;Resize=(412,232))
ನವದೆಹಲಿ: ‘ಜಿ7 ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ-ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾರತವು ಪತ್ರಕರ್ತರಿಂದ ಪ್ರಶ್ನೆ ಬಯಸಿರಲಿಲ್ಲ’ ಎಂಬ ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಹೇಳಿಕೆಗೆ ಕೇಂದ್ರ ಸರ್ಕಾರದ ಮೂಲಗಳು ಪ್ರತಿಕ್ರಿಯಿಸಿದ್ದು, ‘ಈ ರೀತಿಯ ಕೋರಿಕೆಗಳು ವಿವಿಐಪಿ ಭೇಟಿಯ ವೇಳೆ ನಡೆಯುವ ಶಿಷ್ಟಾಚಾರದ ಭಾಗಗಳಾಗಿವೆ’ ಎಂದಿವೆ.
ಸೋಮವಾರ ಮಾತನಾಡಿದ ಮೂಲಗಳು, ‘ಯಾವುದೇ ವಿವಿಐಪಿ ಭೇಟಿ ವೇಳೆ ಅನುಸರಿಸುವ ಪ್ರಮಾಣಿತ ಶಿಷ್ಟಾಚಾರವನ್ನು ಭಾರತದ ಕಡೆಯವರು ತಿಳಿಸುತ್ತಿರುತ್ತಾರೆ. ನಾಯಕರ ಭೇಟಿ ವೇಳೆ ಇಂಥ ಕೋರಿಕೆಗಳು ಶಿಷ್ಟಾಚಾರದ ಭಾಗ ಆಗಿರುತ್ತವೆ’ ಎಂದಿವೆ.
ಅಲ್ಲದೆ, ‘ಅಮೆರಿಕ ಅಧ್ಯಕ್ಷರನ್ನು ಭೇಟಿಯಾಗುವ ನಿಯೋಗಗಳು ಅವರ ‘ಅನಿರೀಕ್ಷಿತ ನಡವಳಿಕೆ’ಯ ಬಗ್ಗೆ ಎಚ್ಚರ ವಹಿಸುತ್ತವೆ. ದಕ್ಷಿಣ ಆಫ್ರಿಕಾ, ಉಕ್ರೇನ್ ಇತ್ಯಾದಿಗಳ ಅಧ್ಯಕ್ಷರ ಜತೆಗಿನ ಅವರ ಸಂವಹನದ ವೇಳೆ ಟ್ರಂಪ್ ಅವರ ಅನಿರೀಕ್ಷಿತ ವರ್ತನೆಯನ್ನು ಕಾಣಬಹುದು, ಅದಕ್ಕಾಗಿಯೇ ಭಾರತ ಎಚ್ಚರಿಕೆಯ ನಡೆ ಅನುಸರಿಸಿತು’ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ‘ಫ್ರಾನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳನ್ನು ತಪ್ಪಿಸುವಂತೆ ಅಮೆರಿಕವನ್ನು ಭಾರತ ನಿರ್ದಿಷ್ಟವಾಗಿ ಕೇಳಿಕೊಂಡಿತ್ತು. ಆದರೆ ನಂತರ ವಿನಂತಿಯನ್ನು ಮರೆತು ಪತ್ರಕರ್ತರಿಂದ ಪ್ರಶ್ನೆಗಳನ್ನು ಆಹ್ವಾನಿಸಿದರು’ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ.
ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಂನಲ್ಲಿ ಮಾತನಾಡಿದ ಗೋರ್, ‘ಭಾರತೀಯರು ಯಾವುದೇ ಪ್ರಶ್ನೆಗಳನ್ನು ಕೇಳಲು ಇಷ್ಟಪಡುವುದಿಲ್ಲ ಎಂದು ನಾನು ಆರಂಭದಲ್ಲೇ ಅಧ್ಯಕ್ಷರಿಗೆ ಹೇಳಿದೆ. ಅವರು, ‘ಖಂಡಿತ, ನೋ ಪ್ರಾಬ್ಲಂ’ ಎಂದು ಒಪ್ಪಿಕೊಂಡರು. ಆ ಪ್ರಕಾರ ಟ್ರಂಪ್ ಆರಂಭಿಕ ಹೇಳಿಕೆಯನ್ನಷ್ಟೇ ನೀಡಬೇಕಿತ್ತು. ಆದರೆ ನನ್ನ ವಿನಂತಿಯನ್ನು ಮರೆತರು. ಆರಂಭಿಕ ಹೇಳಿಕೆಗಳ ನಂತರ, ಟ್ರಂಪ್ ಕ್ಯಾಮೆರಾಗಳ ಕಡೆಗೆ ತಿರುಗಿ ‘ಯಾವುದೇ ಪ್ರಶ್ನೆಗಳಿವೆಯೇ?’ ಎಂದು ವರದಿಗಾರರನ್ನು ಕೇಳಿದರು. ಮೋದಿ ಅವರ ಪಕ್ಕದಲ್ಲಿ ಕುಳಿತಿದ್ದಾಗ 45 ನಿಮಿಷಗಳ ಪರಿಪೂರ್ಣ ಸಂವಾದ ಹಾಗೂ ಪತ್ರಿಕಾಗೋಷ್ಠಿ ನಡೆಯಿತು’ ಎಂದು ಹೇಳಿದರು.