ನಗುವಿನ ಚಿಕಿತ್ಸೆಗೆ ಹೋಗಿದ್ದ ವರ ಮದ್ವೆಗೆ ಮುನ್ನ ಸಾವು!

KannadaprabhaNewsNetwork | Updated : Feb 21 2024, 12:21 PM IST

ಸಾರಾಂಶ

ಸ್ಮೈಲ್ ಎನ್‌ಹಾನ್ಸ್‌ಮೆಂಟ್‌ ಶಸ್ತ್ರಚಿಕಿತ್ಸೆಗೆ ಹೋಗಿದ್ದ ಯುವಕ ಸಾವನ್ನಪ್ಪಿದ್ದಾರೆ. ವೈದ್ಯರ ಅತಿಯಾದ ಅರವಳಿಕೆಯಿಂದಲೇ ಮಗನ ಸಾವು ಉಂಟಾಗಿದೆ ಎಂಬುದು ಆತನ ಪೋಷಕರ ಆರೋಪವಾಗಿದೆ.

ಹೈದರಾಬಾದ್‌: ತನ್ನ ವಿವಾಹದ ಸಮಯದಲ್ಲಿ ತಾನು ಹೆಚ್ಚು ಹಸನ್ಮುಖಿಯಾಗಿ ಕಾಣಿಸಿಕೊಳ್ಳಲು ಹಾಗೂ ಉತ್ತಮವಾದ ಸ್ಮೈಲ್‌ (ನಗು) ಪಡೆಯಲು ‘ಸ್ಮೈಲ್- ಎನ್‌ಹಾನ್ಸ್‌ಮೆಂಟ್‌’ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿದ್ದ 28 ವರ್ಷದ ಯುವಕನೊಬ್ಬ, ಮದುವೆಗೂ ಮುನ್ನ ಚಿಕಿತ್ಸೆ ವೇಳೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. 

ವರ ಲಕ್ಷ್ಮೀ ನಾರಾಯಣ ವಿಂಜಮ್ (28) ಸ್ಮೈಲ್- ಎನ್‌ಹಾನ್ಸ್‌ಮೆಂಟ್‌ ಚಿಕಿತ್ಸೆ ಮಾಡಿಸಿಕೊಳ್ಳಲು ಫೆ.16ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು ವಿಂಜಮ್‌ ಅವರಿಗೆ 2 ಗಂಟೆಗಳ ಕಾಲ ‘ಸ್ಮೈಲ್ ಡಿಸೈನಿಂಗ್’ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಆದರೆ ಶಸ್ತ್ರಚಿಕಿತ್ಸೆ ಮುಗಿದ ಬಳಿಕವೂ ವಿಂಜಮ್‌ ಪ್ರಜ್ಞಾಹೀನ ಸ್ಥಿತಿಯಿಂದ ಎಚ್ಚರಗೊಂಡಿಲ್ಲ. ಇದಕ್ಕೆ ವೈದ್ಯರು ಅತಿಯಾದ ಅರವಳಿಕೆ ನೀಡಿದ್ದೇ ಕಾರಣ ಎನ್ನಲಾಗಿದೆ. ಇನ್ನು ವಿಂಜಮ್‌ ಸ್ಥಿತಿ ಕುರಿತು ಗಾಬರಿಯಾದ ವೈದ್ಯರು ಅವರ ಪೋಷಕರಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದಾರೆ. 

ಬಳಿಕ ವಿಂಜಮ್‌ರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ‘ಕ್ಲಿನಿಕ್‌ನವರು ಶಸ್ತ್ರಚಿಕಿತ್ಸೆ ವೇಳೆ ನಮ್ಮ ಮಗನಿಗೆ ಅತಿಯಾದ ಅರವಳಿಕೆ ನೀಡಿದ್ದರಿಂದಲೇ ಆತ ಸಾವನ್ನಪ್ಪಿದ್ದಾನೆ. 

ಶಸ್ತ್ರಚಿಕಿತ್ಸೆ ಬಗ್ಗೆ ತಮ್ಮ ಮಗ ತಿಳಿಸಿರಲಿಲ್ಲ ಅವನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವನ ಸಾವಿಗೆ ವೈದ್ಯರೇ ಕಾರಣ’ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಸದ್ಯ ವಿಂಜಮ್‌ ಮನೆಯವರ ದೂರಿನ ಮೇರೆಗೆ ಕ್ಲಿನಿಕ್‌ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ.

Share this article