲವೊಂದು ಮಹತ್ವದ ಖಾತೆಗೆ ತಮಗೆ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ.

ಈ ನಡುವೆ ಈ ಹಿಂದಿನ ನಿರ್ಧಾರದ ಪ್ರಕಾರ ಡಿ.1ರ ಭಾನುವಾರ ಮುಂಬೈನಲ್ಲಿ ಮಹಾಯುತಿ ಕೂಟದ ಶಾಸಕಾಂಗ ಪಕ್ಷದ ಸಭೆ ನಡೆದು, ಅಲ್ಲಿ ನೂತನ ಸಿಎಂ ಹೆಸರು ಘೋಷಣೆಯಾಗಬೇಕಿತ್ತು. ಆದರೆ ಸಭೆ ಕುರಿತು ಮೈತ್ರಿಕೂಟ ಇದುವರೆಗೂ ಸುಳಿವು ಬಿಟ್ಟುಕೊಟ್ಟಿಲ್ಲ.

ಸಿಎಂ ಶಿಂಧೆ ತೀವ್ರ ಅಸ್ವಸ್ಥ

ಶುಕ್ರವಾರದ ಮಹಾಯುತಿ ಕೂಟದ ಸಭೆ ದಿಢೀರ್‌ ರದ್ದುಗೊಳಿಸಿ ಸತಾರಾದಲ್ಲಿನ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಶನಿವಾರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ದೇರ್‌ನಲ್ಲಿರುವ ಅವರ ಮನೆಗೇ ವೈದ್ಯರ ತಂಡ ಧಾವಿಸಿ ಚಿಕಿತ್ಸೆ ನೀಡಿದೆ. ಶಿಂಧೆ ಯಾರನ್ನೂ ಭೇಟಿಯಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಲ್ಯಾಂಬೋರ್ಘಿನಿ ಅವಘಡ : ಮಗನ ಬೆನ್ನಿಗೆ ನಿಂತ ಉದ್ಯಮಿ ಮಿಶ್ರಾ
ಶೀಘ್ರ ₹3.25 ಲಕ್ಷ ಕೋಟಿಯ 114 ರಫೇಲ್‌ ಖರೀದಿ ಒಪ್ಪಂದ