ನವದೆಹಲಿ: 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ರಹಸ್ಯವಾಗಿ ರಾಷ್ಟ್ರಪತಿಗಳನ್ನು ಖುದ್ದಾಗಿ ಭೇಟಿಯಾಗಿದ್ದರು ಹಾಗೂ ಯಾವುದೇ ಬೆಂಗಾವಲು ವಾಹನವಿಲ್ಲದೆ ಏಕಾಂಗಿಯಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.
2019ರ ಆ.4ರ ಸಂಜೆ ಮೋದಿಯವರು ತಮಗಿದ್ದ ಕಡ್ಡಾಯ ಭದ್ರತೆಯನ್ನು ತ್ಯಜಿಸಿ ಏಕಾಂಗಿಯಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರನ್ನು ಭೇಟಿಯಾಗಿದ್ದರು.
ಆ ಭೇಟಿಯಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವುದರ ಅಗತ್ಯವನ್ನು ಸ್ವತಃ ತಾವೇ ವಿವರಿಸಿದ್ದರು.
370ನೇ ಪರಿಚ್ಛೇದ ರದ್ದುಪಡಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ವಿಪಕ್ಷಗಳಿಗೆ ಈ ಕುರಿತ ಸಿದ್ಧತೆಯ ಬಗ್ಗೆ ಮಾಹಿತಿ ತಿಳಿಯದಂತೆ ರಹಸ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿದ್ದರು ಎಂದು ಹೇಳಲಾಗಿದೆ.
ನಂತರ ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೂ ರಿಸ್ಕ್ ತೆಗೆದುಕೊಂಡು ಜಮ್ಮು ಕಾಶ್ಮೀರ ಮರುವಿಂಗಡಣೆ ಮಸೂದೆ-2019ನ್ನು ಲೋಕಸಭೆಯ ಬದಲು ರಾಜ್ಯಸಭೆಯಲ್ಲೇ ಮೊದಲು ಆ.5ರಂದು ಮಂಡಿಸಲಾಗಿತ್ತು.
ಲೋಕಸಭೆಯಲ್ಲಿ ಮೊದಲು ಮಂಡಿಸಿದ್ದರೆ ವಿಪಕ್ಷಗಳು ಎಚ್ಚೆತ್ತುಕೊಂಡು ನಂತರ ರಾಜ್ಯಸಭೆಯಲ್ಲಿ ಅದು ಪಾಸಾಗದಂತೆ ನೋಡಿಕೊಳ್ಳುವ ಅಪಾಯವಿತ್ತು.
ಹೀಗಾಗಿ ಮೊದಲು ರಾಜ್ಯಸಭೆಯಲ್ಲಿ ಅಂಗೀಕರಿಸಿಕೊಂಡು, ನಂತರ ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತು ಎಂದು ತಿಳಿದುಬಂದಿದೆ.