‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ತರುವುದರ ಪರ ಮತ್ತೆ ಪ್ರಧಾನಿ ನರೇಂದ್ರ ಮೋದಿ ಬ್ಯಾಟಿಂಗ್‌

KannadaprabhaNewsNetwork |  
Published : Aug 16, 2024, 12:52 AM ISTUpdated : Aug 16, 2024, 05:22 AM IST
ಮೋದಿ | Kannada Prabha

ಸಾರಾಂಶ

ಪ್ರಧಾನಿ ಮೋದಿ 'ಒಂದು ದೇಶ, ಒಂದು ಚುನಾವಣೆ' ವ್ಯವಸ್ಥೆ ಜಾರಿಗೆ ಮತ್ತೆ ಒತ್ತು ನೀಡಿದ್ದಾರೆ. ಪದೇ ಪದೇ ಚುನಾವಣೆಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು.

 ನವದೆಹಲಿ :  ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ತರುವುದರ ಪರ ಮತ್ತೆ ಪ್ರಧಾನಿ ನರೇಂದ್ರ ಮೋದಿ ಬ್ಯಾಟಿಂಗ್‌ ಮಾಡಿದ್ದು, ರಾಜಕೀಯ ಪಕ್ಷಗಳು ಈ ಕನಸನ್ನು ನನಸಾಗಿಸಲು ಮುಂದೆ ಬರಬೇಕು ಎಂದು ಕರೆ ನೀಡಿದ್ದಾರೆ.

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಪದೇ ಪದೇ ನಡೆಯುವ ಚುನಾವಣೆಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿವೆ. ಹೀಗಾಗಿ ದೇಶದೆಲ್ಲೆಡೆ ಒಂದೇ ಸಲ ಚುನಾವಣೆ ನಡೆಸುವ ಬಗ್ಗೆ ಸಾಕಷ್ಟು ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ಅಭಿಪ್ರಾಯ ಹೇಳಿವೆ. ಈ ಕುರಿತು ರಚಿಸಲಾಗಿದ್ದ ಸಮಿತಿ ಕೂಡ ಅದ್ಭುತವಾದ ವರದಿಯೊಂದನ್ನು ಸಲ್ಲಿಸಿದೆ’ ಎಂದು ಹೇಳಿದರು.

‘ದೇಶದಲ್ಲಿ ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಒಂದಲ್ಲಾ ಒಂದು ಕಡೆ ಚುನಾವಣೆ ನಡೆಯುತ್ತದೆ. ಯಾವುದೇ ಯೋಜನೆಯನ್ನು ಚುನಾವಣೆಯೊಂದಿಗೆ ಜೋಡಿಸುವುದು ಬಹಳ ಸುಲಭವಾಗಿಬಿಟ್ಟಿದೆ. ಎಲ್ಲಾ ಕೆಲಸವೂ ಚುನಾವಣೆಯ ಜೊತೆಗೆ ನಂಟು ಹೊಂದಿದೆ. ಇದು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಹೀಗಾಗಿ ದೇಶವು ಏಕ ಚುನಾವಣೆಯ ಪರ ನಿಂತಿದೆ. ರಾಜಕೀಯ ಪಕ್ಷಗಳಿಗೆ ನಾನು ಕೆಂಪು ಕೋಟೆಯ ಮೇಲಿನಿಂದ, ರಾಷ್ಟ್ರಧ್ವಜದ ಸಾಕ್ಷಿಯಾಗಿ ದೇಶದ ಪ್ರಗತಿಯಲ್ಲಿ ಕೈಜೋಡಿಸಲು ಮನವಿ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ಏಕಕಾಲಕ್ಕೆ ಎಲ್ಲಾ ಚುನಾವಣೆಗಳು ನಡೆದರೆ ದೇಶಕ್ಕೆ ಅಪಾರ ಹಣ ಉಳಿತಾಯವಾಗುತ್ತದೆ. ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಪ್ರಜಾಪ್ರಭುತ್ವದ ತಳಹದಿ ಭದ್ರವಾಗುತ್ತದೆ. ಭಾರತದ ಆಶೋತ್ತರಗಳು ಈಡೇರುತ್ತವೆ’ ಎಂದು ತಿಳಿಸಿದರು.

ರಾಜಕೀಯ ಹಿನ್ನೆಲೆಯಿಲ್ಲದ 1 ಲಕ್ಷ ಯುವಕರನ್ನು ರಾಜಕೀಯಕ್ಕೆ ತನ್ನಿ!

 ನವದೆಹಲಿ :‘ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ರಾಜಕಾರಣಕ್ಕೆ ಕರೆದುಕೊಂಡು ಬನ್ನಿ. ಅವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲಿ. ಆಗ ನೋಡಿ, ಈ ದೇಶದಲ್ಲಿ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕಣ್ಮರೆಯಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಕುಟುಂಬ ರಾಜಕೀಯದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

78ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಕುರಿತು ದೇಶಕ್ಕೆ ವಿನೂತನ ಕರೆ ನೀಡಿದ ಅವರು, ‘ನಮ್ಮ ದೇಶದ ರಾಜಕೀಯ ಕ್ಷೇತ್ರಕ್ಕೆ ಒಂದು ಲಕ್ಷ ಹೊಸ ಜನಪ್ರತಿನಿಧಿಗಳು ಬರಬೇಕು. ಅವರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಯುವಕರಾಗಿರಬೇಕು. ಅವರ ಅಪ್ಪ-ಅಮ್ಮ, ಅಣ್ಣ-ತಮ್ಮ, ಮಾವ-ಅತ್ತೆ ಅಥವಾ ಸಂಬಂಧಿಕರು ಯಾವತ್ತೂ ರಾಜಕಾರಣದಲ್ಲಿ ಇದ್ದಿರಬಾರದು.

 ಅಂತಹ ಪ್ರತಿಭಾವಂತ, ಹೊಸ ರಕ್ತ ರಾಜಕಾರಣಕ್ಕೆ ಬರಬೇಕು. ಅವರು ಪಂಚಾಯ್ತಿ, ನಗರಪಾಲಿಕೆ, ಜಿಲ್ಲಾ ಪರಿಷತ್‌, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಿಗೆ ಬೇಕಾದರೂ ಆಯ್ಕೆಯಾಗಲಿ. ಆಗ ದೇಶದಿಂದ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ತನ್ನಿಂತಾನೇ ಮರೆಯಾಗುತ್ತದೆ. ತನ್ಮೂಲಕ ರಾಜಕೀಯಕ್ಕೆ ಹೊಸ ಐಡಿಯಾಗಳು ಬರುತ್ತವೆ’ ಎಂದು ಹೇಳಿದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ