ಇನ್ನು ಎಟಿಎಂನಲ್ಲೇ ಪಿಎಫ್‌ಹಣ ಹಿಂಪಡೆವ ಅವಕಾಶ

KannadaprabhaNewsNetwork |  
Published : Mar 26, 2025, 01:35 AM IST
ಎಟಿಎಂ | Kannada Prabha

ಸಾರಾಂಶ

ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಸಂಘಟನೆಯು ಗ್ರಾಹಕರಿಗೆ ಭವಿಷ್ಯ ನಿಧಿ (ಇಪಿಎಫ್‌) ಹಣವನ್ನು ಎಟಿಎಂ, ಯುಪಿಐ ಮೂಲಕ ಹಿಂಪಡೆಯುವ ಯೋಜನೆ ಮೇ ಅಂತ್ಯ ಜೂನ್‌ನಿಂದ ಜಾರಿಗೆ ಬರಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಸಂಘಟನೆಯು ಗ್ರಾಹಕರಿಗೆ ಭವಿಷ್ಯ ನಿಧಿ (ಇಪಿಎಫ್‌) ಹಣವನ್ನು ಎಟಿಎಂ, ಯುಪಿಐ ಮೂಲಕ ಹಿಂಪಡೆಯುವ ಯೋಜನೆ ಮೇ ಅಂತ್ಯ ಜೂನ್‌ನಿಂದ ಜಾರಿಗೆ ಬರಲಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಈವರೆಗೆ ಪಿಎಫ್‌ ಹಣ ಪಡೆಯಲು ಚಂದಾದಾರರು ಪಿಎಫ್‌ ಆಫೀಸಿಗೆ ಎಡತಾಕಬೇಕಿತ್ತು. ಇದನ್ನು ತಪ್ಪಿಸಲು ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್‌ ಹಣ ವಿಥ್‌ ಡ್ರಾ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಅನುಮೋದಿಸಿದೆ.ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತ್ರಾ ದಾವ್ರಾ ಮಾಹಿತಿ ನೀಡಿದ್ದು, ‘ಈ ವರ್ಷದ ಮೇ ಅಂತ್ಯ ಅಥವಾ ಜೂನ್‌ ವೇಳೆಗೆ ಪಿಎಫ್‌ ಗ್ರಾಹಕರು ಯುಪಿಐ ಮತ್ತು ಎಟಿಎಂ ಮೂಲಕ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಅವರು ತಮ್ಮ ಪಿಎಫ್‌ ಖಾತೆಯ ಬಾಕಿಯನ್ನು ನೇರವಾಗಿ ಯುಪಿಐನಲ್ಲಿ ನೋಡಬಹುದು. ಸ್ವಯಂ ಚಾಲಿತ ವ್ಯವಸ್ಥೆಯ ಮೂಲಕ ತಕ್ಷಣವೇ 1 ಲಕ್ಷ ರು.ವರೆಗೆ ತಮ್ಮ ಆದ್ಯತೆಯ ಬ್ಯಾಂಕ್ ಖಾತೆ ಮೂಲಕ ಹಿಂಪಡೆಯಲು ಮತ್ತು ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.

ಎಟಿಎಂ, ಯುಪಿಐ ಮೂಲಕ ಪಿಎಫ್ ಹಣವನ್ನು ಅನಾರೋಗ್ಯ, ವಸತಿ, ಶಿಕ್ಷಣ ಮತ್ತು ಮದುವೆ ಕಾರಣಗಳಿಗೆ ಹಿಂಪಡೆಯಬಹುದು.

==

ಮೇ 1ರಿಂದ ಎಟಿಎಂ ಹಣ ವಿತ್‌ಡ್ರಾ ಶುಲ್ಕ 2 ರು. ಹೆಚ್ಚಳ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿರುವುದರಿಂದ, ಮೇ 1 ರಿಂದ ಭಾರತದಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ.ಇದರರ್ಥ ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಮೇ 1ರಿಂದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರು. ಪಾವತಿಸಬೇಕಾಗುತ್ತದೆ.ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸಿನೇತರ ವಹಿವಾಟುಗಳಿಗೆ, ಶುಲ್ಕವು 1 ರು. ಹೆಚ್ಚಾಗುತ್ತದೆ. ಪರಿಣಾಮವಾಗಿ, ಎಟಿಎಂನಿಂದ ಹಣವನ್ನು ಹಿಂಪಡೆಯಲು ಪ್ರತಿ ವಹಿವಾಟಿಗೆ 19 ರು. ವೆಚ್ಚವಾಗಲಿದೆ, ಇದು ಹಿಂದಿನ 17 ರು.ಗಿಂತ 2 ರು. ಹೆಚ್ಚು,

ಎಟಿಎಂ ಇಂಟರ್ಚೇಂಜ್ ಶುಲ್ಕ ಎಂದರೆ ಎಟಿಎಂ ಸೇವೆಗಳನ್ನು ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವಾಗಿದೆ.

==

ಏ.1ರಿಂದ ಟೋಲ್‌ ದರದಲ್ಲಿ ಕೊಂಚ ವಿನಾಯ್ತಿ: ಗಡ್ಕರಿ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುಂಕ ಕೇಂದ್ರದಲ್ಲಿ ಪ್ರಯಾಣಿಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಏ.1ರ ಒಳಗೆ ಹೊಸ ಟೋಲ್‌ ಸುಂಕ ನೀತಿಯನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ ವಾಹನ ಸವಾರರಿಗೆ ರಿಯಾಯ್ತಿ ಇರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ನೀತಿಯಲ್ಲಿ ಪ್ರಯಾಣಿಕರಿಗೆ ಸ್ವಲ್ಪ ಪ್ರಮಾಣದಲ್ಲಿ ರಿಯಾಯ್ತಿ ದೊರೆಯುತ್ತದೆ. ಜೊತೆಗೆ ಸುಂಕ ವಸೂಲಿಯೂ ಸರಳೀಕರಿಸಲಾಗಿದೆ. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲದೆ ಎಂದು ಹೇಳಿದರು.

ಟೋಲ್‌ ಸಂಗ್ರಹದ ಬಗ್ಗೆ ಮಾಹಿತಿ ನೀಡಿದ ಅವರು, 2023-24ರಲ್ಲಿ 64,809.86 ಕೋಟಿ ರು. ಟೋಲ್‌ ಸಂಗ್ರಹವಾಗಿದೆ. ಇದು ಶೇ.35ರಷ್ಟು ವೃದ್ಧಿಯಾಗಿದೆ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ