ಎನ್‌ಡಿಎ ವಿರುದ್ಧ ವಿಪಕ್ಷಗಳಿಗೆ ಹಿನ್ನಡೆ

KannadaprabhaNewsNetwork |  
Published : Nov 30, 2026, 03:00 AM IST
ರಾಹುಲ್‌  | Kannada Prabha

ಸಾರಾಂಶ

ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ನಾಯಕರು ನಡೆಸಿದ ಕೊನೆಯ ಹಂತದ ಯತ್ನವು ವಿಫಲಗೊಂಡಿದೆ. ಎನ್‌ಸಿಪಿ (ಎಸ್ಪಿ) ನಾಯಕ ಶರದ್‌ ಪವಾರ್‌ ಜತೆಗಿನ ಸಭೆ ಕೂಡ ಫಲಿಸಿಲ್ಲ ಎನ್ನಲಾಗಿದೆ.

==

ಇಂಡಿಯಾ ಸುತ್ತಿದ್ರೂಇಂಡಿಯಾ ಕೂಟಕ್ಕೆಸಿಗಲಿಲ್ಲ ಬೆಂಬಲ!- ಸ್ಟಾಲಿನ್‌, ಶರದ್‌ ಪವಾರ್‌ ಮನವೊಲಿಸಲುವಿಪಕ್ಷ ನಾಯಕರ ದಂಡೇ ಚೆನ್ನೈ, ಮುಂಬೈಗೆ- ಸೋನಿಯಾ ಬಂದ್ರೂ ಮಣಿಯದ ನಾಯಕರು

ನಮಗೆ ಬೇರೆ

ಆಯ್ಕೆ ಇಲ್ಲ

ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಸೋಲು ಆದರೆ, ತಮಿಳುನಾಡಿಗೆ ಸಿಗುವ ಅತಿ ಕನಿಷ್ಠ ರಕ್ಷಣೆಗೂ ಸೋಲಾಗುತ್ತದೆ. ಈ ವಿಧೇಯಕವನ್ನು ಬೆಂಬಲಿಸದೆ ನಮಗೆ ಬೇರೆ ಆಯ್ಕೆಯೇ ಇಲ್ಲ. ಪರ್‍ಯಾಯವಾದ ಹಾದಿಯನ್ನು ವಿಪಕ್ಷಗಳೂ ಸೂಚಿಸಿಲ್ಲ. ನಮಗೆ ತಮಿಳುನಾಡೇ ಮೊದಲು.

- ಎಂ.ಕೆ. ಸ್ಟಾಲಿನ್‌, ಡಿಎಂಕೆ ನಾಯಕ

--ಪಿಟಿಐ ಚೆನ್ನೈ/ಮುಂಬೈ

ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ನಾಯಕರು ನಡೆಸಿದ ಕೊನೆಯ ಹಂತದ ಯತ್ನವು ವಿಫಲಗೊಂಡಿದೆ. ಎನ್‌ಸಿಪಿ (ಎಸ್ಪಿ) ನಾಯಕ ಶರದ್‌ ಪವಾರ್‌ ಜತೆಗಿನ ಸಭೆ ಕೂಡ ಫಲಿಸಿಲ್ಲ ಎನ್ನಲಾಗಿದೆ.

ಭಾನುವಾರ ಸಂಜೆ ಚೆನ್ನೈನ ತಮ್ಮ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸ್ಟಾಲಿನ್ ಅವರು ಮಸೂದೆಯನ್ನು ಬೆಂಬಲಿಸುವ ತಮ್ಮ ನಿಲುವನ್ನು ಬದಲಾಯಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಬಳಿಕ ಮುಂಬೈಗೆ ತೆರಳಿದ ಇಂಡಿಯಾ ನಾಯಕರಿಗೆ ಪವಾರ್‌ ಅವರಿಂದ ಇದೇ ಉತ್ತರ ಬಂತು ಎನ್ನಲಾಗಿದೆ.

ವಿಪಕ್ಷ ನಾಯಕರ ದಂಡೇ ಚೆನ್ನೈ, ಮುಂಬೈಗೆ:

22 ಲೋಕಸಭೆ ಹಾಗೂ 8 ರಾಜ್ಯಸಭೆ ಸದಸ್ಯರನ್ನು ಹೊಂದಿರುವ ಡಿಎಂಕೆ ಶನಿವಾರ ಮಸೂದೆ ಬೆಂಬಲಿಸುವ ನಿರ್ಧಾರ ಪ್ರಕಟಿಸಿತ್ತು. ಇದಕ್ಕೂ ಮುನ್ನ ಎನ್‌ಸಿಪಿ (ಶರದ್‌ ಪವಾರ್‌ ಬಣ) ಕೂಡ ಬೆಂಬಲ ಘೋಷಿಸಿತ್ತು. ಇದು ಎನ್‌ಡಿಎಗೆ 3ನೇ 2ರಷ್ಟು ಬಹುಮತ ಬರುವ ಸಾಧ್ಯತೆ ಹೆಚ್ಚಿಸಿತು.

ಹೀಗಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕರ್ನಾಟಕದ ಸಿಎಂ ಡಿ. ಕೆ. ಶಿವಕುಮಾರ್ ಸೇರಿ ಮೈತ್ರಿಕೂಟದ ಹಲವು ಅಗ್ರ ನಾಯಕರು 2 ವಿಮಾನಗಳಲ್ಲಿ ಮೊದಲು ದಿಲ್ಲಿಯಿಂದ ಚೆನ್ನೈಗೆ ಭೇಟಿ ನೀಡಿದರು. ಚೆನ್ನೈನ ಸ್ಟಾಲಿನ್ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ಚರ್ಚಿಸಿದರು. ಇದಾದ ನಂತರ ರಾತ್ರಿ ಚೆನ್ನೈನಿಂದ ಮುಂಬೈಗೆ ತೆರಳಿ ಶರದ್‌ ಪವಾರ್ ಚಿಕಿತ್ಸೆ ಪಡೆಯುತ್ತಿರುವ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ತೆರಳಿ ಸಮಾಲೋಚನೆ ನಡೆಸಿದರು.

ರಾಹುಲ್‌ ಆತಂಕ:

ಚೆನ್ನೈನಲ್ಲಿ ಮಾತನಾಡಿದ ರಾಹುಲ್, ‘ಲೋಕಸಭೆಯ ಸೀಟುಗಳನ್ನು 850ಕ್ಕೆ ಹೆಚ್ಚಿಸುವ ಈ ಮಸೂದೆಯಿಂದಾಗಿ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದ್ದು, ಬಿಜೆಪಿ ತನಗೆ ಬೇಕಾದಂತೆ ಚುನಾವಣಾ ನಕ್ಷೆಯನ್ನು ಮರುರೂಪಿಸಲು ಇದು ಅನಿಯಮಿತ ಅವಕಾಶ ನೀಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಟಾಲಿನ್ ತಿರಸ್ಕಾರ:

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟಾಲಿನ್, ‘ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುವ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ತಮಿಳುನಾಡಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರ ಕೈಗೊಂಡಿದ್ದೇವೆ. ಹೊಸ ಮಸೂದೆಯಲ್ಲಿ ಡಿಎಂಕೆ ಆರಂಭದಿಂದಲೂ ಮಂಡಿಸಿದ್ದ ಬೇಡಿಕೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಬಿಲ್ ವಿರೋಧಿಸಿದರೆ ತಮಿಳುನಾಡಿಗೆ ಸಿಗಲಿರುವ ರಕ್ಷಣೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಹಾಗೂ ಸೀಟುಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಎಲ್ಲ ದಕ್ಷಿಣ ರಾಜ್ಯಕ್ಕೆ ಅನುಕೂಲವಾಗಲಿದೆ. ನಮಗೇ ತಮಿಳುನಾಡೇ ಮೊದಲು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಲೋಕಸಭೆ, ವಿಧಾನಸಭೆ ಸೀಟು 50% ಹೆಚ್ಚಿಸಿಮಹಿಳಾ ಮೀಸಲು ಕಲ್ಪಿಸುವ ಬಿಲ್‌ಗೆ ಕ್ಷಣಗಣನೆ
ಕಡುವಿರೋಧಿ ಡಿಎಂಕೆ, ಎನ್‌ಸಿಪಿಗೆ ಗಾಳ