ಕ್ಷೇತ್ರ ಮರುವಿಂಗಡಣೆ ಮಸೂದೆ ಪರವಾಗಿ ವಿಪಕ್ಷ ನಾಯಕರಾದ ಶರದ್‌ ಪವಾರ್‌, ಡಿಎಂಕೆಯ ಸ್ಟಾಲಿನ್‌, ಜೆಎಂಎಂನ ಹೇಮಂತ್‌ ಸೊರೇನ್‌ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ, ಇದಕ್ಕಾಗಿ ಕಳೆದ ಒಂದು ವರ್ಷದಿಂದ ರಹಸ್ಯ ಕಾರ್ಯಾಚರಣೆ ನಡೆಸಿತ್ತು.

ಬಿಜೆಪಿಯ 1 ವರ್ಷ ತೆರೆಮರೆಸೀಕ್ರೆಟ್‌ ಆಪರೇಷನ್‌ ಯಶ!- ವಿಪಕ್ಷದ ಕಳವಳ ದೂರ ಮಾಡಿ, ಬೇಡಿಕೆಗೆ ಸಮ್ಮತಿ- ಕಾಂಗ್ರೆಸ್‌ಗೆ ತಿಳಿದಂತೆಯೇ ರಹಸ್ಯ ಕಾರ್ಯಚರಣೆ

ತೆರೆಮರೆಯ ಮಾತುಕತೆ

- ಕ್ಷೇತ್ರ ಮರುವಿಂಗಡಣೆ ನಡೆಸುವ ರೀತಿ ಬಗ್ಗೆ ವಿಪಕ್ಷಗಳಿಗೆ ಆಕ್ಷೇಪ

- ಈ ಆಕ್ಷೇಪ ದೂರ ಮಾಡಲು ರಹಸ್ಯವಾಗಿ ಬಿಜೆಪಿಗರ ಮಾತುಕತೆ

- 2011ರ ಜನಗಣತಿ ಆಧರಿಸಿದರೆ ನಷ್ಟ ಎಂದು ಸ್ಟಾಲಿನ್‌ ಕಳವಳ

- ಈ ಆತಂಕ ದೂರ ಮಾಡಲು ಶೇ.50ರಷ್ಟು ಸೀಟು ಏರಿಕೆ ಪ್ರಸ್ತಾಪ

- ಇತರೆ ಪಕ್ಷಗಳಿಗೂ ಇದೇ ಅಂಶ ಮನದಟ್ಟು ಮಾಡಿದ ಬಿಜೆಪಿಗರು

- ಜೊತೆಗೆ ಇಂಥದ್ದೊಂದು ಬದಲಾವಣೆಯ ಅಗತ್ಯದ ಬಗ್ಗೆ ಅರಿವು

- ಕಾಂಗ್ರೆಸ್‌ಗೆ ಗೊತ್ತಾಗದಂತೆಯೇ ರಹಸ್ಯವಾಗಿ ಕಾರ್ಯಾಚರಣೆ

ನವದೆಹಲಿ: ಕ್ಷೇತ್ರ ಮರುವಿಂಗಡಣೆ ಮಸೂದೆ ಪರವಾಗಿ ವಿಪಕ್ಷ ನಾಯಕರಾದ ಶರದ್‌ ಪವಾರ್‌, ಡಿಎಂಕೆಯ ಸ್ಟಾಲಿನ್‌, ಜೆಎಂಎಂನ ಹೇಮಂತ್‌ ಸೊರೇನ್‌ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ, ಇದಕ್ಕಾಗಿ ಕಳೆದ ಒಂದು ವರ್ಷದಿಂದ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ನೀಟ್‌, ಎಸ್‌ಐಆರ್‌, ಜಿರಳೆ ಪಕ್ಷದ ಹೋರಾಟ ಸೇರಿ ವಿವಿಧ ವಿಷಯಗಳಲ್ಲಿ ಒಂದಾಗಿದ್ದ ಇಂಡಿಯಾ ಕೂಟದ ಪಕ್ಷಗಳನ್ನೇ ಒಡೆಯುವಲ್ಲಿ ಯಶಸ್ವಿಯಾದ ಬಿಜೆಪಿಯ ಈ ತಂತ್ರಗಾರಿಕೆ, ಮಸೂದೆ ಅಂಗೀಕಾರಕ್ಕಾಗಿ ಅದರ ಪರಿಶ್ರಮಕ್ಕೆ ಒಂದು ಉದಾಹರಣೆ ಎಂದು ವಿಶ್ಲೇಷಿಸಲಾಗಿದೆ.ಕಳೆದ ಏಪ್ರಿಲ್‌ನಲ್ಲಿ ಮಸೂದೆ ಮಂಡನೆಗೆ ಮೊದಲೇ ಡಿಎಂಕೆ ಬಳಿ ಬಿಜೆಪಿ ಬೆಂಬಲ ಯಾಚಿಸಿತ್ತು. ಆದರೆ ಮೇ ತಿಂಗಳಲ್ಲಿ ನಡೆವ ವಿಧಾನಸಭಾ ಚುನಾವಣೆ ಇರುವಾಗ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಮಸೂದೆಗೆ ಬೆಂಬಲ ವ್ಯಕ್ತಪಡಿಸುವುದು ರಾಜ್ಯ ರಾಜಕೀಯದಲ್ಲಿ ಭಾರೀ ಹಿನ್ನಡೆ ಆಗಬಹುದು ಎಂದು ಆಗ ಕ್ಷೇತ್ರ ಮರುವಿಂಗಡಣೆ ಬಿಲ್‌ ಬೆಂಬಲಕ್ಕೆ ಡಿಎಂಕೆ ನಿರಾಕರಿಸಿತ್ತು. ಪರಿಣಾಮ ಅಗತ್ಯ ಬಹುಮತದ ಕೊರತೆಯಿಂದಾಗಿ ಲೋಕಸಭೆಯಲ್ಲಿ ಮಸೂದೆ ಸೋಲು ಕಂಡಿತ್ತು. ಇದರ ಹೊರತಾಗಿಯೂ ಬಿಜೆಪಿ ಡಿಎಂಕೆ ಜೊತೆಗೆ ಹಿಂಬಾಗಿಲ ಮಾತುಕತೆ ಮುಂದುವರೆಸಿತ್ತು.

ಜೊತೆಗೆ, ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂಬ ಆತಂಕ ತಮಿಳುನಾಡಿನ ಡಿಎಂಕೆ ಪಕ್ಷಕ್ಕಿತ್ತು. ಇದನ್ನು ನಿವಾರಿಸಲು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ವಿಧಿಸಿದ್ದ 2 ಪ್ರಮುಖ ಬೇಡಿಕೆಗಳನ್ನು ಪರಿಷ್ಕೃತ ಮಸೂದೆಯಲ್ಲಿ ಸೇರಿಸುವ ಭರವಸೆಯನ್ನು ಡಿಎಂಕೆ ನಾಯಕರಿಗೆ ಬಿಜೆಪಿ ನೀಡಿತ್ತು.

- ಮೊದಲನೆಯದಾಗಿ, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುಹಂಚಿಕೆ ಮಾಡುವ ಬದಲು, ದೇಶದ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಾಲಿ ಇರುವ ಲೋಕಸಭಾ ಸ್ಥಾನಗಳನ್ನು ಶೇ. 50 ರಷ್ಟು ಹೆಚ್ಚಿಸಲು ಒಪ್ಪಿದೆ. ಇದರಿಂದ ತಮಿಳುನಾಡಿನ ಪ್ರಸ್ತುತ ಪ್ರಾತಿನಿಧ್ಯದ ಪಾಲು (ಶೇ. 7.18) ಕಡಿಮೆಯಾಗುವುದಿಲ್ಲ. ಈ ವ್ಯವಸ್ಥೆಯಿಂದಾಗಿ ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ 39 ರಿಂದ 59ಕ್ಕೆ ಏರಲಿದೆ.

- ಎರಡನೆಯದಾಗಿ, 1971ರ ಜನಗಣತಿಯ ಅನುಪಾತದ ಆಧಾರದ ಮೇಲೆಯೇ ಮುಂದಿನ 25 ವರ್ಷಗಳವರೆಗೆ (ಅಂದರೆ 2051 ರವರೆಗೆ) ಈ ಸೀಟುಗಳ ಪ್ರಮಾಣವನ್ನು ಬದಲಾಯಿಸದೆ ಸ್ಥಿರವಾಗಿಡಲು (ಫ್ರೀಜ್‌) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಡಿಎಂಕೆ, ಮಸೂದೆಗೆ ಬೆಂಬಲ ಪ್ರಕಟಿಸಿದೆ.

ಪವಾರ್ ಮನವೊಲಿಕೆ:

ಎನ್‌ಸಿಪಿ ಒಡೆದ ಆರೋಪ ಬಿಜೆಪಿ ಮೇಲಿದ್ದರೂ ಅದು ಮಸೂದೆಗಾಗಿ ಶರದ್‌ ಪವಾರ್‌ ಬೆಂಬಲ ಪಡೆಯುವ ಪ್ರಕ್ರಿಯೆ ನಿಲ್ಲಿಸಲಿಲ್ಲ. ದೇಶದ ಹಿತದೃಷ್ಟಿಯಿಂದ ಮತ್ತು ಮಹಾರಾಷ್ಟ್ರದ ಸಂಸದೀಯ ಸ್ಥಾನಗಳ ಹೆಚ್ಚಳಕ್ಕೆ ಪೂರಕವಾಗಿರುವ ಕಾರಣ ಬಿಲ್‌ ಬೆಂಬಲಿಸುವಂತೆ ಹಿಂದೆಯೇ ಶರದ್ ಪವಾರ್‌ರನ್ನು ಬಿಜೆಪಿ ನಾಯಕರು ಕೋರಿದ್ದರು.

ಜೊತೆಗೆ ಅಜಿತ್‌ ಪವಾರ್‌ ಸಾವಿನ ಬಳಿಕ ಎನ್‌ಸಿಪಿ ಎರಡೂ ಬಣಗಳನ್ನು ಒಗ್ಗೂಡಿಸುವ ಯತ್ನವನ್ನು ಬಿಜೆಪಿ ಪಾಳಯ ಮಾಡಿತು. ಅದು ಕಡೆಯ ಹಂತದಲ್ಲಿ ಕೊಟ್ಟಿತ್ತಾದರೂ ಬಿಜೆಪಿಗರ ಬಗ್ಗೆ ಪವಾರ್‌ ಮುನಿಸು ದೂರ ಮಾಡುವಲ್ಲಿ ಫಲ ಕೊಟ್ಟಿತ್ತು.

ಮತ್ತೊಂದೆಡೆ, ರಾಜ್ಯದ ರೈತರಿಗೆ ನೆರವಾಗುವಂತೆ ಪವಾರ್‌ ನೇತೃತ್ವದ ಸಂಸದರ ನಿಯೋಗ ಕೆಲ ದಿನಗಳ ಹಿಂದೆ ನೇರವಾಗಿ ಮೋದಿ ಭೇಟಿ ಮಾಡಿದ್ದು, ಎರಡೂ ಪಕ್ಷಗಳ ನಡುವೆ ಏನೋ ನಡೆಯುತ್ತಿದೆ ಎಂಬ ಸುಳಿವು ನೀಡಿತ್ತು. ಅದರ ಬಳಿಕ ಇತ್ತೀಚೆಗೆ ಪವಾರ್‌ ಅನಾರೋಗ್ಯಕ್ಕೆ ತುತ್ತಾದ ವೇಳೆ ಸ್ವತಃ ಪ್ರಧಾನಿ ಮೋದಿಯೇ ಪವಾರ್‌ಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಇನ್ನು ನೀವು ವಿಶ್ರಾಂತ ಪಡೆದುಕೊಳ್ಳಿ, ದೇಶವನ್ನು ಮೋದಿ ಮತ್ತು ಸುಪ್ರಿಯಾ (ಪವಾರ್‌ ಪುತ್ರಿ)

ನೋಡಿಕೊಳ್ಳುತ್ತಾರೆ ಎನ್ನುವ ಮೂಲಕ ಭವಿಷ್ಯದ ಸುಳಿವು ನೀಡಿದ್ದರು. ಹೀಗೆ ಪವಾರ್‌ ಅವರನ್ನು ಮಹತ್ವದ ವಿಷಯದಲ್ಲಿ ವಿಶ್ವಾಸಕ್ಕೆ ಪಡೆಯುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ.