ಅಕ್ಟೋಬರ್‌ನಿಂದ ಮರು ನಿರ್ಮಾಣ ಕಾರ್ಯ
ನವದೆಹಲಿ: ಆಪರೇಷನ್ ಸಿಂದೂರ ವೇಳೆ ಭಾರತದ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗಿದ್ದ ತನ್ನ ಸುಕ್ಕೂರ್ ಏರ್‌ಬೇಸ್‌ನ ಅನ್ನು ಪಾಕಿಸ್ತಾನ ಮರು ನಿರ್ಮಾಣ ಮಾಡುತ್ತಿದೆ. ಹೈರೆಸಲ್ಯೂಷನ್ ಉಪಗ್ರಹ ಚಿತ್ರಗಳು ಇದನ್ನು ಸಾಬೀತುಪಡಿಸಿವೆ.
ಈ ಏರ್‌ಬೇಸ್‌ನ (ವಾಯುನೆಲೆ) ಹ್ಯಾಂಗರ್ (ತಂಗುದಾಣ) ಪಾಕಿಸ್ತಾನದ ಮಾನವ ರಹಿತ ವಿಮಾನಗಳಿಗೆ (ಯುಎವಿಗಳು) ಮುಖ್ಯ ನೆಲೆಯಾಗಿದೆ. ಪಹಲ್ಗಾಂ ದಾಳಿಗೆ ಪ್ರತಿಯಾಗಿ ನಡೆದ ಮೇ 10ರ ಆಪರೇಷನ್ ಸಿಂದೂರ ವೇಳೆ ಭಾರತೀಯ ವಾಯುಸೇನೆ ಸುಕ್ಕೂರ್ ಸೇರಿ ಹಲವು ವಾಯುನೆಲೆಗಳ ಮೇಲೆ ಭಾರೀ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದ ತತ್ತರಿಸಿದ್ದ ಪಾಕಿಸ್ತಾನ ಅನಿವಾರ್ಯವಾಗಿ ಕದನ ವಿರಾಮಕ್ಕೆ ಮುಂದೆ ಬಂದಿತ್ತು.ಭಾರತದ ದಾಳಿಯಿಂದ ಸುಕ್ಕೂರ್ ಏರ್‌ಬೇಸ್‌ಗೆ ಭಾರೀ ಹಾನಿಯಾಗಿತ್ತು. ವೆಂಟರ್ ಸಂಸ್ಥೆ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಲ್ಲಿ ಹ್ಯಾಂಗರ್ ಸಂಪೂರ್ಣ ಹಾನಿಗೀಡಾಗಿರುವುದು ಖಚಿತವಾಗಿತ್ತು. ಇದೀಗ ಅಕ್ಟೋಬರ್‌ನಿಂದ ಹಾನಿಗೀಡಾದ ಹ್ಯಾಂಗರ್ ಅನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ.
ಮತ್ತೊಂದು ಉಪಗ್ರಹ ಚಿತ್ರದಲ್ಲಿ ಭಾರತದ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗಿರುವ ನೂರ್ ಖಾನ್ ಬೇಸ್‌ನಲ್ಲಿರುವ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರದಲ್ಲೂ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಸ್ಪಷ್ಟವಾಗಿದೆ.
ಭಾರತಕ್ಕೆ ನುಸುಳಲು 120 ಉಗ್ರರು ಸಜ್ಜು: ಹೈ ಅಲರ್ಟ್
ಬಿಎಸ್ಎಫ್ನ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇನ್‌ಸ್ಪೆಕ್ಟರ್ ಜನರಲ್ ಅಶೋಕ್ ಯಾದವ್, ‘ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನಕ್ಕೆ ಅಪಾರ ಹಾನಿ ಮಾಡಿದೆವು. ಹಾಗಾಗಿ ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಭಾರತೀಯ ಸೇನೆ ಹಾಗೂ ಬಿಎಸ್ಎಫ್‌ನ ನಿಯಂತ್ರಣಕ್ಕೆ ಸಿಗದಂತೆ ಇನ್ನಷ್ಟು ಒಳಗೆ ಸರಿಸಿಕೊಂಡಿದ್ದಾರೆ. ಈ ಸ್ಥಳಾಂತರದ ಹೊರತಾಗಿಯೂ, ಇವು ನಮ್ಮ ಕಣ್ಗಾವಲಿನಲ್ಲಿವೆ. 69 ಲಾಂಚ್‌ಪ್ಯಾಡ್‌ಗಳಲ್ಲಿ ಸುಮಾರು 120 ಉಗ್ರಗಾಮಿಗಳಿರುವುದನ್ನು ಗಮನಿಸಿದ್ದೇವೆ. ಪಾಕಿಸ್ತಾನದಿಂದ ಯಾವುದೇ ದುಸ್ಸಾಹಸ ನಡೆದರೆ, ನಾವು ಸೂಕ್ತ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ’ ಎಂದರು.
ಲಂಕೆಗೆ ಹೋಗುವ ಪಾಕ್ ವಿಮಾನಗಳಿಗೆ ಭಾರತ ಅವಕಾಶ
ವಾಯುವಲಯ ನಿರ್ಬಂಧ ಸಡಿಲಿಸಿ ಭಾರತ ಮಾನವೀಯತೆನಿರ್ಬಂಧ ಹೇರಿದೆ ಎಂಬ ಪಾಕ್ ಸರ್ಕಾರ, ಮಾಧ್ಯಮ ವರದಿಗೆ ನಕಾರ
ನವದೆಹಲಿ: 400ಕ್ಕೂ ಹೆಚ್ಚು ಜನರ ಬಲಿಪಡೆದ ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಗೆ ಭಾರತದ ಜತೆ ಪಾಕಿಸ್ತಾನ ಹಾಗೂ ಚೀನಾಗಳು ಮಾನವೀಯ ನೆರವು ನೀಡಲು ಕೈಜೋಡಿಸಿವೆ. ಇದಕ್ಕೆ ಪೂರಕವಾಗಿ ಭಾರತವು, ಪಾಕಿಸ್ತಾನದ ವಿಮಾನಗಳ ಮೇಲೆ ಹೇರಿದ್ದ ವಾಯುವಲಯ ನಿರ್ಬಂಧ ತೆರವು ಮಾಡಿ, ಪರಿಹಾರ ಸಾಮಗ್ರಿ ಹೊತ್ತ ವಿಮಾನಗಳು ಲಂಕೆಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಶ್ರೀಲಂಕಾ ಕೂಡ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ.ಈ ನಡುವೆ, ಮಾನವೀಯ ನೆರವಿನ ವಿಮಾನಗಳಿಗೆ ಭಾರತ ತನ್ನ ವಾಯುವಲಯ ತೆರೆಯಲಿಲ್ಲ ಎಂದು ಪಾಕ್ ವಿದೇಶಾಂಗ ಇಲಾಖೆ ಆರೋಪಿಸಿದೆ ಹಾಗೂ ಪಾಕ್ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದೆ. ಆದರೆ ವರದಿ ಸುಳ್ಳು ಎಂದು ಭಾರತ ಸ್ಪಷ್ಟಪಡಿಸಿದೆ.
ಆಪರೇಷನ್ ಸಿಂದೂರದ ಸಮಯದಿಂದ ಭಾರತವು ಪಾಕ್ ವಿಮಾನಗಳಿಗೆ ತನ್ನ ವಾಯುವಲಯ ನಿರ್ಬಂಧಿಸಿದೆ.