ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ನಡುವೆಯೇ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ವಿಡಿಯೋವೊಂದನ್ನು ಬಿಟ್ಟಿದ್ದಾನೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ನಡುವೆಯೇ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ವಿಡಿಯೋವೊಂದನ್ನು ಬಿಟ್ಟಿದ್ದಾನೆ. ಅದರಲ್ಲಿ ಯುದ್ಧ ನಡೆದರೆ, ಭಾರತದಲ್ಲಿನ ಪಂಜಾಬಿಗರು ಪಾಕಿಸ್ತಾನ ಸೈನಿಕರಿಗೆ ಊಟ ಹಾಕುತ್ತಾರೆ ಎಂದು ಹೇಳಿದ್ದಾನೆ.
ತನ್ನ ವಿಡಿಯೋದಲ್ಲಿ,‘ಪಾಕಿಸ್ತಾನವು ನಮ್ಮ ಮಿತ್ರ ರಾಷ್ಟ್ರ. ಒಮ್ಮೆ ಪಂಜಾಬ್ ಪ್ರತ್ಯೇಕಗೊಂಡ ಬಳಿಕ ಪಾಕಿಸ್ತಾನ ನಮ್ಮ ನೆರೆಯ ದೇಶವಾಗಲಿದೆ ಎಂದಿದ್ದಾನೆ. ಜೊತೆಗೆ ಭಾರತದಲ್ಲಿನ ಸಿಖ್ ಸೈನಿಕರು ಯುದ್ಧದಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಿರುವ ಪನ್ನೂನ್, ಈ ಯುದ್ಧ ಭಾರತ ಮತ್ತು ಮೋದಿಗೆ ಕೊನೆಯ ಯುದ್ಧವಾಗಲಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಭಾರತವನ್ನು ಕಂಡ್ರೆ ಪಾಕ್‌ಗೆ ಭಯ: 1993ರ ಸಿಐಎ ವರದೀಲಿ ಪ್ರಸ್ತಾಪ
ನವದೆಹಲಿ: 26 ಮಂದಿಯನ್ನು ಬಲಿಪಡೆದ ಪಹಲ್ಗಾಂ ಉಗ್ರ ದಾಳಿಯ ಹಿಂದೆ ಪಾಕಿಸ್ತಾನ ತನ್ನದೇನೂ ಪಾತ್ರ ಇಲ್ಲ ಎಂದು ಹೇಳುತ್ತಿದ್ದರೂ, ನೆರೆಯ ದೇಶವು ಉಗ್ರರನ್ನು ಛೂಬಿಟ್ಟು ಭಾರತದ ಜತೆಗೆ ಛದ್ಮಸಮರಕ್ಕಿಳಿಯುವ ಸಾಧ್ಯತೆಯನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ 30 ವರ್ಷಗಳ ಹಿಂದೆಯೇ ಅಂದಾಜಿಸಿತ್ತು.
ಇದಕ್ಕೆಲ್ಲ ಕಾರಣ ಭಾರತ ಕುರಿತು ಪಾಕಿಸ್ತಾನಕ್ಕಿರುವ ಆತಂಕ. ಈ ಕಾರಣಕ್ಕೆ ಮೂವತ್ತು ವರ್ಷಗಳ ಹಿಂದೆಯೇ ಪಾಕಿಸ್ತಾನ ಉಗ್ರರನ್ನು ಬಳಸಿಕೊಂಡು ಛದ್ಮ ಸಮರದ ಹಾದಿ ಹಿಡಿಯಲು ಆಸಕ್ತಿ ತೋರಿತ್ತು. ಭಾರತದ ವಿರುದ್ಧದ ಅಸ್ತ್ರವನ್ನಾಗಿ ಬಳಸಲೆಂದೇ ಇಸ್ಲಾಂಗೆ ಪ್ರೋತ್ಸಾಹ ನೀಡುವ ಕೆಲಸವನ್ನೂ ಮಾಡುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
1993ರಲ್ಲಿ ಅಂದರೆ ಬಾಬರಿ ಮಸೀದಿ ಕೆಡವಿದ ಬಳಿಕ ಸಿಐಎಯ ಅಧಿಕಾರಿ ಬ್ರೂಸ್ ರಿಡೆಲ್ ಅವರು ಪಾಕಿಸ್ತಾನದ ಕುರಿತಾಗಿ ರಾಷ್ಟ್ರೀಯ ಗುಪ್ತಚರ ಅಂದಾಜು ವರದಿ ಸಿದ್ಧಪಡಿಸಿದ್ದರು. ಇದರಲ್ಲಿ ಭಾರತದ ಕುರಿತ ಪಾಕಿಸ್ತಾನದ ಆತಂಕ, ಭಾರತವನ್ನು ಮಣಿಸಲು ಅದು ಏನೇನು ಮಾಡಬಹುದು ಎಂಬ ಮುನ್ನೋಟವನ್ನು 30 ವರ್ಷಗಳ ಹಿಂದೆಯೇ ನೀಡಿದ್ದರು.ಭಾರತ ಕಂಡ್ರೆ ಭಯ:
ಪಾಕಿಸ್ತಾನಕ್ಕೆ ಭಾರತವನ್ನು ಕಂಡ್ರೆ ಭಯ. ಈ ಭಯ ಕೇವಲ ಆರ್ಥಿಕ ಮತ್ತು ಮಿಲಿಟರಿ ವಿಚಾರಕ್ಕಷ್ಟೇ ಸೀಮಿತವಾಗಿರಲಿಲ್ಲ, ಬದಲಾಗಿ ತನ್ನ ಅಸ್ವಿತ್ವಕ್ಕೇ ಅಪಾಯ ಬರಬಹುದೆಂಬ ಆತಂಕ ಪಾಕಿಸ್ತಾನಕ್ಕೆ ಹಿಂದಿನಿಂದಲೂ ಇತ್ತು. ಒಂದು ವೇಳೆ ಎರಡೂ ದೇಶಗಳ ನಡುವೆ ಯುದ್ಧ ಸಂಭವಿಸಿದರೆ ಅದು ಕಾಶ್ಮೀರದ ವಿಚಾರವಾಗಿಯೇ ನಡೆಯಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.ಇದೇ ವೇಳೆ ಎರಡೂ ದೇಶಗಳ ನಡುವಿನ ಯುದ್ಧದ ಸಾಧ್ಯತೆ ಶೇ.20ರಷ್ಟೇ ಇದೆ ಎಂದು ಹೇಳಿರುವ ವರದಿ, ಭಾರೀ ಭಯೋತ್ಪಾದನಾ ದಾಳಿ, ತಪ್ಪು ಅಂದಾಜಿಸಿದ ಮಿಲಿಟರಿ ಕ್ರಮ ಅಥವಾ ದಿಢೀರ್ ಕೋಮು ಗಲಭೆಗಳು ಎರಡೂ ದೇಶಗಳನ್ನು ಪರಸ್ಪರ ಯುದ್ಧಭೂಮಿಗೆ ತಂದು ನಿಲ್ಲಿಸಬಹುದು ಎಂದು ಹೇಳಿದೆ.
ಹಾಗೆ ನೋಡಿದರೆ ಎರಡೂ ದೇಶಗಳಿಗೆ ಯುದ್ಧ ಬೇಕಿಲ್ಲ. ಆದರೆ ಭಾರತದ ಬೆಳವಣಿಗೆಯಿಂದ ಪಾಕ್‌ನ ನಿದ್ದೆ ಹಾಳಾಗಿತ್ತು. ಈ ಆತಂಕದಲ್ಲೇ ಅದು ಕಾಶ್ಮೀರದಲ್ಲಿ ಉಗ್ರರ ಮೂಲಕ ಛದ್ಮ ಸಮರಕ್ಕೆ ಹೊರಳಿತ್ತು. ಜತೆಗೆ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಭಾರತ ವಿರೋಧಿ ಉಗ್ರರಿಗೆ ಪಾಕಿಸ್ತಾನ ತರಬೇತಿ ಮತ್ತು ಶಸ್ತ್ರಾಸ್ತ್ರ ನೀಡುವ ಯೋಜನೆಯ ಕುರಿತೂ ಸುಳಿವು ನೀಡಿತ್ತು.ಒಂದು ವೇಳೆ ದೇಶದ ಆರ್ಥಿಕತೆ ಪತನಗೊಂಡರೆ, ಮಿಲಿಟರಿ ನಿರಂಕುಶವಾದಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಉಗ್ರರ ಜತೆ ಸೇರಿಕೊಂಡು ಭಾರತವನ್ನು ಕೆರಳಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸಬಹುದು. ಅಲ್ಲದೆ, ಭಾರತದ ರಾಜಕೀಯವು ಧಾರ್ಮಿಕ ಧ್ರುವೀಕರಣಕ್ಕೆ ಅವಕಾಶ ಮಾಡಿಕೊಟ್ಟರೆ ಕೋಮುದಳ್ಳುರಿಗೆ ಅವಕಾಶ ಮಾಡಿಕೊಡಬಹುದು. ಇದು ಭಾರತದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸಲು ಪಾಕಿಸ್ತಾನಕ್ಕೆ ಸಮರ್ಥನೆಯೂ ಕೊಡಬಹುದು ಎಂದು ವರದಿ ಎಚ್ಚರಿಸಿದೆ.