ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕರೆತರುವ ‘ಆಪರೇಶನ್ ಅಜಯ್’ ಕಾರ್ಯಾಚರಣೆಯಡಿ 235 ಭಾರತೀಯರ 2ನೇ ಬ್ಯಾಚ್ ಶನಿವಾರ ಯಶಸ್ವಿಯಾಗಿ ದೆಹಲಿಗೆ ಬಂದಿಳಿದೆ. ಇದರೊಂದಿಗೆ 2 ದಿನದಲ್ಲಿ ಸುಮಾರು 450 ಜನರನ್ನು ಈವರೆಗೆ ಕರೆತಂದಂತಾಗಿದೆ. ಅಲ್ಲದೇ ಭಾನುವಾರ 2 ವಿಮಾನಗಳಲ್ಲಿ ಮತ್ತಷ್ಟು ಭಾರತೀಯರು ಸ್ವದೇಶಕ್ಕೆ ಬಂದಿಳಿಯಲಿದ್ದಾರೆ. ಶನಿವಾರ ಮುಂಜಾನೆ ದೆಹಲಿಗೆ ಬಂದಿಳಿದ ‘ಎಐ 140’ ವಿಮಾನದಲ್ಲಿದ್ದ 9 ಕನ್ನಡಿಗರು ಸೇರಿ 235 ನಾಗರಿಕರಿದ್ದರು. ವಿಮಾನ ಬಂದಿಳಿದ ಬಳಿಕ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರು ನಿಲ್ದಾಣದಲ್ಲಿ ಭಾರತೀಯರನ್ನು ಬರಮಾಡಿಕೊಂಡರು. ಶುಕ್ರವಾರ ಬಂದಿಳಿದ 200 ಜನರ ಮೊದಲ ಬ್ಯಾಚ್ ಅನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದರು. ಇಂದು 2 ಬ್ಯಾಚ್ ಭಾರತಕ್ಕೆ: ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧದ ನಡುವೆ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಶನಿವಾರ ಒಂದು ಏರ್ ಇಂಡಿಯಾ ಮತ್ತು ಒಂದು ಸ್ಪೈಸ್ ಜೆಟ್ ವಿಮಾನ ಟೆಲ್ ಅವಿವ್‌ಗೆ ತೆರಳಿವೆ. ಈ 2 ವಿಮಾನಗಳಲ್ಲಿ ಭಾನುವಾರ ಮತ್ತೆರಡು ಬ್ಯಾಚ್ ಭಾರತೀಯರು ಭಾರತಕ್ಕೆ ಆಗಮಿಸಲಿದ್ದು ಬಳಿಕ ಒಟ್ಟಾರೆ 4 ಬ್ಯಾಚ್‌ಗಳು ಸ್ವದೇಶಕ್ಕೆ ಮರಳಿದಂತಾಗುತ್ತದೆ. ಏರ್ ಇಂಡಿಯಾ ವಿಮಾನ ದಿಲ್ಲಿಗೆ ಬರಲಿದ್ದರೆ, ಸ್ಪೈಸ್ ಜೆಟ್ ವಿಮಾನ ಅಮೃತಸರಕ್ಕೆ ಬಂದಿಳಿಯಲಿದೆ. ಸದ್ಯ ಇಸ್ರೇಲ್‌ನಲ್ಲಿ 18,000 ಭಾರತೀಯರಿದ್ದಾರೆ. ಇನ್ನು ಈ ಪೈಕಿ 4 ಜನರು ಭಾರೀ ಸಂಘರ್ಷದ ತಾಣವಾಗಿರುವ ಗಾಜಾದಲ್ಲಿ ಹಾಗೂ 12 ಜನ ವೆಸ್ಟ್‌ಬ್ಯಾಂಕ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.