ನವದೆಹಲಿ: ಇಸ್ರೇಲ್- ಹಮಾಸ್ ಸಂಘರ್ಷದ ವಿಷಯದಲ್ಲಿ ಪ್ಯಾಲೆಸ್ತೀನ್ ಪರವಾಗಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ವಿಪಕ್ಷ ನಾಯಕರ ನಿಯೋಗವೊಂದು ಸೋಮವಾರ ಇಲ್ಲಿನ ಪ್ಯಾಲೆಸ್ತೀನ್ ರಾಯಭಾರ ಕಚೇರಿಗೆ ಭೇಟಿ ನೀಡಿ ತನ್ನ ಬೆಂಬಲ ವ್ಯಕ್ತಪಡಿಸಿತು. ಈ ವೇಳೆ ಮಾತನಾಡಿದ ಸಿಪಿಎಂ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ‘ನಾವು ಇಲ್ಲಿಂದ ಗಾಜಾ ನಾಗರಿಕರಿಗೆ ಒಗ್ಗಟ್ಟಿನ ಸಂದೇಶ ಕಳಿಸಲು ಬಂದಿದ್ದು, ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಗಮನಿಸಿದರೆ ಅದು 3ನೇ ಜಾಗತಿಕ ಯುದ್ಧಕ್ಕೆ ಸಮಸ್ತ ವಿಶ್ವ ಸಮುದಾಯವನ್ನು ಆಹ್ವಾನಿಸುವ ರೀತಿಯಲ್ಲಿದೆ. ಯುದ್ಧದ ಸಮಯದಲ್ಲಿ ಎಲ್ಲರೂ ಮಾನವೀಯ ನೆಲೆಯಲ್ಲಿ ವರ್ತಿಸಬೇಕಿದೆ’ ಎಂದು ತಿಳಿಸಿದರು. ಅವರೊಂದಿಗೆ ಬಿಎಸ್‌ಪಿ ನಾಯಕ ದಾನಿಶ್ ಅಲಿ, ಜಾವೇದ್ ಅಲಿ ಖಾನ್, ಮಾಜಿ ಸಂಸದರಾದ ಕಾಂಗ್ರೆಸ್‌ನ ಮಣಿಶಂಕರ್ ಅಯ್ಯರ್, ಕೆ.ಸಿ.ತ್ಯಾಗಿ ಮುಂತಾದವರು ಹಾಜರಿದ್ದರು.