ನವದೆಹಲಿ: 7200 ಕೋಟಿ ರು.ನಷ್ಟು ಭಾರೀ ಮೊತ್ತದ ವಿದ್ಯುತ್ ಬಿಲ್ ಬಾಕಿಯನ್ನು ನ.7ರೊಳಗೆ ಪಾವತಿ ಮಾಡದೇ ಹೋದಲ್ಲಿ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತ ಮಾಡುವುದಾಗಿ ನೆರೆ ದೇಶಕ್ಕೆ ಅದಾನಿ ಪವರ್ ಕಂಪನಿ ಎಚ್ಚರಿಕೆ ನೀಡಿದೆ. ಹೀಗಾಗಿ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬಾಂಗ್ಲಾ ಮತ್ತಷ್ಟು ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದೆ.
ಈಗ ಭಾಗಶಃ ಪೂರೈಕೆ ಕಡಿತದ ಕಾರಣ ಬಾಂಗ್ಲಾದೇಶ ಗುರುವಾರ ಮತ್ತು ಶುಕ್ರವಾರದ ನಡುವೆ ರಾತ್ರಿ 1,600 ಮೆಗಾ ವ್ಯಾಟ್ ಗಿಂತ ಹೆಚ್ಚಿನ ವಿದ್ಯುತ್ ಕೊರತೆಯನ್ನು ವರದಿ ಮಾಡಿದೆ. ಹೀಗಾಗಿ ಈಗಾಗಲೇ ಕಡಿತದ ಎಫೆಕ್ಟ್ ದೇಶದಲ್ಲಿ ಆರಂಭವಾಗಿದ್ದು, ಹಲವಾರು ಗಂಟೆ ವಿದ್ಯುತ್ ಖೋತಾ ಆಗುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಬಿಕ್ಕಟ್ಟು ಏನು?:ಬಾಂಗ್ಲಾದೇಶಕ್ಕೆ ಜಾರ್ಖಂಡ್‌ನಲ್ಲಿರುವ ತನ್ನ ತಲಾ 800 ಮೆ.ವ್ಯಾ. ಸಾಮರ್ಥ್ಯದ 2 ಘಟಕಗಳ ಮೂಲಕ ಅದಾನಿ ಪವರ್, ವಿದ್ಯುತ್ ಪೂರೈಸುತ್ತದೆ. ಈಗ ಒಂದು ಘಟಕ ಪೂರ್ತಿ ವಿದ್ಯುತ್ ನಿಲ್ಲಿಸಿದ್ದು, ಇನ್ನೊಂದು ಘಟಕ ಕೇವಲ 500 ಮೆ.ವ್ಯಾ. ಮಾತ್ರ ಪೂರೈಸುತ್ತಿದೆ. ಹೀಗಾಗಿ ಅದಾನಿ 1100 ಮೆ.ವ್ಯಾ. ಪೂರೈಕೆ ನಿಲ್ಲಿಸಿದಂತಾಗಿದೆ.
ಈ ನಡುವೆ, ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆಗಳೂ ನಡೆದಿದವೆ ಎಂದು ಮೂಲಗಳು ಹೇಳಿವೆ.