ಭೋಪಾಲ್: ನಾನು ಈ ಹಿಂದೆ ಆಡಿದ್ದ ಕೆಲ ಮಾತುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟವಾಗಿರಲಿಲ್ಲ. ಆಗಲೇ ಅವರು ನನ್ನನ್ನು ಉದ್ದೇಶಿಸಿ ನಿನ್ನನ್ನು ಕ್ಷಮಿಸಲ್ಲ ಎಂದು ಹೇಳಿದ್ದರು ಎಂದು ಭೋಪಾಲ್ ಕ್ಷೇತ್ರದ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಹೇಳಿದ್ದಾರೆ.
ಭೋಪಾಲ್ ಟಿಕೆಟ್ ತಪ್ಪಿದ ಬಳಿಕ ಪ್ರತಿಕ್ರಿಯಿಸಿರುವ ಪ್ರಜ್ಞಾ, ‘ಈ ಹಿಂದೆಯೂ ನಾನು ಟಿಕೆಟ್ ಕೇಳಿರಲಿಲ್ಲ, ಈಗಲೂ ಕೇಳಿರಲಿಲ್ಲ. ಈ ಹಿಂದೆ ನಾನು ಆಡಿದ್ದ ಮಾತುಗಳು ಪ್ರಧಾನಿ ಮೋದಿ ಅವರಿಗೆ ಬೇಸರ ತಂದಿತ್ತು.
ಆ ವಿಷಯದಲ್ಲಿ ನನ್ನನ್ನು ಕ್ಷಮಿಸಲ್ಲ ಎಂದು ಅವರು ಹೇಳಿದ್ದರು. ಆದರೆ ಈ ವಿಷಯದಲ್ಲಿ ನಾವು ಈಗಾಗಲೇ ಅವರ ಬಳಿ ಕ್ಷಮೆ ಕೇಳಿದ್ದೇನೆ’ ಎಂದು ಹೇಳಿದ್ದಾರೆ.
2019ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ‘ಮಹಾತ್ಮಾ ಗಾಂಧೀಜಿ ಅವರನ್ನು ಹತ್ಯೆ ಮಾಡಿದವರು ನಿಜವಾದ ದೇಶ ಪ್ರೇಮಿಗಳು’ ಎಂದು ಹೇಳಿದ್ದರು. ಈ ವಿಷಯ ದೇಶವ್ಯಾಪಿ ಭಾರೀ ಟೀಕೆಗೆ ಗುರಿಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮೋದಿ,‘ಗಾಂಧೀಜಿ ಮತ್ತು ನಾಥೂರಾಂ ಗೋಡ್ಸೆ ಬಗ್ಗೆ ಪ್ರಜ್ಞಾ ಠಾಕೂರ್ ಆಡಿದ ಮಾತುಗಳು ಅತ್ಯಂತ ಆಕ್ಷೇಪಾರ್ಹ ಮತ್ತ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತವೆ.
ಈ ಬಗ್ಗೆ ಅವರು ಕ್ಷಮೆ ಕೇಳಿದ್ದರೂ ನಾನೆಂದೂ ಅವರನ್ನು ಪೂರ್ಣವಾಗಿ ಕ್ಷಮಿಸಲಾರೆ. ಇಂಥ ಮಾತುಗಳನ್ನು ಆಡುವ ಮುನ್ನ ಅವರು 100 ಬಾರಿ ಯೋಚಿಸಬೇಕು’ ಎಂದು ಕಿಡಿಕಾರಿದ್ದರು.