ಕ್ಷೇತ್ರ ಮರುವಿಂಗಡಣೆ ಮಸೂದೆಗೆ ವಿಪಕ್ಷ ವಿರೋಧ

Published : Nov 29, 2026, 07:59 AM IST
Delimitation Bill 2026

ಸಾರಾಂಶ

ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿಗೆ ದಾರಿ ಮಾಡಿಕೊಡುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಸೋಮವಾರದಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಜಂಟಿಯಾಗಿ ವಿರೋಧಿಸಲು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ನಿರ್ಧರಿಸಿದೆ.

ನವದೆಹಲಿ : ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿಗೆ ದಾರಿ ಮಾಡಿಕೊಡುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಸೋಮವಾರದಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಜಂಟಿಯಾಗಿ ವಿರೋಧಿಸಲು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ನಿರ್ಧರಿಸಿದೆ.

ಈ ವಿಧೇಯಕ ಎಸ್ಸಿ/ಎಸ್ಟಿ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ. ಜತೆಗೆ ಪ್ರಜಾಪ್ರಭುತ್ವಕ್ಕೆ ಅಂತ್ಯಹಾಡುವುದರೊಂದಿಗೆ ಶಾಶ್ವತವಾಗಿ ಅಧಿಕಾರ ಹಿಡಿಯಲು ಬಿಜೆಪಿ-ಆರೆಸ್ಸೆಸ್‌ಗೆ ನೆರಲು ನೀಡಲಿದೆ ಎಂದು ಇಂಡಿಯಾ ಒಕ್ಕೂಟ ಗಂಭೀರ ಆರೋಪ ಮಾಡಿದೆ.

ಒಕ್ಕೂಟದ ನಾಯಕರ ಎರಡು ಗಂಟೆಗಳಷ್ಟು ಸುದೀರ್ಘ ಸಭೆ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದೇಶದಲ್ಲಿ ಎಸ್ಸಿ,ಎಸ್ಟಿಗಳ ಸಂಖ್ಯೆ ಹೆಚ್ಚಾಗಿದೆ. ಹೊಸದಾಗಿ ನಡೆಯಲಿರುವ ಜನಗಣತಿಯಲ್ಲಿ ಇದು ಬೆಳಕಿಗೆ ಬರಲಿದೆ. ಆದರೆ, ಈ ವಿಧೇಯಕ ಹೊಸ ಜನಗಣತಿಯನ್ನು ಆಧಾರವಾಗಿ ಪರಿಗಣಿಸಲ್ಲ. ಇದರಿಂದ ಎಸ್ಸಿ,ಎಸ್ಟಿಗಳಿಗೆ ಅನ್ಯಾಯವಾಗಲಿದೆ ಎಂದು ದೂರಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸೀಟು ಗಳಿಸುತ್ತೇವೆ ಎಂದು ಪ್ರಧಾನಿ ಮೋದಿ ಘೋಷಣೆ ಮೊಳಗಿಸಿದ್ದರು. ಇದೀಗ ಈ ವಿಧೇಯಕಕ್ಕೆ ಸಂಸತ್ತಿನ ಅನುಮೋದನೆ ಪಡೆಯುವ ಮೂಲಕ ಅವರು 800ಕ್ಕೂ ಹೆಚ್ಚು ಸೀಟು ಗೆಲ್ಲುವ ಉದ್ದೇಶ ಹೊಂದಿದ್ದಾರೆ. ಸಂವಿಧಾನ ಬದಲಾಯಿಸಿ ಶಾಶ್ವತವಾಗಿ ಅಧಿಕಾರದಲ್ಲಿರಲು ನಿರ್ಧರಿಸಿದ್ದಾರೆ ಎಂದರು.

ಪ್ರಜಾಪ್ರಭುತ್ವ ನಾಶ:

ವಿಧೇಯಕದ ಮೂಲಕ ಅವರು ದೇಶದಲ್ಲಿ ಪ್ರಜಾಪ್ರಭುತ್ವದ ನಾಶಕ್ಕೆ ಹೊರಟಿಸಿದ್ದಾರೆ. ಒಮ್ಮೆ ಅವರ ಕೈಗೆ ಅಧಿಕಾರ ಸಿಕ್ಕರೆ ಅವರು ಈ ವಿಧೇಯಕವನ್ನು ಆಯುಧ ಮಾಡಿಕೊಂಡು ಶಾಶ್ವತವಾಗಿ ಅಧಿಕಾರದಲ್ಲಿರಲು ಏನು ಬೇಕೋ ಅದನ್ನು ಮಾಡಲಿದ್ದಾರೆ. ಮನುಸ್ಮೃತಿ ಜಾರಿ ನಿಶ್ಚಿತ ಎಂದು ಖರ್ಗೆ ಎಚ್ಚರಿಸಿದರು.

ಹಿಂದೆಯೂ ಬಿಜೆಪಿ ಈ ವಿಧೇಯಕ ಅಂಗೀಕರಿಸಲು ಮುಂದಾಗಿತ್ತಾದರೂ ಪ್ರತಿಪಕ್ಷಗಳ ಜಂಟಿ ಪ್ರಯತ್ನದಿಂದಾಗಿ ಸೋಲಾಗಿತ್ತು. ಮೋದಿ ಅವರ ಈ ವಿಧೇಯಕ ಪ್ರಜಾಪ್ರಭುತ್ವದ ಪಾಲಿಗೆ ದೊಡ್ಡ ಬೆದರಿಕೆಯಾಗಿದೆ. ನಾವು ಜಂಟಿಯಾಗಿ ಈ ವಿಧೇಯಕವನ್ನು ವಿರೋಧಿಸಲು ನಿರ್ಧರಿಸಿದ್ದೇವೆ. ಒಂದು ವೇಳೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ 850ಕ್ಕೇರಿದರೆ ದೇಶ ತೀವ್ರ ಸಮಸ್ಯೆಗೆ ಸಿಲುಕಲಿದೆ ಹಾಗೂ ಪ್ರಜಾಪ್ರಭುತ್ವ ನಾಶವಾಗಲಿದೆ ಎಂದು ಆರೋಪಿಸಿದರು.

ಜ್ಞಾನೇಶ್‌ ಕುಮಾರ್‌ ವಿರುದ್ಧವೂ ಕಿಡಿ:

ಕೇಂದ್ರ ಸರ್ಕಾರ ಕ್ಷೇತ್ರ ಪುನರ್‌ ವಿಂಗಡಣೆ ಅಧಿಕಾರವನ್ನು ಎಸ್‌ಐಆರ್‌ ಅಕ್ರಮ, ಮತಕಳವು ಆರೋಪ ಎದುರಿಸುತ್ತಿರುವ ಕಳಂಕಿತ ಮುಖ್ಯ ಚುನಾವಣಾ ಆಯುಕ್ತರ ಕೈಗೆ ಒಪ್ಪಿಸಲು ಮುಂದಾಗಿದೆ. ಅವರ ನೇತೃತ್ವದಲ್ಲಿ ಕ್ಷೇತ್ರಮರುವಿಂಗಡಣೆ ಕಾರ್ಯ ನಡೆದರೆ ಇನ್ನಷ್ಟು ಗೋಲ್‌ಮಾಲ್‌ ಆಗುವ ಸಾಧ್ಯತೆಗಳಿವೆ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಅವರು ಜನರಲ್‌ ಕೆಟಗರಿಗೆ ಮೀಸಲಿಟ್ಟ ಸ್ಥಾನವನ್ನು ಎಸ್ಸಿ/ಎಸ್ಟಿ ಆಗಿ, ಅದೇ ರೀತಿ, ಎಸ್ಸಿ, ಎಸ್ಟಿಗಳ ಮೀಸಲು ಸ್ಥಾನವನ್ನು ಜನರಲ್‌ ಕೆಟಗರಿಯ ಸೀಟ್‌ ಆಗಿ ಪರಿವರ್ತಿಸಬಹುದು ಎಂದರು.

ಲೋಕಸಫಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ, ಆರ್‌ಜೆಡಿಯ ಅಭಯ್‌ ಕುಮಾರ್‌ ಸಿಂಗ್‌ ಸೇರಿ ಹಲವು ಪಕ್ಷಗಳ ಮುಖಂಡರು ಇದ್ದರು.

ಇನ್ನು ಎನ್‌ಸಿಪಿ(ಎಸ್ಪಿ) ನಾಯಕರು ಸಭೆಗೆ ಗೈರಾಗಿದ್ದರೆ, ಡಿಎಂಕೆ, ಆಪ್‌ ಮತ್ತು ಬಿಜೆಡಿ ಸಭೆಯಿಂದ ದೂರವುಳಿಯಲು ನಿರ್ಧರಿಸಿದ್ದವು. ಡಿಎಂಕೆ ಈಗಾಗಲೇ ವಿಧೇಯಕಕ್ಕೆ ಬೆಂಬಲ ಘೋಷಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸೋನಿಯಾಗೆ ಪೌರತ್ವಕ್ಕೂ ಮುನ್ನವೇ ಮತದಾನ ಹಕ್ಕು!
ಕ್ಷೇತ್ರ ಮರುವಿಂಗಡಣೆ ಮಸೂದೆ ಪರ 2/3 ಬಹುಮತ ಗಳಿಸುವತ್ತ ಎನ್‌ಡಿಎ