ದಾಖಲೆ, ಹಣ ವಶಕ್ಕೆ ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ತನ್ನ ದಾಳಿ ಮುಂದುವರೆಸಿರುವ ಎನ್‌ಐಎ, ಬುಧವಾರ 6 ರಾಜ್ಯಗಳ 20 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಬಿಹಾರ ರ್‍ಯಾಲಿ ವೇಳೆ ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಈ ದಾಳಿ ನಡೆಸಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡು ಮತ್ತು ಮಧ್ಯಪ್ರದೇಶದ 20 ಸ್ಥಳಗಳಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಹಣ ಮತ್ತು ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ. ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮೋದಿ ಅವರ ಪಟನಾ ಕಾರ್ಯಕ್ರಮದ ವೇಳೆ ಉಗ್ರರು ಸ್ಫೋಟಕ್ಕೆ ಸಂಚು ರೂಪಿಸಿದ್ದು ಬೆಳಕಿಗೆ ಬಂದು ಎನ್‌ಐಎ ಪ್ರಕರಣ ದಾಖಲಿಸಿತ್ತು. ಜೊತೆಗೆ ಹಲವರನ್ನು ಬಂಧಿಸಿ ತನಿಖೆ ನಡೆಸುತ್ತಿದೆ.