;Resize=(412,232))
ನವದೆಹಲಿ: ಯುಪಿಐ ಮೇಲಿನ ಶುಲ್ಕಕ್ಕೆ ವಿಪಕ್ಷಗಳು ಮತ್ತು ವ್ಯಾಪಾರಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ, ಈ ನಿರ್ಧಾರವನ್ನು ಹಿಂಪಡೆಯುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಉನ್ನತ ಮೂಲಗಳು ಬುಧವಾರ ಸ್ಪಷ್ಟಪಡಿಸಿವೆ.
ಮುಂಬರುವ ಅ.15ರಿಂದ ಜಾರಿಗೆ ಬರಲಿರುವ ಈ ಪ್ರಸ್ತಾವಿತ ನಿರ್ಧಾರದ ಕುರಿತು ಮರುಪರಿಶೀಲನೆ ನಡೆಸುವ ಪ್ರಶ್ನೆಯೇ ಇಲ್ಲ ಮತ್ತು ಈ ಸಂಬಂಧ ಈಗಾಗಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾಗತಿಕವಾಗಿ ಇತರ ದೇಶಗಳಲ್ಲಿಯೂ ಇಂತಹ ಶುಲ್ಕ ಚಾಲ್ತಿಯಲ್ಲಿದ್ದು, 2020ರಲ್ಲಿ ಯುಪಿಐ ವ್ಯವಸ್ಥೆಯನ್ನು ಪರಿಚಯಿಸಿದಾಗಲೇ ಈ ರೀತಿಯ ಶುಲ್ಕ ವಿಧಿಸುವ ಕುರಿತು ಯೋಜನೆ ರೂಪಿಸಲಾಗಿತ್ತು. ಹೊಸ ಎಂಡಿಆರ್ ಚೌಕಟ್ಟು ಯುಪಿಐ ವ್ಯವಸ್ಥೆಯು ಆರ್ಥಿಕವಾಗಿ ಸುಸ್ಥಿರವಾಗಿ ಮುನ್ನಡೆಯಲು ನೆರವಾಗಲಿದೆ ಎಂದು ಸರ್ಕಾರಿ ಮೂಲಗಳು ಸಮರ್ಥಿಸಿಕೊಂಡಿವೆ.
ವಿದೇಶಗಳ ಒತ್ತಡಕ್ಕೆ ಒಳಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಕೇಂದ್ರದ ಹಣಕಾಸು ಸಚಿವಾಲಯ, ‘ಈ ಆರೋಪ ಪೂರ್ಣ ಸುಳ್ಳು. ಭಾರತದ ಯುಪಿಐ ನೀತಿಯ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲಾಗುತ್ತದೆ. ಸ್ವಾವಲಂವನೆ ಎಲ್ಲರನ್ನೂ ಒಳಗೊಂಡ, ಎಲ್ಲರಿಗೂ ಕೈಗೆಟುಕುವ ದರದ ಡಿಜಿಟಲ್ ಪಾವತಿ ವ್ಯವಸ್ಥೆ ರೂಪಿಸುವ ಗುರಿಯೊಂದಿಗೆ ಈ ಬದಲಾವಣೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, ‘ಇದು ಸರ್ಕಾರ ಅಥವಾ ಎನ್‌ಪಿಸಿಐ ಹೇರಿರುವ ಯಾವುದೇ ತೆರಿಗೆ ಅಥವಾ ಶುಲ್ಕವಲ್ಲ. ಪಾವತಿಗೆ ವಿಧಿಸುವ ಶುಲ್ಕವನ್ನು ವ್ಯವಸ್ಥೆಯ ಪಾಲುದಾರರಾದ ಬ್ಯಾಂಕ್, ಪೇಮೆಂಟ್ ಅಪ್ಲಿಕೇಷನ್ ಸೇವಾದಾರರ ನಡುವೆ ಹಂಚಲಾಗುತ್ತದೆ. ಜೊತೆಗೆ ಯುಪಿಐ ಸೇವೆ ಆರಂಭಿಸಿದಾಗಲೇ ಇದಕ್ಕೆ ಶುಲ್ಕ ವಿಧಿಸುವ ಕುರಿತು ಮಾಹಿತಿ ನೀಡಲಾಗಿತ್ತು’ ಎಂದು ಹೇಳಿದೆ.