ಚೆನ್ನೈ : ‘ತನ್ನ ವಿರುದ್ಧ ಆಪರೇಷನ್ ಸಿಂದೂರ ಕೈಗೊಂಡ ಭಾರತಕ್ಕೆ ಅಪಾರ ಹಾನಿ ಮಾಡಿರುವುದಾಗಿ ಪಾಕಿಸ್ತಾನ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಕೆಲವು ವಿದೇಶಿ ಮಾಧ್ಯಮಗಳೂ ಇದಕ್ಕೆ ಪೂರಕವಾಗಿ ವರದಿ ಮಾಡಿವೆ. ಅವುಗಳು ತಮ್ಮ ಹೇಳಿಕೆಗೆ ಸಾಕ್ಷಿಯಾಗಿ ಭಾರತಕ್ಕೆ ಆದ ಒಂದೇ ಒಂದು ಹಾನಿಯ ಫೋಟೋ ತೋರಿಸಲಿ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸವಾಲು ಹಾಕಿದ್ದಾರೆ.
ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ಮಾತನಾಡಿದ ದೋವಲ್ ‘ಆಪರೇಷನ್ ಸಿಂದೂರ ಭಾರತದ ಪಾಲಿನ ಹೆಮ್ಮೆಯ ಕ್ಷಣ’ ಎಂದು ಕೊಂಡಾಡಿದರು.
‘ಭಾರತವು ಪಾಕ್‌ನ ಒಳನುಗ್ಗಿ, ಒಂದೂ ಗುರಿ ತಪ್ಪದಂತೆ 9 ಉಗ್ರನೆಲೆಗಳನ್ನು ಪುಡಿಗಟ್ಟಿದೆವು. ಇಡೀ ಕಾರ್ಯಾಚರಣೆ ಮೇ.7ರ ಬೆಳಗಿನಜಾವ 1 ಗಂಟೆಗೆ ಶುರುವಾಗಿ 23 ನಿಮಿಷ ನಡೆಯಿತು. ಇದಕ್ಕೆ ಸ್ವದೇಶಿ ತಂತ್ರಜ್ಞಾನವನ್ನೇ ಬಳಸಲಾಗಿತ್ತು’ ಎಂದು ಜೋರಾದ ಹರ್ಷೋದ್ಗಾರದ ನಡುವೆ ಹೇಳಿದರು.
ಒಂದು ಗಾಜಾದರೂ ಒಡೆದಿದೆಯೇ ತೋರಿಸಿ
ಇದೇ ವೇಳೆ, ಭಾರತಕ್ಕೂ ಬಹಳ ಹಾನಿಯಾಗಿದೆ. ಭಾರತದ ರಫೇಲ್ ಯುದ್ಧವಿಮಾನ ಹೊಡೆದುರುಳಿಸಲಾಗಿದೆ ಎಂದು ವರದಿ ಮಾಡಿದ್ದ ವಿದೇಶಿ ಮಾಧ್ಯಮ ಹಾಗೂ ವಾದ ಮಾಡಿದ್ದ ಪಾಕ್‌ಗೆ ಪರೋಕ್ಷವಾಗಿ ಚಾಟಿ ಬೀಸಿದ ದೋವಲ್, ‘ಭಾರತಕ್ಕೆ ಆದ ಒಂದೇ ಒಂದು ಹಾನಿಯನ್ನು ಸಾಕ್ಷಿಯಾಗಿ ಕೊಡಿ. ಕಡೇ ಪಕ್ಷ ಒಂದು ಗಾಜು ಒಡೆದದ್ದಾದರೂ ತೋರಿಸಿ’ ಎಂದು ಸವಾಲೆಸೆದರು.
ಇನ್ನು ನ್ಯೂಯಾರ್ಕ್ ಟೈಮ್ಸ್ ಅನ್ನು ನಿರ್ದಿಷ್ಟವಾಗಿ ಹೆಸರಿಸಿದ ದೋವಲ್, ’ಕೆಲವು ಮಾಧ್ಯಮಗಳು ಭಾರತಕ್ಕೆ ಹಾನಿ ಆಗಿದೆ ಎಂದವು. ಆದರೆ ಅವು ಮೇ 10ರ ಮೊದಲು ಮತ್ತು ನಂತರ ಪಾಕಿಸ್ತಾನದಲ್ಲಿನ 13 ವಾಯುನೆಲೆಗಳನ್ನು ಮಾತ್ರ ತೋರಿಸಿವೆ, ಅದು ಸರ್ಗೋಧಾ, ರಹೀಮ್ ಯಾರ್ ಖಾನ್, ಚಕ್ಲಾಲಾ ಅಥವಾ ರಾವಲ್ಪಿಂಡಿ- ಇರಬಹುದು. ಈ ಚಿತ್ರಗಳು ಭಾರತೀಯ ವಾಯುಪಡೆಯು ಪಾಕಿಸ್ತಾನದ ನೆಲೆಗಳ ಮೇಲೆ ಮಾಡಿರುವ ಹಾನಿಯನ್ನು ಮಾತ್ರ ತೋರಿಸಿವೆ. ಭಾರತದ ಒಂದಾದರು ಚಿತ್ರ ತೋರಿಸಿವೆಯೇ?’ ಎಂದು ಕುಟುಕಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ದೋವಲ್, ತಂತ್ರಜ್ಞಾನ ಮತ್ತು ಯುದ್ಧದ ನಡುವಿನ ಸಂಬಂಧವನ್ನು ಒತ್ತಿ ಹೇಳಿದರು ಮತ್ತು ದೇಶವು ತನ್ನ ಅವಶ್ಯಕತೆಗಳನ್ನು ಪೂರೈಸಲು ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಕರೆ ನೀಡಿದರು.
ಏ.22ರಂದು ನಡೆದ ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ ಭಾರತ ಮೇ.6ರ ತಡರಾತ್ರಿ ಆಪರೇಷನ್ ಸಿಂದೂರ ನಡೆಸಿ, ಗನಿಖರವಾಗಿ ಪಾಕಿಸ್ತಾನದ ಪ್ರಮುಖ ಉಗ್ರನೆಲೆಗಳನ್ನು ಧ್ವಂಸಮಾಡಿತ್ತು.