ನೆರಳಿಗೆಂದು ಪಾಕ್‌ ಗಡಿ ದಾಟಿದ್ದ ಯೋಧ 21 ದಿನ ಬಳಿಕ ಬಿಡುಗಡೆ

KannadaprabhaNewsNetwork |  
Published : May 15, 2025, 02:00 AM ISTUpdated : May 15, 2025, 04:57 AM IST
ಬಿಡುಗಡೆ | Kannada Prabha

ಸಾರಾಂಶ

ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಹೋಗಿದ್ದ ಕಾರಣ ಪಾಕಿಸ್ತಾನದ ಸೇನಾಪಡೆಗಳಿಂದ ಬಂಧಿತನಾಗಿದ್ದ ಭಾರತೀಯ ಯೋಧ ಪೂರ್ಣಂ ಶಾನನ್ನು 21 ದಿನಗಳ ಬಳಿಕ ಬುಧವಾರ ಬೆಳಗ್ಗೆ ಬಿಡುಗಡೆ ಮಾಡಲಾಗಿದೆ.  

 ಅಮೃತಸರ: ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಹೋಗಿದ್ದ ಕಾರಣ ಪಾಕಿಸ್ತಾನದ ಸೇನಾಪಡೆಗಳಿಂದ ಬಂಧಿತನಾಗಿದ್ದ ಭಾರತೀಯ ಯೋಧ ಪೂರ್ಣಂ ಶಾನನ್ನು 21 ದಿನಗಳ ಬಳಿಕ ಬುಧವಾರ ಬೆಳಗ್ಗೆ ಬಿಡುಗಡೆ ಮಾಡಲಾಗಿದೆ. ಭಾರತ ಕೂಡ ತನ್ನ ವಶದಲ್ಲಿ ಓರ್ವ ಪಾಕ್ ಯೋಧನನ್ನು ಬಿಡುಗಡೆ ಮಾಡಿದೆ.

ಪಹಲ್ಗಾಂ ನರಮೇಧದ ಬಳಿಕ ಭಾರತ ಮತ್ತು ಪಾಕ್‌ ನಡುವೆ ಭಾರೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಹೊತ್ತಿನಲ್ಲೇ, ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿ ರೇಖೆಯನ್ನು ಶಾ ಆಕಸ್ಮಿಕವಾಗಿ ದಾಟಿ ಹೋಗಿದ್ದ. ಗಡಿಯಲ್ಲಿ ರೈತರ ರಕ್ಷಣೆಗೆ ನಿಯೋಜಿತ ಶಾ, ಭಾರೀ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರ ಹುಡುಕಿ ಹೋಗುವಾಗ ಆಕಸ್ಮಿಕವಾಗಿ ಗಡಿದಾಟಿದ್ದ. ಹೀಗಾಗಿ ಆತನನ್ನು ಬಂಧಿಸಲಾಗಿತ್ತು.

ಪಶ್ಚಿಮ ಬಂಗಾಳ ಮೂಲದ ಶಾ ಬಿಡುಗಡೆಗೆ ಭಾರತ ಹಲವು ಬಾರಿ ಮನವಿ ಮಾಡಿದ್ದರು ಪಾಕ್‌ ಒಪ್ಪಿರಲಿಲ್ಲ. ಆದರೆ ಇದೀಗ ಎರಡೂ ದೇಶಗಳ ನಡುವೆ ಕದನ ವಿರಾಮ ಜಾರಿಯಾದ ಬೆನ್ನಲ್ಲೇ ಆತನನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.

ಯೋಧನೊಬ್ಬ ಶತ್ರು ದೇಶದ ವಶಕ್ಕೆ ಹೋಗಿ ಬಂದಿರುವ ಹಿನ್ನೆಲೆಯಲ್ಲಿ, ಸೇನೆ ಆತನ ಪೂರ್ಣ ದೇಹ ತಪಾಸಣೆಗೆ ಒಳಪಡಿಸುವ ಮತ್ತು ಆತ ಗಡಿ ದಾಟಲು ಕಾರಣವಾದ ಅಂಶಗಳು, ಅಲ್ಲಿ ಆತನನ್ನು ನಡೆಸಿಕೊಂಡ ರೀತಿ, ಆತನನ್ನು ಯಾವುದಾದರೂ ಗೂಢಚರ್ಯೆಗೆ ಒಪ್ಪಿಸಲಾಗಿದೆಯೇ ಎಂಬಿತ್ಯಾದಿ ಅಂಶಗಳು ಬಗ್ಗೆ ವಿಚಾರಣೆಗೆ ಒಳಪಡಿಡಲಾಗುವುದು. ಜೊತೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಆತನನ್ನು ಸಕ್ರಿಯ ಸೇವೆಗೆ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಭಾರತವು ಕೂಡ ಬುಧವಾರ ವಾಘಾ ಗಡಿಯಲ್ಲಿ ತನ್ನ ವಶದಲ್ಲಿದ್ದ ಪಾಕಿಸ್ತಾನದ ಯೋಧನನ್ನು ಬಿಡುಗಡೆ ಮಾಡಿದೆ. ಪಾಕ್ ಸೇನೆಯ ಮುಹಮ್ಮುದುಲ್ಲಾ ಅಜಾಗರೂಕತೆಯಿಂದ  ಭಾರತಕ್ಕೆ ಬಂದಿದ್ದಾಗ ಬಿಎಸ್‌ಎಫ್‌ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದರು, ಬುಧವಾರ ಗಡಿ ಭದ್ರತಾ ಪಡೆ ಅಧಿಕಾರಿಗಳು ಪಾಕಿಸ್ತಾನಿ ಅಧಿಕಾರಿಗಳಿಗೆ ಅವರನ್ನು ಹಸ್ತಾಂತರಿಸಿದರು.

PREV

Recommended Stories

ಬಿಹಾರದಲ್ಲಿ ಏಷ್ಯಾದ ಅತಿ ಅಗಲದ 6 ಲೇನ್‌ ಸೇತುವೆ : 34 ಮೀ. ಅಗಲ
ಸಿಎಂಗಳ ಕ್ರಿಮಿನಲ್ ಕೇಸು : ರೇವಂತ್‌ ನಂ.1, ಸ್ಟಾಲಿನ್‌ ನಂ.2, ನಾಯ್ಡು ನಂ.3, ಸಿದ್ದು ನಂ.4