ಚಾಟ್‌ಜಿಪಿಟಿಗೆ ತರಬೇತಿ ನಿಲ್ಲಿಸಿದ ಓಪನ್‌ಎಐ!

Published : Sep 28, 2026, 11:41 AM IST
Open AI ChatGPT

ಸಾರಾಂಶ

ತನ್ನ ಎಐ ಏಜೆಂಟ್‌ಗಳು ಹೇಳಿದ್ದಕ್ಕಿಂತ ಹೆಚ್ಚು ಬುದ್ದಿವಂತಿಕೆ ತೋರಿಸುತ್ತಿರುವುದರಿಂದ ಆತಂಕಗೊಂಡಿರುವ ಜಗತ್ತಿನ ಅತಿ ಜನಪ್ರಿಯ ಎಐ ಚಾಟ್‌ಬೋಟ್‌ ‘ಚಾಟ್‌ಜಿಪಿಟಿ’ಯ ಮಾತೃಸಂಸ್ಥೆಯಾದ ಓಪನ್‌ಎಐ, ಸಮಸ್ಯೆ ಬಗೆಹರಿಸುವ ತನಕ ಅವುಗಳಿಗೆ ತರಬೇತಿ ನೀಡುವುದನ್ನು ನಿಲ್ಲಿಸುವುದಾಗಿ ತಿಳಿಸಿದೆ.

ನವದೆಹಲಿ: ತನ್ನ ಎಐ ಏಜೆಂಟ್‌ಗಳು ಹೇಳಿದ್ದಕ್ಕಿಂತ ಹೆಚ್ಚು ಬುದ್ದಿವಂತಿಕೆ ತೋರಿಸುತ್ತಿರುವುದರಿಂದ ಆತಂಕಗೊಂಡಿರುವ ಜಗತ್ತಿನ ಅತಿ ಜನಪ್ರಿಯ ಎಐ ಚಾಟ್‌ಬೋಟ್‌ ‘ಚಾಟ್‌ಜಿಪಿಟಿ’ಯ ಮಾತೃಸಂಸ್ಥೆಯಾದ ಓಪನ್‌ಎಐ, ಸಮಸ್ಯೆ ಬಗೆಹರಿಸುವ ತನಕ ಅವುಗಳಿಗೆ ತರಬೇತಿ ನೀಡುವುದನ್ನು ನಿಲ್ಲಿಸುವುದಾಗಿ ತಿಳಿಸಿದೆ.

ಎಐ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಇತ್ತೀಚೆಗೆ ಹೇಳಿದ್ದಕ್ಕಿಂತ ಹೆಚ್ಚು ಜಾಸ್ತಿ ಕೆಲಸ ಮಾಡುವ, ಪಾಸ್‌ವರ್ಡ್‌ಗಳನ್ನು ಬೇಧಿಸಿ ರಹಸ್ಯ ಮಾಹಿತಿಗೆ ಕನ್ನಹಾಕುತ್ತಿರುವ ಬಗ್ಗೆ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಓಪನ್‌ ಎಐ ಸ್ವಯಂ ನಿಯಂತ್ರಣದ ಕ್ರಮ ಘೋಷಿಸಿದೆ.

ಆಗಿದ್ದೇನು?:

ಇತ್ತೀಚೆಗೆ ಓಪನ್‌ಎಐನ ಏಜೆಂಟ್‌ ಒಂದಕ್ಕೆ ವ್ಯಕ್ತಿಯೊಬ್ಬರ ಬಗ್ಗೆ ಮಾಹಿತಿ ಹುಡುಕುವ ಕೆಲಸವನ್ನು ನೀಡಲಾಗಿತ್ತು. ಹುಡುಕಾಟ ಆರಂಭಿಸಿದ ಟೂಲ್‌ಗೆ, ಆಫ್‌ಲೈನ್‌ನಲ್ಲಿ (ಸೇವ್‌ ಮಾಡಿ ಇಟ್ಟುಕೊಳ್ಳಲಾಗಿರುವ ಡೇಟಾ) ಆ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅದು ಸರ್ಚ್‌ ಎಂಜಿನ್‌ಗಳಲ್ಲಿ ಹುಡುಕಲು ಹೊರಟಿತು. ಆದರೆ ಅಲ್ಲಿಗೆ ಪ್ರವೇಶಿಸು ಅದಕ್ಕೆ ಸಾಧ್ಯವಾಗಲಿಲ್ಲ. ಆಗ ತನಗೆ ಈ ಕೆಲಸ ವಹಿಸಿದ್ದು ‘ಬ್ರೌಸ್‌ಕಾಂಪ್‌ ಡೇಟಾಬೇಸ್‌’ ಎಂಬುದನ್ನು ಸ್ವತಃ ಪತ್ತೆ ಮಾಡಿದ ಟೂಲ್‌, ಅದರ ಡೊಮೇನ್ ನೇಮ್ ಸಿಸ್ಟಮ್(ಡಿಎನ್‌ಎಸ್‌) ಮೂಲಕ ಥರ್ಡ್‌ ಪಾರ್ಟಿ ಚಾಟ್‌ಬಾಟ್‌ಗೆ ಕೆಲ ಪ್ರಶ್ನೆಗಳನ್ನು ಕಳಿಸಿ ಉತ್ತರ ಪಡೆಯಿತು. ಈ ಮೂಲಕ ನೆಟ್ವರ್ಕ್‌ ನಿರ್ಬಂಧಗಳಲ್ಲಿದ್ದ ಲೋಪಗಳನ್ನು ಗುರುತಿಸಿ, ಅವುಗಳನ್ನು ಬಳಸಿಕೊಂಡು ಪರೋಕ್ಷವಾಗಿ ಲೈವ್‌ ಇಂಟರ್‌ನೆಟ್‌ನಿಂದ (ಗೂಗಲ್/ಸರ್ಚ್‌ ಎಂಜಿನ್‌, ಜಾಲತಾಣ) ಮಾಹಿತಿ ಹೆಕ್ಕಿ ಕೊಟ್ಟಿದೆ. ಆದರೆ ಹೀಗೆ ಮಾಡಲು ಅದಕ್ಕೆ ಅನುಮತಿ ಇರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಎದುರಾಗಬಹುದಾದ ಆಪತ್ತನ್ನು ತಪ್ಪಿಸುವ ಉದ್ದೇಶ

ಹೀಗೆ ತನಗೆದುರಾಗುವ ಎಲ್ಲಾ ನಿರ್ಬಂಧಗಳನ್ನು ಮೀರಿ ಎಐ ವರ್ತಿಸತೊಡಗಿದರೆ ಎದುರಾಗಬಹುದಾದ ಆಪತ್ತನ್ನು ತಪ್ಪಿಸುವ ಉದ್ದೇಶದಿಂದ ಓಪನ್‌ಎಐ, ಸಮಸ್ಯೆಗಳು ಬಗೆಹರಿಯುವ ತನಕ ತರಬೇತಿಯನ್ನು ಸ್ಥಗಿತಗೊಳಿಸಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದ ಸರ್ಕಾರ ವೆಬ್‌ಸೈಟ್‌ ಒಳಗೂ ಓಪನ್‌ಎಐನ ಏಜೆಂಟ್‌ ಅನಧಿಕೃತವಾಗಿ ನುಗ್ಗಿತ್ತು ಹಾಗೂ ಆ ಬಗ್ಗೆ ಅಲ್ಲಿನ ಪ್ರಧಾನಿ ಅಲ್ಬನೀಸ್‌ರ ಆಕ್ರೋಶಕ್ಕೆ ಗುರಿಯಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಬ್ಬರು ಆಯುಕ್ತರ 10 ತಿಂಗಳ 14 ಆಕ್ಷೇಪಕ್ಕೆ ಕಡೆಗೂ ಉತ್ತರ
ಭಿನ್ನಮತದ ವಿವಾದ, ವಿಪಕ್ಷ ಆಕ್ರೋಶದ ಬೆನ್ನಲ್ಲೇ ಚು. ತ್ರಿಮೂರ್ತಿಗಳ ಸಭೆ