ಪೋಕ್ಸೋ ಅಡಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಗೆ ಸುಪ್ರೀಂ ಮುಕ್ತಿ

KannadaprabhaNewsNetwork |  
Published : May 24, 2025, 01:35 AM ISTUpdated : May 24, 2025, 05:14 AM IST
ರೇಪ್  | Kannada Prabha

ಸಾರಾಂಶ

ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಕಾರಣ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಅಡಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯನ್ನು ತನ್ನ ವಿಶೇಷ ಅಧಿಕಾರ ಬಳಿಸಿಕೊಂದು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡಿದೆ.

 ನವದೆಹಲಿ: ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಕಾರಣ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಅಡಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿಯನ್ನು ತನ್ನ ವಿಶೇಷ ಅಧಿಕಾರ ಬಳಸಿಕೊಂದು ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡಿದೆ.

 ‘ಸಂತ್ರಸ್ತೆ ಅದನ್ನು (ಲೈಂಗಿಕ ಸಂಬಂಧವನ್ನು) ಅಪರಾಧವೆಂದು ಪರಿಗಣಿಸಲಿಲ್ಲ. ಆದರೆ ಆಕೆ ಸಮಾಜ, ಕಾನೂನು ವ್ಯವಸ್ಥೆ ಮತ್ತು ಪೊಲೀಸರಿಂದ ಕಷ್ಟ ಅನುಭವಿಸಬೇಕಾಯಿತು. ಮನೆಯವರೂ ಅವಳನ್ನು ಹೊರದಬ್ಬಿದರು. ಆದರೆ ಅವಳು ತನ್ನ ಪತಿಯನ್ನು ರಕ್ಷಿಸಲು ಯತ್ನಿಸಿದಳು’ ಎಂದಿರುವ ನ್ಯಾಯಪೀಠ, ‘ಈ ಪ್ರಕರಣವು ಕಾನೂನು ವ್ಯವಸ್ಥೆಯಲ್ಲಿ ಇರುವ ಕೊರತೆಯನ್ನು ತೋರಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದೆ. ಅಂತೆಯೇ, ಹದಿಹರೆಯದವರು ಲೈಂಗಿಕ ಸಂಬಂಧಗಳಲ್ಲಿ ತೊಡಗುವ ಪ್ರಕರಣಗಳ ಕುರಿತು ಪಶ್ಚಿಮ ಬಂಗಾಳ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಲೈಂಗಿಕ ಶಿಕ್ಷಣ, ಪೋಕ್ಸೋ ಬಗ್ಗೆ ಜಾಗೃತಿ ಮೂಡಿಸಿ, ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ದಾಖಲಾಗುವುದನ್ನು ಖಚಿತಪಡಿಸುವಂತೆ ಆದೇಶಿಸಿದೆ.

142ನೇ ವಿಧಿಯು ಆಯಾ ಪ್ರಸಕ್ತ ಸ್ಥಿತಿಗೆ ಅನುಗುಣವಾಗಿ ಕೋರ್ಟಿಗೆ ತೀರ್ಪು ಪ್ರಕಟಿಸುವ ವಿವೇಚನಾಧಿಕಾರ ನೀಡುತ್ತದೆ. ಈ ವಿಧಿ ಬಳಸಿ ಕೋರ್ಟ್ ಆದೇಶ ಪ್ರಕಟಿಸಿದೆ. 

ಏನಿದು ಪ್ರಕರಣ?:

2018ರಲ್ಲಿ 14 ವರ್ಷದಾಕೆಯೊಂದಿಗೆ 24 ವರ್ಷದ ಯುವಕನೊಬ್ಬ ಲೈಂಗಿಕ ಸಂಬಂಧ ಹೊಂದಿದ್ದ. ಬಳಿಕ ಆಕೆ ಪ್ರೌಢಾವಸ್ಥೆಗೆ ಬಂದಾಗ ಮದುವೆಯಾಗಿದ್ದ. ಆದರೂ ಈ ಬಗ್ಗೆ ಯುವತಿಯ ಕುಟುಂಬದವರು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು ತಪ್ಪು ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿದ್ದ ಸ್ಥಳೀಯ ಕೋರ್ಟು, ಆರೋಪಿಗೆ 20 ವರ್ಷ ಜೈಲು ಶಿಕ್ಷೆ ನೀಡಿತ್ತು. ಆದರೆ ಕಲ್ಕತ್ತಾ ಹೈಕೋರ್ಟ್ 2023ರಲ್ಲಿ ಆ ವ್ಯಕ್ತಿಯನ್ನು ಖುಲಾಸೆಗೊಳಿಸಿ ವಿವಾದಿತ ತೀರ್ಪು ನೀಡಿತ್ತು.

‘ಹದಿಹರೆಯದ ಹುಡುಗಿಯರು ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಆಕೆಯನ್ನು ಸೋತವಳು ಎಂದು ಸಮಾಜ ಪರಿಗಣಿಸುತ್ತದೆ’ ಎಂದು ಹೇಳಿದ್ದ ಹೈಕೋರ್ಟ್‌, ಹದಿಹರೆಯದ ಹುಡುಗಿಯರು ಮತ್ತು ಅವರ ನೈತಿಕ ಕಟ್ಟುಪಾಡುಗಳ ಬಗ್ಗೆ ವ್ಯಾಪಕವಾದ ಟೀಕೆ ಮಾಡಿ 20 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಿತ್ತು.ಹೈಕೋರ್ಟ್‌ನ ಈ ಅಭಿಪ್ರಾಯಗಳು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡು ಹೈಕೋರ್ಟ್‌ ಅಭಿಪ್ರಾಯಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

 ಕೋರ್ಟ್‌ ಹೇಳಿದ್ದೇನು?

ಸಂತ್ರಸ್ತೆಗೆ ಕಷ್ಟವಾಯಿತು, ಆಕೆ ಪತಿಯನ್ನು ರಕ್ಷಿಸಿಕೊಳ್ಳಲು ಯತ್ನಿಸಿದಳು

ಕಾನೂನು ವ್ಯವಸ್ಥೆಯಲ್ಲಿನ ಕೊರತೆಯನ್ನು ತೋರಿಸುತ್ತದೆ: ಸುಪ್ರೀಂಲೈಂಗಿಕ ಶಿಕ್ಷಣ, ಪೋಕ್ಸೋ ಬಗ್ಗೆ ಜಾಗೃತಿ ಮೂಡಿಸಿ: ಸರ್ಕಾರಕ್ಕೆ ಸೂಚನೆ

PREV
Read more Articles on