ಕರ್ನಾಟಕದಲ್ಲಿ ಆತಂಕ ಎದುರಿಸುತ್ತಿರುವಾಗಲೇ ಕೇರಳದಲ್ಲೂ ವಕ್ಫ್‌ ವರಾತ : 600 ಕುಟುಂಬಗಳಿಗೆ ಸಂಕಷ್ಟ

KannadaprabhaNewsNetwork | Updated : Nov 04 2024, 05:49 AM IST

ಸಾರಾಂಶ

ಕರ್ನಾಟಕದಲ್ಲಿ ಸಾವಿರಾರು ರೈತರು ವಕ್ಫ್‌ ಕಾಯ್ದೆಯಿಂದಾಗಿ ಭೂಮಿ ಕಳೆದುಕೊಳ್ಳುತ್ತಿರುವ ಆತಂಕ ಎದುರಿಸುತ್ತಿರುವಾಗಲೇ, ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮವೊಂದರ 610 ಕುಟುಂಬಗಳು ಕೂಡ ವಕ್ಫ್‌ ಮಂಡಳಿಯಿಂದಾಗಿ ಇದೀಗ ತಮ್ಮ 464 ಎಕರೆಯಷ್ಟು ಪೂರ್ಣ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿವೆ.

-ತಿರುವನಂತಪುರ: ಕರ್ನಾಟಕದಲ್ಲಿ ಸಾವಿರಾರು ರೈತರು ವಕ್ಫ್‌ ಕಾಯ್ದೆಯಿಂದಾಗಿ ಭೂಮಿ ಕಳೆದುಕೊಳ್ಳುತ್ತಿರುವ ಆತಂಕ ಎದುರಿಸುತ್ತಿರುವಾಗಲೇ, ನೆರೆಯ ಕೇರಳದ ಕೊಚ್ಚಿ ಸಮೀಪದ ಇಡೀ ಗ್ರಾಮವೊಂದರ 610 ಕುಟುಂಬಗಳು ಕೂಡ ವಕ್ಫ್‌ ಮಂಡಳಿಯಿಂದಾಗಿ ಇದೀಗ ತಮ್ಮ 464 ಎಕರೆಯಷ್ಟು ಪೂರ್ಣ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿವೆ.

ಹೀಗಾಗಿ ಮುನಂಬಂ ಹಾಗೂ ಅಕ್ಕಪಕ್ಕದ ಕೆಲ ಗ್ರಾಮಗಳ 600ಕ್ಕೂ ಹೆಚ್ಚು ಕುಟುಂಬಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಈ ವಿಷಯ ಇದೀಗ ವಯನಾಡು ಚುನಾವಣೆ ವೇಳೆಯೂ ಪ್ರತಿಧ್ವನಿಸಿದೆ. ವಿವಾದಿತ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿರುವ ಕೇರಳದ ಆಡಳಿತಾರೂಢ ಎಡಪಕ್ಷಗಳ ಎಲ್‌ಡಿಎಫ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಯುಡಿಎಫ್‌ ಮೈತ್ರಿಕೂಟ, ವಿವಾದಿತ ಜಮೀನು ವಕ್ಫ್‌ ಮಂಡಳಿಗೆ ಸೇರಿಲ್ಲವೆಂದು ಹೇಳುತ್ತಿವೆಯಾದರೂ ನೇರವಾಗಿ ಜನರ ಪ್ರತಿಭಟನೆಗೆ ಕೈಜೋಡಿಸದೇ ದೂರ ಉಳಿದು ಜಾಣತನ ಪ್ರದರ್ಶಿಸಿವೆ.

ಮತ್ತೊಂದೆಡೆ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ಕ್ರೈಸ್ತ ಸಮುದಾಯದ ನೆರವಿಗೆ ಧಾವಿಸಿರುವ ಸ್ಥಳೀಯ ಚರ್ಚ್‌ಗಳು, ಜನರ ಹೋರಾಟಕ್ಕೆ ಬೆಂಬಲ ನೀಡಿದ್ದು ಕೇಂದ್ರದ ವಕ್ಫ್‌ ಮಂಡಳಿ ತಿದ್ದುಪಡಿ ಬೆಂಬಲಿಸಿವೆ.

ಏನಿದು ವಿವಾದ?:

1902ರಲ್ಲಿ ತಿರುವಾಂಕೂರು ರಾಜ, ಮೀನುಗಾರಿಕೆಗಾಗಿ ಗುಜರಾತ್‌ನಿಂದ ಕೇರಳಕ್ಕೆ ಬಂದಿದ್ದ ಅಬ್ದುಲ್‌ ಸತ್ತಾರ್‌ ಮೂಸಾ ಎಂಬುವವರಿಗೆ 464 ಎಕರೆ ಜಾಗ ನೀಡಿದ್ದರು. ಈ ನಡುವೆ 4 ದಶಕಗಳ ಅವಧಿಯಲ್ಲಿ ರಾಜ ನೀಡಿದ್ದ ಜಾಗದ ಪೈಕಿ ಸಾಕಷ್ಟು ಸಮುದ್ರ ಕೊರೆತದಿಂದ ನಾಶವಾಗಿತ್ತು. 1948ರಲ್ಲಿ ಸತ್ತಾರ್‌ ಅವರ ಉತ್ತರಾಧಿಕಾರಿ ಸಿದ್ಧಿಕಿ ಸೇಠ್‌, ಈ ಜಾಗವನ್ನು ನೋಂದಣಿ ಮಾಡಿಸಿದ ವೇಳೆ ಸ್ಥಳೀಯ ಮೀನುಗಾರರ ಜಮೀನು ಕೂಡಾ ಅದರಲ್ಲಿ ಸೇರಿಕೊಂಡಿತ್ತು. ಜೊತೆಗೆ ನೋಂದಣಿ ವೇಳೆ ಅದು ಹೇಗೋ ವಕ್ಫ್‌ ಎಂಬ ಪದ ಕೂಡಾ ಸೇರಿಬಿಟ್ಟಿತ್ತು. ಈ ನಡುವೆ 1950ರಲ್ಲಿ ಸಿದ್ಧಿಕಿ ಈ ಜಾಗವನ್ನು ಫಾರೂಖ್‌ ಕಾಲೇಜು ನಿರ್ಮಾಣಕ್ಕೆ ದಾನವಾಗಿ ನೀಡಿದರು. ಈ ವೇಳೆ ಅದನ್ನು ಬೇರಾವ ಉದ್ದೇಶಕ್ಕೂ ಬಳಸದಂತೆ, ಬಳಸಿದರೆ ಅದು ಮೂಲ ಮಾಲೀಕರಿಗೆ ಹೋಗಲಿದೆ ಎಂದು ಷರತ್ತು ಹಾಕಲಾಗಿತ್ತು. ಇದಾದ 3 ವರ್ಷದಲ್ಲಿ ರಾಜ್ಯದಲ್ಲಿ ಹೊಸ ವಕ್ಫ್‌ ಕಾಯ್ದೆ ಜಾರಿಗೆ ಬಂದಿತ್ತು.

ಆದರೆ ಈ ಕಾಯ್ದೆ ಜಾರಿಗೂ ಮೊದಲೇ ಕಾಲೇಜು ಆಡಳಿತ ಮಂಡಳಿಯಿಂದ ನೂರಾರು ಕುಟುಂಬಗಳು ಹಣ ಕೊಟ್ಟು ಜಾಗ ಖರೀದಿ ಮಾಡಿ ದಾಖಲೆ ಪತ್ರ ಪಡೆದುಕೊಂಡಿದ್ದರು.

ಈ ನಡುವೆ 2019ರಲ್ಲಿ ಮುನಂಬಂ ಗ್ರಾಮ ತನಗೆ ಸೇರಿದ್ದು ಎಂದು ವಕ್ಫ್ ಮಂಡಳಿ ಘೋಷಿಸಿತು. ಆದಾದ ಬಳಿಕ ನಿಯಮದ ಅನ್ವಯ, ಪಂಚಾಯತ್‌ ವ್ಯಾಪ್ತಿಯಲ್ಲಿ ಜನರಿಂದ ಆಸ್ತಿ ತೆರಿಗೆ ಸಂಗ್ರಹಿಸಿದಂತೆ ತಡೆಯಾಜ್ಞೆಯನ್ನೂ ತಂತು. ಪರಿಣಾಮ, ಇದುವರೆಗೂ ಜನತೆ ತಮ್ಮ ಆಸ್ತಿಗೆ ತಾವು ತೆರಿಗೆಯನ್ನೂ ಕಟ್ಟಲಾಗದೇ ಯಾವುದೇ ಸಮಯದಲ್ಲಿ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ, ಈಗ ಇರುವ ವಕ್ಫ್‌ ಕಾಯ್ದೆ ರದ್ದುಪಡಿಸಿ ಕಾನೂನು ಬದ್ಧವಾಗಿ ತಾವು ಖರೀದಿಸಿದ ಆಸ್ತಿಯನ್ನು ತಮಗೆ ಉಳಿಸಿಕೊಡಿ ಎಂದು ಹೋರಾಟ ಆರಂಭಿಸಿದ್ದಾರೆ.

- ಗುಜರಾತ್‌ನಿಂದ ವಲಸೆ ಬಂದಿದ್ದ ಮೂಸಾ ಎಂಬುವರಿಗೆ 1902ರಲ್ಲಿ 464 ಎಕರೆ ನೀಡಿದ್ದ ತಿರುವಾಂಕೂರು ರಾಜ- ಮೂಸಾ ಉತ್ತರಾಧಿಕಾರಿಯಿಂದ ಈ ಜಾಗ ನೋಂದಣಿ. ಆ ವೇಳೆ ಮೀನುಗಾರರ ಆಸ್ತಿ ಕೂಡ ಅದರಲ್ಲಿ ಸೇರ್ಪಡೆ- ನೋಂದಣಿ ವೇಳೆ ವಕ್ಫ್‌ ಎಂಬ ಪದವೂ ನುಸುಳಿತ್ತು. 1950ರಲ್ಲಿ ಈ ಜಾಗವನ್ನು ಕಾಲೇಜಿಗೆ ದಾನ ನೀಡಲಾಗಿತ್ತು- ಕಾಲೇಜು ಆಡಳಿತ ಮಂಡಳಿಯಿಂದ ಜನರು ಜಾಗ ಖರೀದಿಸಿದ್ದರು. ಈ ಜಾಗ ತನಗೆ ಸೇರಿದ್ದೆಂದು ಈಗ ವಕ್ಫ್‌ ವಾದ- ಆಸ್ತಿ ತೆರಿಗೆ ಸಂಗ್ರಹಿಸದಂತೆ ತಡೆಯಾಜ್ಞೆ. ಯಾವುದೇ ಸಮಯದಲ್ಲಿ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಜನರು

Share this article