-ಗಾತ್ರದಲ್ಲಿ ಚಿಕ್ಕದಾದರೂ ಅಪಾರ ಮೌಲ್ಯವುಳ್ಳ ಪ್ರದೇಶ-‘ಪರ್ಷಿಯನ್ ಕೊಲ್ಲಿಯ ಅನಾಥ ಮುತ್ತು’ ಎಂದು ಬಣ್ಣನೆ-ಇರಾನ್ ತೈಲ ರಫ್ತಿನ ಶೇ.90ರಷ್ಟು ಇಲ್ಲಿಯೇ ಸಂಸ್ಕರಣೆ-7ನೇ ಶತಮಾನದ ಐತಿಹ್ಯವುಳ್ಳ ಪಾರಂಪರಿಕ ತಾಣ-ದಾಳಿಯಿಂದ ಇರಾನ್ ಆರ್ಥಿಕತೆಗೆ ಬಹುದೊಡ್ಡ ನಷ್ಟಟೆಹ್ರಾನ್/ವಾಷಿಂಗ್ಟನ್: ಶನಿವಾರ ಅಮೆರಿಕ ಪಡೆಗಳು ವಾಯುದಾಳಿ ನಡೆಸಿದ ಇರಾನ್‌ನ ಖಾರ್ಗ್ ದ್ವೀಪವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಇರಾನ್‌ನ ಮುಕುಟಮಣಿ’ ಎಂದು ಬಣ್ಣಿಸಿದ್ದಾರೆ. ದೇಶದ ಒಟ್ಟು ತೈಲ ರಫ್ತಿನ ಶೇ.90ರಷ್ಟು ಸಂಸ್ಕರಣೆಯಾಗುವ ಈ ದ್ವೀಪ ಇರಾನ್ ಆರ್ಥಿಕತೆಗೆ ವಿಶೇಷ ಶಕ್ತಿ ತುಂಬುತ್ತಿದೆ. ಇದನ್ನೇ ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿರುವುದು 15 ದಿನಗಳ ಯುದ್ಧದಲ್ಲಿ ಅತಿ ಮಹತ್ವ ಪಡೆದಿದೆ. ಗಾತ್ರ ಚಿಕ್ಕದು, ಪಾತ್ರ ದೊಡ್ಡದು: ಪರ್ಷಿಯನ್ ಕೊಲ್ಲಿಯ ಉತ್ತರ ಭಾಗದಲ್ಲಿ, ಬುಶೆಹ್ರ್ ಪ್ರಾಂತ್ಯದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಈ ದ್ವೀಪವು ಸುಮಾರು 8 ಕಿ.ಮೀ. ಉದ್ದ ಮತ್ತು 5 ಕಿ.ಮೀ. ಅಗಲ ಹೊಂದಿದೆ. ಟ್ರಂಪ್ ಇದನ್ನು ‘ಇರಾನ್‌ನ ಮುಕುಟಮಣಿ’ ಎಂದು ಕರೆದಿದ್ದಾರೆ. ಆದರೆ ಪ್ರಸಿದ್ಧ ಇರಾನಿಯನ್ ಬರಹಗಾರ ಜಲಾಲ್ ಅಲ್-ಏ-ಅಹ್ಮದ್ ಹಲವು ವರ್ಷಗಳ ಹಿಂದೆಯೇ ಇದನ್ನು ‘ಪರ್ಷಿಯನ್ ಕೊಲ್ಲಿಯ ಅನಾಥ ಮುತ್ತು’ ಎಂದು ಕರೆದಿದ್ದರು. ಇದು ಒಂಟಿಯಾಗಿರುವ ಮುತ್ತಿನಂತೆ, ಅಪಾರ ಮೌಲ್ಯವನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ ಎಂದು ಬಣ್ಣಿಸಿದ್ದರು.ಇರಾನ್ ತೈಲ ಶಕ್ತಿಯ ಬೆನ್ನೆಲುಬು: 1960 ಮತ್ತು 1970ರ ದಶಕಗಳಲ್ಲಿ ಇರಾನ್‌ನ ತೈಲ ಸಾಮರ್ಥ್ಯ ವಿಸ್ತರಣೆಯ ಸಮಯದಲ್ಲಿ ಖಾರ್ಗ್ ಅನ್ನು ಅಭಿವೃದ್ಧಿಪಡಿಸಲಾಯಿತು. ಈ ದ್ವೀಪ ತೈಲ ಸಂಗ್ರಹ ಟ್ಯಾಂಕ್‌ಗಳು, ಲೋಡಿಂಗ್ ಟರ್ಮಿನಲ್‌ಗಳು ಮತ್ತು ಪೈಪ್‌ಲೈನ್‌ಗಳು ಸೇರಿದಂತೆ ತೈಲ ಕ್ಷೇತ್ರದ ಮುಖ್ಯ ಚಟುವಟಿಕೆಗಳ ಕೇಂದ್ರವಾಗಿವೆ. ಇದು ಅಬೂಜಾರ್, ಫೊರೌಜನ್ ಮತ್ತು ದೊರೂದ್ ಎಂಬ 3 ಪ್ರಮುಖ ಪ್ರದೇಶಗಳಿಂದ ಕಚ್ಚಾತೈಲವನ್ನು ಸ್ವೀಕರಿಸುತ್ತದೆ. ನಂತರ ಸಂಕೀರ್ಣವಾದ ಪೈಪ್‌ಲೈನ್‌ಗಳ ಮೂಲಕ ಸಂಸ್ಕರಣಾ ನೆಲೆಗಳಿಗೆ ಇದನ್ನು ಕಳುಹಿಸಲಾಗುತ್ತದೆ. ಅಹ್ವಾಜ್, ಮಾರುನ್ ಮತ್ತು ಗಚ್ಸರನ್‌ನಂತಹ ಇರಾನ್‌ನ ಅತಿದೊಡ್ಡ ತೈಲ ನೆಲೆಗಳಿಂದ ನೇರವಾಗಿ ಖಾರ್ಗ್‌ನ ತೈಲ ಸಂಗ್ರಹ ಟ್ಯಾಂಕ್‌ಗಳಿಗೆ ಪೈಪ್‌ಲೈನ್‌ಗಳಿವೆ. ಈ ದ್ವೀಪವು ವಾರ್ಷಿಕವಾಗಿ ಸುಮಾರು 95 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ಸಂಸ್ಕರಿಸುತ್ತದೆ. ಇತರ ಹಲವು ವಿಶೇಷತೆ: ತೈಲದ ಹೊರತಾಗಿ, ದ್ವೀಪವು 7ನೇ ಶತಮಾನದ ಮೀರ್ ಮೊಹಮ್ಮದ್ ಮಸೀದಿ, ಅಚೆಮೆನಿಡ್ ಕಾಲದ ಶಾಸನಗಳು, ಮೀರ್ ಅರಾಮ್ ಮಸೀದಿ, ಝರತುಷ್ಟ್ರರ ಮತ್ತು ಕ್ರಿಶ್ಚಿಯನ್ನರ ಸಮಾಧಿಗಳು, ಸಾಸಾನಿಡ್ ಯುಗದ ಸಮಾಧಿಗಳು, ಇಸ್ಲಾಮಿಕ್ ಸ್ಮಶಾನಗಳು ಮತ್ತು 1747ರ ಡಚ್ ಕೋಟೆ ಮತ್ತು ಉದ್ಯಾನದ ಅವಶೇಷಗಳನ್ನು ಹೊಂದಿದೆ. ಹೀಗಾಗಿ ಹಲವು ವಿಧಗಳಲ್ಲಿ ವಿಶೇಷತೆ ಹೊಂದಿದೆ. ಖಾರ್ಗ್ ಮೇಲೆಯೇ ದಾಳಿಯೇಕೆ?: ಖಾರ್ಗ್ ದ್ವೀಪ ಇರಾನ್ ತೈಲ ರಫ್ತಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ರಫ್ತಿನ ಶೇ.90ರಷ್ಟು ಭಾಗ ಇಲ್ಲಿಯೇ ಸಂಸ್ಕರಣೆಯಾಗುತ್ತದೆ. ಅಂದರೆ ದೇಶದ ಆರ್ಥಿಕತೆಗೆ ಇದರ ಕೊಡುಗೆ ಬಹುದೊಡ್ಡದು. ಹೀಗಾಗಿ ಈ ದ್ವೀಪವನ್ನು ನಾಶಪಡಿಸಿದರೆ ಇರಾನ್‌ನ ನಡುಮುರಿದಂತೆಯೇ ಎಂಬುದು ಟ್ರಂಪ್ ಲೆಕ್ಕಾಚಾರ.