ಉಗ್ರರ ವಿರುದ್ಧದ ಭಾರತದ ಹೋರಾಟಕ್ಕೆ ರಷ್ಯಾ ಬೆಂಬಲ

KannadaprabhaNewsNetwork |  
Published : May 24, 2025, 01:36 AM ISTUpdated : May 24, 2025, 05:11 AM IST
ಕನಿಮೋಳಿ | Kannada Prabha

ಸಾರಾಂಶ

ಪಹಲ್ಗಾಂ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ರಷ್ಯಾವು, ಭಯೋತ್ಪಾದನೆಯ ಮೇಲೋತ್ಪಾಟನೆ ವಿಚಾರದಲ್ಲಿ ಭಾರತದ ಜತೆಗೆ ನಿಲ್ಲುವುದಾಗಿ ಭರವಸೆ ನೀಡಿದೆ. ಇದರೊಂದಿಗೆ ಯುಎಇ ಹಾಗೂ ಜಪಾನ್‌ ಬಳಿಕ ಭಾರತಕ್ಕೆ ಪಾಕ್‌ ವಿರುದ್ಧ 3ನೇ ದೇಶದ ಬೆಂಬಲ ಸಿಕ್ಕಂತಾಗಿದೆ.

 ಮಾಸ್ಕೋ: ಪಹಲ್ಗಾಂ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ರಷ್ಯಾವು, ಭಯೋತ್ಪಾದನೆಯ ಮೇಲೋತ್ಪಾಟನೆ ವಿಚಾರದಲ್ಲಿ ಭಾರತದ ಜತೆಗೆ ನಿಲ್ಲುವುದಾಗಿ ಭರವಸೆ ನೀಡಿದೆ. ಇದರೊಂದಿಗೆ ಯುಎಇ ಹಾಗೂ ಜಪಾನ್‌ ಬಳಿಕ ಭಾರತಕ್ಕೆ ಪಾಕ್‌ ವಿರುದ್ಧ 3ನೇ ದೇಶದ ಬೆಂಬಲ ಸಿಕ್ಕಂತಾಗಿದೆ.

ಉಗ್ರ ಪೋಷಕ ಪಾಕಿಸ್ತಾನದ ನಿಜಬಣ್ಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಯಲು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿರುವ ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗಕ್ಕೆ ರಷ್ಯಾ ಈ ಭರವಸೆ ನೀಡಿದೆ.

ಪಾಕ್‌ ವಿರುದ್ಧದ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಅಭಿಯಾನದ ಭಾಗವಾಗಿ ಸರ್ವಪಕ್ಷಗಳ ಸಂಸದರ ಏಳು ನಿಯೋಗವನ್ನು ವಿಶ್ವದ ವಿವಿಧ ದೇಶಗಳಿಗೆ ಭಾರತವು ಕಳುಹಿಸಿಕೊಡುತ್ತಿದೆ. ಗುರುವಾರವಷ್ಟೇ ಜಪಾನ್‌, ಯುಎಇಗೆ ಎರಡು ನಿಯೋಗಗಳು ಭೇಟಿ ನೀಡಿದ್ದು, ಕನಿಮೋಳಿ ನೇತೃತ್ವದ ಮೂರನೇ ನಿಯೋಗವು ಶುಕ್ರವಾರ ಮಾಸ್ಕೋಗೆ ಭೇಟಿ ನೀಡಿದೆ. ಅಂತಾರಾಷ್ಟ್ರೀಯ ವ್ಯವಹಾರಗಳ ಉಪಾಧ್ಯಕ್ಷ ಆ್ಯಂಡ್ರೆ ಡೆನಿಸೋವ್‌ ಸೇರಿ ರಷ್ಯಾದ ಫೆಡರೇಷನ್‌ ಕೌನ್ಸಿಲ್‌ನ ಹಲವು ಸದಸ್ಯರ ಜತೆಗೆ ಭಯೋತ್ಪಾದನೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದೆ.

ಈ ವೇಳೆ ರಷ್ಯಾವು ಪಹಲ್ಗಾಂ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಲ್ಲದೆ, ಭಯೋತ್ಪಾದನೆ ವಿಚಾರದಲ್ಲಿ ಭಾರತದ ಅಂತಾರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿತು.

ಸಂಸದರಾದ ರಾಜೀವ್‌ ರೈ, ಬ್ರಿಜೇಶ್‌ ಚೌಟ, ಪ್ರೇಮ್‌ ಚಂದ್‌ ಗುಪ್ತಾ, ಅಲೋಕ್‌ ಕುಮಾರ್‌ ಮಿತ್ತಲ್‌, ರಾಯಭಾರಿ ಮಂಜೀವ್‌ ಪುರಿ ಅವರು ನಿಯೋಗದಲ್ಲಿದ್ದರು.

ರಷ್ಯಾ ಬಳಿಕ ಈ ನಿಯೋಗವು ಸ್ಲೊವೇನಿಯಾ, ಗ್ರೀಸ್‌, ಲಾಟ್ವಿಯಾ ಮತ್ತು ಸ್ಪೇನ್‌ಗೆ ಭೇಟಿ ನೀಡಲಿದೆ. ಪಹಲ್ಗಾಂ ದಾಳಿ ಮತ್ತು ಆ ಬಳಿಕ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲಿದೆ.

ಭಾರತ ನಿಯೋಗದ ವಿಮಾನಕ್ಕೆ ಉಕ್ರೇನ್‌ ಡ್ರೋನ್ ದಾಳಿ ಅಡ್ಡಿ

ಮಾಸ್ಕೋ: ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಹಾಗೂ ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್‌ ಚೌಟ ಇದ್ದ ಆಪರೇಷನ್ ಸಿಂದೂರ ನಿಯೋಗ ಇದ್ದ ವಿಮಾನ ಉಕ್ರೇನ್‌ ಡ್ರೋನ್‌ ದಾಳಿಯ ಕಾರಣ, ಮಾಸ್ಕೋ ಆಗಸದ ಮೇಲೆ 45 ನಿಮಿಷ ಸುತ್ತು ಹಾಕಿದ ಘಟನೆ ನಡೆದಿದೆ. ಬಳಿಕ ಸುರಕ್ಷಿತವಾಗಿ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಲ್ಯಾಂಡ್‌ ಆಗಿದೆ.

ಶುಕ್ರವಾರ ನಸುಕಿನಲ್ಲಿ ವಿಮಾನ ಮಾಸ್ಕೋ ಸಮೀಪಿಸಿದಾಗ ಉಕ್ರೇನ್ ಡ್ರೋನ್ ದಾಳಿ ನಡೆಸಿತು ಎಂದು ಹೇಳಲಾಗಿದೆ. ಇದರಿಂದಾಗಿ ಮಾಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು. ಇದರ ಪರಿಣಾಮ, ಕನಿಮೋಳಿ ಹಾಗೂ ಚೌಟ ಇದ್ದ ವಿಮಾನಕ್ಕೆ ಇಳಿಯಲು ಅನುಮತಿ ನಿರಾಕರಿಸಲಾಯಿತು. ಈ ಅಡಚಣೆಯ ಸಮಯದಲ್ಲಿ ಆಗಸದಲ್ಲೇ 45 ನಿಮಿಷ ಕಾಲ ವಿಮಾನ ಸುತ್ತಬೇಕಾಯಿತು.

ದೀರ್ಘ ವಿಳಂಬದ ನಂತರ, ವಿಮಾನವು ಅಂತಿಮವಾಗಿ ಸುರಕ್ಷಿತವಾಗಿ ಇಳಿಯಿತು. ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸರ್ವಪಕ್ಷ ಸಂಸದರ ನಿಯೋಗವನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು ಮತ್ತು ಅವರನ್ನು ಸುರಕ್ಷಿತವಾಗಿ ಅವರ ಹೋಟೆಲ್‌ಗೆ ಕರೆದೊಯ್ದರು.

ಏಪ್ರಿಲ್ 22ರ ಪಹಲ್ಗಾಂ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂದೂರದ ಬಗ್ಗೆ ಮಾಹಿತಿ ನೀಡಲು ಕನಿಮೋಳಿ ನೇತೃತ್ವದ ತಂಡ ರಷ್ಯಾ, ಸ್ಪೇನ್, ಗ್ರೀಸ್, ಸ್ಲೊವೇನಿಯಾ ಮತ್ತು ಲಾಟ್ವಿಯಾಗಳಿಗೆ ಪ್ರವಾಸ ಕೈಗೊಂಡಿದೆ. ಈ ತಂಡವು ಪಾಕಿಸ್ತಾನದ ಭಯೋತ್ಪಾದನೆ ಕುರಿತು ಭಾರತದ ನಿಲುವನ್ನು ಪ್ರಸ್ತುತಪಡಿಸುತ್ತದೆ.

ಉಗ್ರರ ವಿರುದ್ಧದ ಭಾರತ ಹೋರಾಟ ಬೆಂಬಲ: ಜರ್ಮನಿ

ನವದೆಹಲಿ: ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಭಾರತಕ್ಕೆ ಜಾಗತಿಕ ಬೆಂಬಲ ಸಿಗುತ್ತಿದ್ದು, ಈ ನಡುವೆ ಜರ್ಮನಿ ಕೂಡ ಭಾರತದ ಪರ ನಿಂತಿದ್ದು, ‘ಉಗ್ರರ ವಿರುದ್ಧ ಭಾರತದ ಹೋರಾಟವನ್ನು ಬೆಂಬಲಿಸುತ್ತೇವೆ’ ಎಂದಿದೆ.ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಸದ್ಯ ಜರ್ಮನಿ ಪ್ರವಾಸದಲ್ಲಿದ್ದು ಜರ್ಮನ್ ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದೇ ವೇಳೆ ಜೋಹಾನ್ ಭಾರತಕ್ಕೆ ಬೆಂಬಲ ಸೂಚಿಸಿದರು,

‘ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಜರ್ಮನಿ ಬೆಂಬಲಿಸುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ಭಯೋತ್ಪಾದನೆಗೆ ಸ್ಥಾನವಿಲ್ಲ. ಅದಕ್ಕಾಗಿ ನಾವು ಭಯೋತ್ಪಾದನೆ ವಿರುದ್ಧ ಹೋರಾಡುವ, ಹೋರಾಡಬೇಕಿರುವ ಪ್ರತಿಯೊಬ್ಬರನ್ನೂ ಬೆಂಬಲಿಸುತ್ತೇವೆ’ ಎಂದರು.ಅದೇ ವೇಳೆ ಸಚಿವ ಜೈಶಂಕರ್ ಅವರು ‘ಮೇ 7ರಂದು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿಯೇ ಸಚಿವರು ನಮ್ಮ ಜೊತೆ ಫೋನ್ ಸಂಭಾಷಣೆ ನಡೆಸಿ ಮಾತುಕತೆ ನಡೆಸಿದ್ದರು’ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ