ಮುಂಬೈ: ಕರ್ನಾಟಕದಲ್ಲಿ ವಾಹನ ದಟ್ಟಣೆ ತಡೆಗಟ್ಟಲು ಸುರಂಗ ಮಾರ್ಗ ನಿರ್ಮಾಣ ಮಾಡುವ ಕಾಂಗ್ರೆಸ್ ಸರ್ಕಾರದ ಪ್ರಸ್ತಾವ ಹಾಗೂ ಅದಕ್ಕೆ ವಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೇ, ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಮುಂಬೈನಲ್ಲಿ 70 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ.
ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು (ಎಂಎಂಆರ್‌ಡಿಎ) ನಗರದಲ್ಲಿ 70 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಿದೆ. 3 ಹಂತಗಳಲ್ಲಿ ಕಾಮಗಾರಿ ನಡೆಯಲಿದ್ದು, ಸದ್ಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸಲಹೆಗಾರರ ನೇಮಕಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಮರೈನ್ ಡ್ರೈವ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣದವರೆಗೆ 16 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲಿದೆ.
2ನೇ ಹಂತದಲ್ಲಿ ಪೂರ್ವ ಮತ್ತು ಪಶ್ಚಿಮ ಹೆದ್ದಾರಿಯನ್ನು ಸಂಪರ್ಕಿಸುವ 10 ಕಿ.ಮೀ. ಉದ್ದದ ಮಾರ್ಗವನ್ನು ನಿರ್ಮಾಣ ಮಾಡಲಿದೆ. 3ನೇ ಮತ್ತು ಅಂತಿಮ ಹಂತವು ಸುಮಾರು 44 ಕಿ.ಮೀ.ನಷ್ಟು ವಿಸ್ತಾರವಾಗಿದ್ದು, ಉತ್ತರದಿಂದ ದಕ್ಷಿಣಕ್ಕೆ ಸುರಂಗವನ್ನು ನಿರ್ಮಿಸಲಿದೆ. ಇದು ಮುಂಬೈನಾದ್ಯಂತ ಸರಕು ಮತ್ತು ಪ್ರಯಾಣಿಕರಿಗೆ ಯಾವುದೇ ಅಡೆತಡೆಯಿಲ್ಲದೆ ಸುಗಮ ಸಂಚಾರ ಒದಗಿಸುವ ನಿರೀಕ್ಷೆಯಿದೆ.