ಶಸ್ತ್ರಾಸ್ತ್ರ ಅಷ್ಟೇ ಅಲ್ಲ, ಟರ್ಕಿ ಸೈನಿಕರೂ ಪಾಕ್‌ಗೆ ಸಾಥ್‌ ! ಸ್ಫೋಟಕ ವಿಷಯ ಬೆಳಕಿಗೆ

KannadaprabhaNewsNetwork | Updated : May 15 2025, 05:14 AM IST
Follow Us

ಸಾರಾಂಶ

ಭಾರತ ನಡೆಸಿದ ಆಪರೇಷನ್‌ ಸಿಂದೂರ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ಪ್ರತಿದಾಳಿಯಲ್ಲಿ ಭಾರತದ ಮತ್ತೊಂದು ಶತ್ರು ದೇಶ ಟರ್ಕಿ ಕೂಡಾ ಭಾಗಿಯಾಗಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: ಭಾರತ ನಡೆಸಿದ ಆಪರೇಷನ್‌ ಸಿಂದೂರ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ಪ್ರತಿದಾಳಿಯಲ್ಲಿ ಭಾರತದ ಮತ್ತೊಂದು ಶತ್ರು ದೇಶ ಟರ್ಕಿ ಕೂಡಾ ಭಾಗಿಯಾಗಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೇರ ಬೆಂಬಲ ನೀಡಿದ್ದ ಟರ್ಕಿ, ಡ್ರೋನ್‌ ಸೇರಿದಂತೆ ಹಲವು ಶಸ್ತ್ರಾಸ್ತ್ರ ನೀಡಿತ್ತು ಎಂಬುದು ಈ ಮೊದಲೇ ಭಾರತೀಯ ಸೇನಾ ಪಡೆಗಳ ಅರಿವಿಗೆ ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ದಾಳಿಗೆ ಪಾಕ್‌ಗೆ ವಿದೇಶಿ ದೇಶವೊಂದರ ಸೇನಾಪಡೆ ಬೆಂಬಲ ನೀಡಿರುವ ವಿಷಯ ಬೆಳಕಿಗೆ ಬಂದಿದೆ.

ಇದು ಮುಂಬರುವ ದಿನಗಳಲ್ಲಿ ಭಾರತ ಮತ್ತು ಟರ್ಕಿ ದೇಶದ ನಡುವಣ ದ್ವಿಪಕ್ಷೀಯ ಸಂಬಂಧಕ್ಕೆ ಭಾರೀ ಪೆಟ್ಟು ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ ವಿರುದ್ಧ 350ಕ್ಕೂ ಹೆಚ್ಚು ಡ್ರೋನ್‌ ದಾಳಿಗೆ ನೆರವು ನೀಡಿತ್ತು. ಜೊತೆಗೆ ಮಿಲಿಟರಿಗೆ ಸೇರಿದ ಡ್ರೋನ್‌ ಆಪರೇಟರ್‌ಗಳನ್ನೂ ಒದಗಿಸಿದ್ದು ಇದೀಗ ಬೆಳಕಿಗೆ ಬಂದಿದೆ. ಭಾರತದ ನಡೆಸಿದ ದಾಳಿಯಲ್ಲಿ ಇಬ್ಬರು ಡ್ರೋನ್‌ ನಿರ್ವಾಹಕ ಯೋಧರು ಸಾವನ್ನಪ್ಪಿದ್ದು, ಯುದ್ಧದಲ್ಲಿ ಟರ್ಕಿ ನೇರ ಭಾಗಿಯಾಗಿರುವುದಕ್ಕೆ ಸಾಕ್ಷ್ಯ ಒದಗಿಸಿದೆ.

ಮೂಲಗಳ ಪ್ರಕಾರ ಟರ್ಕಿಯ ಸಲಹಾಕಾರರು ಭಾರತದ ವಿರುದ್ಧ ಡ್ರೋನ್‌ ದಾಳಿ ನಡೆಸಲು ಸಮನ್ವಯಕಾರರರಾಗಿ ಕೆಲಸ ಮಾಡಿದ್ದಾರೆ. ಪಾಕಿಸ್ತಾನವು ಭಾರತದ ಮೇಲಿನ ದಾಳಿಗೆ ಬೈರಕ್ತರ್‌ ಟಿಬಿ2 ಮತ್ತು ವೈಐಎಚ್‌ಎ ಡ್ರೋನ್‌ಗಳನ್ನು ಬಳಸಿತ್ತು. ಬೈರಕ್ತರ್‌ನಂಥ ಡ್ರೋನ್‌ಗಳನ್ನು ಭಾರತದ ನೆಲೆಗಳ ಮೇಲೆ ದಾಳಿ ನಡೆಸಲು ಹಾಗೂ ಆತ್ಮಾಹುತಿ ಡ್ರೋನ್‌ಗಳನ್ನು ಗಡಿಯಲ್ಲಿರುವ ಭಾರತೀಯ ಯೋಧರು ಮತ್ತು ಯುದ್ಧೋಪಕರಣ ಸಾಮಗ್ರಿ ವ್ಯವಸ್ಥೆಗೆ ಬೆದರಿಕೆಯೊಡ್ಡಲು ಬಳಸಲಾಗಿತ್ತು.ಮಿತ್ರ ದ್ರೋಹಿ ಟರ್ಕಿ:

ಕೋವಿಡ್‌ ಅವಧಿಯಲ್ಲಿ ಭಾರತವು ಟರ್ಕಿಗೆ ಸಾಕಷ್ಟು ಪ್ರಮಾಣದಲ್ಲಿ ಅಲ್ಯುಮಿನಿಯಂ, ಆಟೋ ಬಿಡಿಭಾಗಗಳು, ವಿಮಾನ, ಟೆಲಿಕಾಂ ಸಾಧನಗಳು ಮತ್ತು ಎಲೆಕ್ಟ್ರಿಕಲ್‌ ಯಂತ್ರ, ಉಪಕರಣಗಳನ್ನು ರಫ್ತು ಮಾಡಿತ್ತು. ಇದು ಆ ದೇಶ ಡ್ರೋನ್‌ ಉತ್ಪಾದಿಸಲು ನೆರವು ನೀಡಿತ್ತು. ಜೊತೆಗೆ ಭೀಕರ ಭೂಕಂಪಕ್ಕೆ ತುತ್ತಾದ ವೇಳೆ ಮೊದಲಿಗನಾಗಿ ಭಾರತ ನೆರವು ಕಲ್ಪಿಸಿತ್ತು.

- ಭಾರತದ ವಿರುದ್ಧ ದಾಳಿಗೆ ಪಾಕಿಸ್ತಾನಕ್ಕೆ ಡ್ರೋನ್‌ ನೀಡಿದ್ದ ಟರ್ಕಿ

- ಅಷ್ಟೇ ಅಲ್ಲ, ಶಸ್ತ್ರಾಸ್ತ್ರಗಳ ಜೊತೆ ಯೋಧರನ್ನೂ ಕಳುಹಿಸಿದ್ದ ಟರ್ಕಿ

- ಭಾರತದ ದಾಳಿಯಲ್ಲಿ ಇಬ್ಬರು ಟರ್ಕಿ ಡ್ರೋನ್‌ ನಿರ್ವಾಹಕರ ಸಾವು

- ಸಮರದಲ್ಲಿ ಟರ್ಕಿ ನೇರವಾಗಿ ಭಾಗಿಯಾಗಿದ್ದಕ್ಕೆ ಮಹತ್ವದ ಸಾಕ್ಷ್ಯ

- ಇದರಿಂದ ಭಾರತ-ಟರ್ಕಿ ಸಂಬಂಧ ಹಳಸುವ ಸಾದ್ಯತೆ ದಿಟ