ದೇಶವ್ಯಾಪಿ ವೈದ್ಯರ ರಕ್ಷಣೆಗೆ ಆಸ್ಪತ್ರೆಗಳಲ್ಲಿ ರಾತ್ರಿ ಪಹರೆ, ಸಿಸಿಟೀವಿ : ಕೇಂದ್ರ

KannadaprabhaNewsNetwork |  
Published : Aug 29, 2024, 12:47 AM ISTUpdated : Aug 29, 2024, 05:05 AM IST
ವೈದ್ಯರು | Kannada Prabha

ಸಾರಾಂಶ

ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣದ ಬೆನ್ನಲ್ಲೇ, ದೇಶವ್ಯಾಪಿ ವೈದ್ಯರ ಸುರಕ್ಷತೆಗೆ ಕೇಂದ್ರ ಸರ್ಕಾರ ಹಲವು ತುರ್ತು ಕ್ರಮಗಳನ್ನು ಪ್ರಕಟಿಸಿದೆ.

ನವದೆಹಲಿ: ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣದ ಬೆನ್ನಲ್ಲೇ, ದೇಶವ್ಯಾಪಿ ವೈದ್ಯರ ಸುರಕ್ಷತೆಗೆ ಕೇಂದ್ರ ಸರ್ಕಾರ ಹಲವು ತುರ್ತು ಕ್ರಮಗಳನ್ನು ಪ್ರಕಟಿಸಿದೆ.

ವೈದ್ಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಇತ್ತೀಚಿನ ಸುಪ್ರೀಂಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಈ ಕ್ರಮ ಪ್ರಕಟಿಸಿದೆ. ಜೊತೆಗೆ ವೈದ್ಯರ ಸುರಕ್ಷತೆ ಖಚಿತಪಡಿಸಲು ಕೂಡಲೇ ಕೆಲವು ತುರ್ತು ಕ್ರಮ ಜಾರಿಗೆ ರಾಜ್ಯಗಳಿಗೂ ಸೂಚನೆ ನೀಡಿದೆ.ಅದರನ್ವಯ ತಕ್ಷಣವೇ ದೇಶಾದ್ಯಂತ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಭದ್ರತಾ ಪರಿಶೀಲನೆ ನಡೆಸಬೇಕು, ದೊಡ್ಡ ಆಸ್ಪತ್ರೆಗಳಲ್ಲಿ ರಾತ್ರಿ ಪಹರೆ ನಡೆಸಬೇಕು, ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಪ್ರಮಾಣದ ಸಿಸಿಟೀವಿ ಅಳವಡಿಸಬೇಕು, ಆಸ್ಪತ್ರೆಗಳಲ್ಲಿ ಬಳಕೆಯಾಗದೇ ಇರುವ ಕೊಠಡಿ, ಪ್ರದೇಶಗಳ ಕುರಿತ ಮಾಹಿತಿ ಕಲೆ ಹಾಕಬೇಕು.

 ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಿ ಮನೆಗೆ ತೆರಳುವ ಮಹಿಳಾ ವೈದ್ಯರಿಗೆ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದ, ಕೋರ್ಟ್ ನೇಮಿತ ರಾಷ್ಟ್ರೀಯ ಕಾರ್ಯಪಡೆ ಸೂಚಿಸಿದೆ.ಇದೆ ವೇಳೆ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಸುರಕ್ಷತೆಯಲ್ಲಿ ಕಾರ್ಯನಿರ್ವಹಿಸಲು ಅನುವಾಗುವಂತೆ ರಾಜ್ಯಗಳು ವಿನೂತನ ಯೋಜನೆಗಳನ್ನು ಮುಂದಿಡಬೇಕು ಎಂದೂ ಕೇಂದ್ರ ಸರ್ಕಾರ ಸಲಹೆ ನೀಡಿದೆ.ಈ ನಡುವೆ ಸಭೆಯಲ್ಲಿ ಭಾಗಿಯಾಗಿದ್ದ ಕರ್ನಾಟಕ ಸೇರಿ 26 ರಾಜ್ಯಗಳ ಹಿರಿಯ ಅಧಿಕಾರಿಗಳು, ಈಗಾಗಲೇ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ತಮ್ಮ ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿರುವ ಭದ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಏನೇನು ತುರ್ತು ಕ್ರಮ?

1. ರಾತ್ರಿ ವೇಳೆ ಮನೆಗೆ ತೆರಳುವ ಮಹಿಳಾ ವೈದ್ಯರಿಗೆ ಮನೆ ತಲುಪುವವರೆಗೂ ಬಿಗಿ ಭದ್ರತೆ ಒದಗಿಸಬೇಕು

2. ದೇಶದ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ರಾತ್ರಿ ವೇಳೆ ಸ್ಥಳೀಯ ಪೊಲೀಸರಿಂದ ಭದ್ರತಾ ಗಸ್ತು ಕಡ್ಡಾಯ

3. ಆಸ್ಪತ್ರೆಗಳ ‘ಬ್ಲಾಕ್‌ ಸ್ಪಾಟ್‌’ಗಳಲ್ಲಿ ಸಿಸಿಟೀವಿ ಅಳವಡಿಕೆ, ವೈದ್ಯ ಸಿಬ್ಬಂದಿಗೆ 112 ಸಹಾಯವಾಣಿ ಸೇವೆ

4. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಹಾಗೂ ಸೇವಾ ಸಿಬ್ಬಂದಿ ಹಿನ್ನೆಲೆ ಕುರಿತು ಪೊಲೀಸರು ಪರಿಶೀಲಿಸಬೇಕು

5. ಆಸ್ಪತ್ರೆಗಳಲ್ಲಿರುವ ಭದ್ರತಾ ಸೌಲಭ್ಯ ಕುರಿತು ಡೀಸಿ, ಎಸ್ಪಿ, ಜಿಲ್ಲಾಸ್ಪತ್ರೆಗಳು ಜಂಟಿ ಪರಿಶೀಲನೆ ನಡೆಸಬೇಕು

6. ಪ್ರಸ್ತುತ ಇರುವ ಸುರಕ್ಷತೆ, ಮೂಲಸೌಕರ್ಯ ಕುರಿತು ಪರಿಶೀಲಿಸಿ ಕೊರತೆಗಳಿಗೆ ಪರಿಹಾರ ಸೂಚಿಸಬೇಕು

7. ಬೃಹತ್‌ ವೈದ್ಯಕೀಯ ಸಂಸ್ಥೆಗಳಲ್ಲಿ ಕಂಟ್ರೋಲ್‌ ರೂಮ್‌ ಸ್ಥಾಪನೆ, ಸಿಸಿಟೀವಿ, ಡೇಟಾ ಸುರಕ್ಷಿತ ಸಂಗ್ರಹಣೆ

8. ಕಾಲಕಾಲಕ್ಕೆ ಆಸ್ಪತ್ರೆಗಳಲ್ಲಿ ಭದ್ರತಾ ತಪಾಸಣೆಯ ಅಣಕು ಕಾರ್ಯಾಚರಣೆ ನಡೆಸಿ ಸನ್ನದ್ಧತೆ ಪರಿಶೀಲನೆ

9. ಪರಿಸ್ಥಿತಿ ನಿರ್ವಹಣೆ, ಕರ್ತವ್ಯ ನಿರ್ವಹಣೆ ಸಾಮರ್ಥ್ಯ ವೃದ್ಧಿ ಬಗ್ಗೆ ಭದ್ರತಾ ಸಿಬ್ಬಂದಿಗೆ ಸೂಕ್ತ ತರಬೇತಿ

10. ಸುರಕ್ಷತೆಯ ಮೇಲ್ವಿಚಾರಣೆಗೆ ವೈದ್ಯರ ಸಮಿತಿ ರಚನೆ । ಸ್ಥಾನಿಕ ವೈದ್ಯರ ಕರ್ತವ್ಯ ಅವಧಿ ಇಳಿಕೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ