ಕೋವಿಡ್‌ ವೇಳೆ ಸಿಎಂ ಆಗಿದ್ದರೆ ಸ್ಟಾಲಿನ್‌ ಸಾಯ್ತಿದ್ರು : ಪಳನಿಸ್ವಾಮಿ ವಿವಾದ

KannadaprabhaNewsNetwork |  
Published : Apr 10, 2026, 02:30 AM ISTUpdated : Apr 10, 2026, 04:41 AM IST
palaniswamy

ಸಾರಾಂಶ

‘ಕೋರೋನಾ ಮಹಾಮಾರಿ ಇದ್ದಾಗ ರಾಜ್ಯದಲ್ಲಿ ಡಿಎಂಕೆ ಸರ್ಕಾರ ಇದ್ದಿದ್ದರೆ, ಸಿಎಂ ಸ್ಟಾಲಿನ್‌ ಸಾಯುತ್ತಿದ್ದರು’ ಎಂದು ಅಣ್ಣಾಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸ್ಟಾಲಿನ್‌ ಕೂಡ ತಿರುಗೇಟು ನೀಡಿದ್ದು, ‘ಜನರಿಗಾಗಿ ಸಾಯಲು ಹೆದರುವುದಿಲ್ಲ’ ಎಂದಿದ್ದಾರೆ.

 ಚೆನ್ನೈ/ವಿಲ್ಲುಪುರಂ: ‘ಕೋರೋನಾ ಮಹಾಮಾರಿ ಇದ್ದಾಗ ರಾಜ್ಯದಲ್ಲಿ ಡಿಎಂಕೆ ಸರ್ಕಾರ ಇದ್ದಿದ್ದರೆ, ಸಿಎಂ ಸ್ಟಾಲಿನ್‌ ಸಾಯುತ್ತಿದ್ದರು’ ಎಂದು ಅಣ್ಣಾಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಸ್ಟಾಲಿನ್‌ ಕೂಡ ತಿರುಗೇಟು ನೀಡಿದ್ದು, ‘ಜನರಿಗಾಗಿ ಸಾಯಲು ಹೆದರುವುದಿಲ್ಲ’ ಎಂದಿದ್ದಾರೆ.

ಚೆನ್ನೈನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ಪಳನಿಸ್ವಾಮಿ, ‘ಡಿಎಂಕೆ ಅಧಿಕಾರದಲ್ಲಿದ್ದಾಗ ಬರ, ಪ್ರವಾಹ, ಚಂಡಮಾರುತ ಅಥವಾ ಕೋರೋನಾ ಮಹಾಮಾರಿ ಬಂದಿರಲಿಲ್ಲ. ಒಂದೊಮ್ಮೆ ಬಂದಿದ್ದರೆ ಸ್ಟಾಲಿನ್‌ ಬದುಕಿರುತ್ತಿರಲಿಲ್ಲ’ ಎಂದು ಹೇಳಿದರು. 

ಸ್ಟಾಲಿನ್‌ ತಿರುಗೇಟು

ಇದಕ್ಕೆ ಪ್ರತ್ಯುತ್ತರ ನೀಡಿರುವ ಸ್ಟಾಲಿನ್‌, ‘ಸೋಲಿನ ಭಯದಲ್ಲಿ ಪಳನಿಸ್ವಾಮಿ ಪ್ರತಿದಿನ ಅಜಾಗರೂಕರಾಗಿ ಮಾತಾಡುತ್ತಿದ್ದಾರೆ ಹಾಗೂ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಜನರ ರಕ್ಷಣೆಗೆ ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇನೆ. ಸಾವಿಗೂ ಹೆದರುವುದಿಲ್ಲ’ ಎಂದು ವಿಲ್ಲುಪಿರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

ನಿತೀಶ್‌ 14ಕ್ಕೆ ರಾಜೀನಾಮೆ: ಸಾಮ್ರಾಟ್‌ ಚೌಧರಿ ಬಿಹಾರದ ಮುಂದಿನ ಸಿಎಂ?

ಪಟನಾ: ರಾಜ್ಯಸಭೆಗೆ ಆಯ್ಕೆ ಆಗಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಏ.14ಕ್ಕೆಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಬಿಜೆಪಿ ನಾಯಕ, ಡಿಸಿಎಂ ಸಾಮ್ರಾಟ್‌ ಚೌಧರಿ ಸಿಎಂ ಸ್ಥಾನದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.ನಿತೀಶ್‌ ಅವರು ಸಾಮ್ರಾಟ್‌ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ನಿತೀಶ್‌ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದೆಡೆ ಅವರು ಈಗಾಗಲೇ ಬಿಹಾರ ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

2026-27ರಲ್ಲಿ ಜಿಡಿಪಿ 6.6%: ವಿಶ್ವ ಬ್ಯಾಂಕ್‌ ಅಂದಾಜು 

ನವದೆಹಲಿ: ಕೊಲ್ಲಿ ಯುದ್ಧದ ಹೊರತಾಗ್ಯೂ 2026-27ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ.6.6ರ ಬೆಳವಣಿಗೆ ದಾಖಲಿಸಬಹುದು ಎಂದು ವಿಶ್ವ ಬ್ಯಾಂಕ್‌ ಅಂದಾಜಿಸಿದೆ. ಈ ಹಿಂದೆ ತಾನೇ ಅಂದಾಜಿಸಿದ್ದ ಶೇ.6.5ರ ಜಿಡಿಪಿಯನ್ನು ಇದೀಗ ಅದು ಶೇ.6.6ಕ್ಕೆ ಏರಿಸಿದೆ.ಜಾಗತಿಕ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ ಭಾರತದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ ಹಾಗೂ ವಿದೇಶಿ ವಿನಿಮಯ ಮೀಸಲು ಲಭ್ಯವಿದೆ. ಹೀಗಾಗಿ, ಇಂಧನ ಕೊರತೆ ಸೇರಿದಂತೆ ಪ್ರಸ್ತುತ ವಿವಿಧ ಆಘಾತವನ್ನು ನಿಭಾಯಿಸಲು ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ಅದು ಹೇಳಿದೆ.

2024-25ನೇ ಆರ್ಥಿಕ ವರ್ಷದಲ್ಲಿ ಶೇ.7.1 ಇದ್ದ ಜಿಡಿಪಿ 2025-26ರಲ್ಲಿ ಶೇ.7.6ಕ್ಕೆ ಏರಿಕೆಯಾಗಿತ್ತು. ಸ್ಥಿರವಾದ ದೇಶೀಯ ಬೇಡಿಕೆ ಮತ್ತು ರಫ್ತು ಇದಕ್ಕೆ ಕಾರಣವಾಗಿದ್ದವು. ಆದಾಗ್ಯೂಜಾಗತಿಕ ಸ್ಥಿತ್ಯಂತರದ ಕಾರಣ 2026-27ಕ್ಕೆ ಭಾರತದ ಜಿಡಿಪಿ ಶೇ.6.5ರ ದರದಲ್ಲಿ ಬೆಳವಣಿಗೆ ಆಗಬಹುದು ಎಂದು ವಿಶ್ವಬ್ಯಾಂಕ್‌ ಈ ಹಿಂದೆ ಅಂದಾಜಿಸಿತ್ತು. ಆದರೆ ಇದೀಗ ಕೊಂಚ ಹೆಚ್ಚಿಸಿದೆ.

ಚಿತ್ರೀಕರಣ ವೇಳೆ ಅವಘಡ: ನಟ ಅಕ್ಷಯ್‌ ಕುಮಾರ್‌ಗೆ ಗಾಯ

ಮುಂಬೈ: ಬಹು ನಿರೀಕ್ಷಿತ ಹಾರರ್‌ ಸಿನಿಮಾ ‘ ಭೂತ್‌ ಬಂಗ್ಲಾ’ದ ಸಾಹಸ ದೃಶ್ಯ ಚಿತ್ರೀಕರಣ ವೇಳೆ ನಟ ಅಕ್ಷಯ್‌ ಕುಮಾರ್‌ ಗಾಯಗೊಂಡಿದ್ದಾರೆ.ಯಾವಾಗ, ಎಲ್ಲಿ ಘಟನೆ ನಡೆಯಿತು ಎನ್ನುವ ಮಾಹಿತಿ ಲಭ್ಯವಿಲ್ಲ. ಆದರೆ ಚಿತ್ರೀಕರಣದ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ. ಅದರಲ್ಲಿ ನಟ ಕಿಕ್‌ ಮಾಡುವಾಗ ಸಮತೋಲನ ಕಳೆದುಕೊಂಡು ಕೆಳಕ್ಕೆ ಬಿದ್ದಿರುವುದು ಸೆರೆಯಾಗಿದೆ. ಈ ಸಿನಿಮಾದ ಮೂಲಕ ನಿರ್ದೇಶಕ ಪ್ರಿಯಾದರ್ಶನ್‌ ಮತ್ತು ಅಕ್ಷಯ್‌ 15 ವರ್ಷಗಳ ಬಳಿಕ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ಟ್ರಾಫಿಕ್‌ ನಿಯಮ ಉಲ್ಲಂಘಿಸಿ ಚಲನ್‌ನಲ್ಲಿ ಸಿಕ್ಕಿಬಿದ್ದ ಬೈಕ್‌ ಕಳ್ಳ

ಹೈದರಾಬಾದ್‌: ಕಳ್ಳ ತಾನು ಅದೆಷ್ಟೇ ಬುದ್ಧಿವಂತ ಅಂತ ಎನಿಸಿಕೊಂಡ್ರೂ ಒಂದಲ್ಲ ಒಂದು ಸುಳಿವು ಬಿಟ್ಟಿರುತ್ತಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮೂರು ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ಬೈಕ್‌ ಕದ್ದಿದ್ದ ಕಳ್ಳನೊಬ್ಬ ಟ್ರಾಫಿಕ್‌ ನಿಯಮ ಉಲ್ಲಂಘಿಸಿ ಫೋಟೋ ಸಮೇತ ಗಾಡಿ ಮಾಲೀಕರಿಗೆ ಸಿಕ್ಕಿ ಬಿದ್ದಿರುವ ವಿಚಿತ್ರ ಪ್ರಸಂಗ ನಡೆದಿದೆ.ಫೈಸಲ್‌ ರೆಹಮಾನ್‌ ಎಂಬುವರು 3 ತಿಂಗಳ ಹಿಂದೆ ತಮ್ಮ ಬೈಕ್‌ ಕಳೆದುಕೊಂಡಿದ್ದರು. ಆದೆಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಹಾಗಾಗಿ ಅವರು ಆಸೆಯನ್ನೇ ಕೈ ಬಿಟ್ಟಿದ್ದರು. ಆದರೆ ಅಚ್ಚರಿ ಎನ್ನುವಂತೆ ಕೆಲ ದಿನಗಳ ಹಿಂದೆ ಅದೇ ಬೈಕ್‌ ಸಂಖ್ಯೆಯಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘಿಸಿರುವ ಚಲನ್‌ ಅವರ ಮನೆಗೆ ಬಂದಿದೆ. ಈ ಚಲನ್‌ನಲ್ಲಿ ಬೈಕ್ ಕಳ್ಳನ ಫೋಟೋ ಸೆರೆಯಾಗಿತ್ತು.

ಇದನ್ನು ಟ್ವೀಟ್‌ ಮೂಲಕ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಫೈಸಲ್‌, ಹೈದರಾಬಾದ್‌ ಸಂಚಾರ ಪೊಲೀಸರು ಹಾಗೂ ಕೆಲವರಿಗೆ ಟ್ಯಾಗ್‌ ಮಾಡಿ ಆರೋಪಿ ಪತ್ತೆಗೆ ಮನವಿ ಮಾಡಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಹಲವು ನೆಟ್ಟಿಗರು ತಮ್ಮ ವಾಹನಗಳ ಕಳ್ಳತನ ಸಂದರ್ಭದಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋರ್ಮುಜ್‌ ಮೂಲಕ ನಿತ್ಯ 15 ನೌಕೆಗೆ ಇರಾನ್ ಅಸ್ತು
ಯುದ್ಧ ವಿರಾಮಕ್ಕೆಒಪ್ಪದಿದ್ರೆ ಇರಾನಿಗೆಮತ್ತೆ ದಾಳಿ : ಟ್ರಂಪ್‌