ಸಾಲಗಾರರಿಗೆ ಬೆಳಗ್ಗೆ 8ಕ್ಕೆ ಮುನ್ನ ಕರೆ ಮಾಡುವಂತಿಲ್ಲ!

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಹೊಸ ನಿಯಮ ಜಾರಿಗೆ ಆರ್‌ಬಿಐ ಸಿದ್ಧತೆ . ಸಂಜೆ 7ರ ನಂತರವೂ ಕಿರಿಕಿರಿ ನಿಷಿದ್ಧ. ಸಾಲ ವಸೂಲಿಗೆ ಬ್ಯಾಂಕುಗಳಿಂದ ಹೊರಗುತ್ತಿಗೆ ಸಿಬ್ಬಂದಿ ನೇಮಕ. ಅವರಿಂದ ಸಾಲಗಾರರಿಗೆ ಕಿರಿಕಿರಿ ಹಿನ್ನೆಲೆ: ಆರ್‌ಬಿಐನಿಂದ ಪ್ರಸ್ತಾಪ
- ಸಾಲ ವಸೂಲಿಗೆ ಬ್ಯಾಂಕುಗಳಿಂದ ಹೊರಗುತ್ತಿಗೆ ಸಿಬ್ಬಂದಿ ನೇಮಕ - ಅವರಿಂದ ಸಾಲಗಾರರಿಗೆ ಕಿರಿಕಿರಿ ಹಿನ್ನೆಲೆ: ಆರ್‌ಬಿಐನಿಂದ ಪ್ರಸ್ತಾಪ == ಮುಂಬೈ: ಸಾಲ ವಸೂಲಾತಿಗಾಗಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ಪಡೆದವರಿಗೆ ಬೆಳಗ್ಗೆ 8 ಗಂಟೆಗೂ ಮೊದಲು ಹಾಗೂ ಸಾಯಂಕಾಲ 7 ಗಂಟೆಯ ನಂತರ ಕರೆ ಮಾಡುವಂತಿಲ್ಲ ಎಂಬ ನಿಯಮ ಜಾರಿ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಸ್ತಾಪ ಮಂಡಿಸಿದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡದವರಿಂದ ವಸೂಲಿ ಮಾಡುವುದಕ್ಕಾಗಿ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹೊರಗುತ್ತಿಗೆ ಆಧಾರದಲ್ಲಿ ಹಲವರನ್ನು ನೇಮಕ ಮಾಡಿಕೊಂಡಿವೆ. ಇವರಿಂದ ವಸೂಲಾತಿ ಸಮಯದಲ್ಲಿ ಸಮಸ್ಯೆಯಾಗುತ್ತಿದೆ ಹಾಗೂ ಗ್ರಾಹಕರ ಹಿತರಕ್ಷಣೆಗಾಗಿ ಈ ನಿಯಮ ಜಾರಿ ಮಾಡಲು ಬ್ಯಾಂಕ್‌ ಸೂಚಿಸಿದೆ. ಈ ಪ್ರಸ್ತಾಪವನ್ನು ರಿಸರ್ವ್‌ ಬ್ಯಾಂಕ್‌ನ ಮಂಡಳಿ ಎದುರು ಮಂಡಿಸಿ ಒಪ್ಪಿಗೆ ಪಡೆದ ಬಳಿಕ ಜಾರಿ ಮಾಡಲಾಗುತ್ತದೆ. ಸಾಲ ವಸೂಲಾತಿಗಾರರಿಗೆ ಸರಿಯಾದ ತರಬೇತಿ ನೀಡಬೇಕು. ಅವರು ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಎಚ್ಚರಿಕೆ ವಹಿಸಬೇಕು. ಸಾಲ ವಸೂಲಾತಿಯ ಸಮಯದಲ್ಲಿ ಸಾಲಗಾರರು ಅಥವಾ ಅವರ ಕುಟುಂಬದವರ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಬಾರದು. ಅಲ್ಲದೇ ಯಾವುದೇ ಸಮಂಜಸವಲ್ಲದ ಮೆಸೇಜ್‌ ಕಳುಹಿಸುವುದಾಗಲೀ, ಬೆದರಿಕೆ ಒಡ್ಡುವುದನ್ನಾಗಲೀ ಮಾಡಬಾರದು ಎಂದು ಆರ್‌ಬಿಐ ಹೇಳಿದೆ.

Share this article