ಶಿರಡಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಹಮದ್‌ನಗರ ಜಿಲ್ಲೆಯ ನೀಲ್ವಾಂಡೆ ಅಣೆಕಟ್ಟಿನ ಎಡದಂಡೆ ಕಾಲುವೆ ಉದ್ಘಾಟಿಸಲು ಆಗಮಿಸಿದ್ದ ಮೋದಿ, ಅದಕ್ಕೂ ಮೊದಲು ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರಾಜ್ಯಪಾಲರಾದ ರಮೇಶ್ ಬೈಸ್ ಕೂಡ ಹಾಜರಿದ್ದರು. ಬಳಿಕ ಅಣೆಕಟ್ಟಿಗೆ ತೆರಳಿದ ಮೋದಿ, ಅಲ್ಲಿ ‘ಜಲಪೂಜೆ’ ನೆರವೇರಿಸಿದರು. ನಂತರ 85 ಕಿ.ಮೀ ಉದ್ದದ ಕಾಲುವೆ ನೀರಿನ ಮಾರ್ಗವನ್ನು ಉದ್ಘಾಟಿಸಿದರು. ಇದು ಅಲ್ಲಿನ ಸುಮಾರು 182 ಹಳ್ಳಿಗಳಿಗೆ ನೀರಿನ ಪ್ರಯೋಜನ ನೀಡಲಿದ್ದು, 5,177 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲ್ಪಟ್ಟಿದೆ.