ಜು.22ರಿಂದ ಸಂಸತ್ತಿನ ಮುಂಗಾರು ಅಧಿವೇಶನ : ಜು.23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌

KannadaprabhaNewsNetwork |  
Published : Jul 21, 2024, 01:21 AM ISTUpdated : Jul 21, 2024, 04:48 AM IST
ಸಂಸತ್‌ | Kannada Prabha

ಸಾರಾಂಶ

ಸಂಸತ್ತಿನ ಮುಂಗಾರು ಅಧಿವೇಶನ ಜು.22ರಿಂದ ಆರಂಭವಾಗಲಿದ್ದು, ಆ.12ರ ವರೆಗೂ ನಡೆಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಜು.23ರಂದು ಕೇಂದ್ರ ಸರ್ಕಾರದ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದ್ದಾರೆ. ಅಧಿವೇಶನದ ಮೊದಲ ದಿನವಾದ ಸೋಮವಾರ ನಿರ್ಮಲಾ ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಿದ್ದಾರೆ.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜು.22ರಿಂದ ಆರಂಭವಾಗಲಿದ್ದು, ಆ.12ರ ವರೆಗೂ ನಡೆಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಜು.23ರಂದು ಕೇಂದ್ರ ಸರ್ಕಾರದ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದ್ದಾರೆ. ಅಧಿವೇಶನದ ಮೊದಲ ದಿನವಾದ ಸೋಮವಾರ ನಿರ್ಮಲಾ ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ಒಟ್ಟು ಆರು ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. 1934ರ ಏರ್‌ಕ್ರಾಫ್ಟ್‌ ಕಾಯ್ದೆಯನ್ನು ರದ್ದುಪಡಿಸಿ ಹೊಸ ಕಾಯ್ದೆ ತರಲು ಭಾರತೀಯ ವಾಯುಯಾನ ವಿಧೇಯಕ ಮಂಡಿಸಲಾಗುತ್ತದೆ. ಹಾಗೆಯೇ, 2024ನೇ ಸಾಲಿನ ಹಣಕಾಸು ಮಸೂದೆ, ಸ್ವಾತಂತ್ರ್ಯಪೂರ್ವಕ್ಕಿಂತ ಹಳೆಯ ಕಾಯ್ದೆಯನ್ನು ಬದಲಿಸಲು ಬಾಯ್ಲರ್ಸ್‌ ಮಸೂದೆ, ಕಾಫಿ ಮಸೂದೆ, ರಬ್ಬರ್‌ ಮಸೂದೆ ಮತ್ತು ವಿಪತ್ತು ನಿರ್ವಹಣೆ ತಿದ್ದುಪಡಿ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ನಿರ್ಧರಿಸಲಾಗಿದೆ.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದರು. ಬಳಿಕ ಲೋಕಸಭೆಗೆ ಚುನಾವಣೆ ನಡೆದಿತ್ತು. ಈಗ ಹೊಸ ಸರ್ಕಾರ ಬಂದಿರುವುದರಿಂದ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದ್ದಾರೆ. ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಸೋತರೂ ದುರಹಂಕಾರ ಯಾಕೆ? : ರಾಹುಲ್ ವಿರುದ್ಧ ಶಾ ವಾಗ್ದಾಳಿ

ರಾಂಚಿ: ‘ಚುನಾವಣೆಯಲ್ಲಿ ಗೆದ್ದವರೂ ಈ ರೀತಿ ದುರಂಹಕಾರ ತೋರಿಸುವುದಿಲ್ಲ. ಮೂರು ಬಾರಿ ಸೋತರೂ ಕಾಂಗ್ರೆಸ್‌ ಪಕ್ಷದ ನಾಯಕ ಸೋಲನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, ‘ಹಲವು ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ದುರಹಂಕಾರ ತೋರಿಸುವವರನ್ನು ನಾವು ನೋಡುತ್ತೇವೆ. ಆದರೆ ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ (ಕಾಂಗ್ರೆಸ್‌ ) ಪಕ್ಷ ಚುನಾವಣೆಯಲ್ಲಿ ಸೋತರೂ ದುರಂಹಕಾರ ಪ್ರದರ್ಶಿಸುತ್ತಾರೆ. ಈ ರೀತಿ ಮೊದಲ ಸಲ ನೋಡುತ್ತಿದ್ದೇನೆ’ಎಂದು ಲೋಕಸಭೆ ಫಲಿತಾಂಶವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಎರಡು, ಮೂರು ಸಲ ಸತತವಾಗಿ ಗೆದ್ದರು ರಾಹುಲ್ ಗಾಂಧಿಯವರ ರೀತಿ ಅಹಂಕಾರ ತೋರಿಸಲ್ಲ ಎಂದಿರುವ ಅಮಿತ್ ಶಾ, ‘ ಚುನಾವಣೆಯಲ್ಲಿ ಎನ್‌ಡಿಎ ಪೂರ್ಣ ಬಹುಮತ ಪಡೆದು ಗೆಲುವು ಸಾಧಿಸಿದೆ. ಬಿಜೆಪಿ ಒಂದೇ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಂಡಿಯಾ ಕೂಟ ಪಡೆದಿರುವುದಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಆದರೂ ಯಾಕೆ ಈ ದುರಂಹಕಾರ? ಬಿಜೆಪಿ 2014,2019,2024.. ಮೂರು ಅವಧಿಯಲ್ಲಿಯೂ ಇಂಡಿಯಾ ಕೂಟದ ಮತಗಳಿಗಿಂತ ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದಿದೆ. ನಾವು ಮೂರು ಬಾರಿ ಗೆದ್ದಿದ್ದೇವೆ. ಆದರೆ ಅವರ ನಾಯಕ ಈಗಲೂ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ’ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಪತ್ರಿಕಾ ಸ್ವಾತಂತ್ರ್ಯ ಕುರಿತು ದನಿ ಎತ್ತುವಂತೆ ರಾಹುಲ್‌ಗೆ ಸಂಪಾದಕರ ಗಿಲ್ಡ್‌ ಮನವಿ

ನವದೆಹಲಿ: ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದ್ದು, ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ, ಸರ್ಕಾರ ಗಮನ ಹರಿಸುವಂತೆ ಮಾಡಬೇಕು ಎಂದು ಸಂಪಾದಕರ ಒಕ್ಕೂಟ (ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ) ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಮುಖೇನ ಮನವಿ ಮಾಡಿದೆ ಪತ್ರದಲ್ಲಿ, ‘ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕೇಂದ್ರ ಸರ್ಕಾರದ ಒತ್ತಡ ಹೆಚ್ಚಾಗುತ್ತಿದೆ. ಇದು ಮುಂದುವರೆದರೆ, ಭಾರತದಂತಹ ಪ್ರಜಾಪ್ರಭುತ್ವ ದೇಶಕ್ಕೆ ಆಪತ್ತು. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿದೆ. ಜೊತೆಗೆ ಪತ್ರಿಕೆ ಹಾಗೂ ಮಾಧ್ಯಮಗಳ ಬಗೆಗಿನ ಕಾನೂನುಗಳಲ್ಲಿನ ತಿದ್ದುಪಡಿಯನ್ನು ಸರಿಮಾಡುವಂತೆ ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕೆಂದು ಅದು ಮನವಿ ಮಾಡಿದೆ.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ