ಸಂಸದ ಪ್ರಜ್ವಲ್‌ರಂಥವರ ಬಗ್ಗೆ ಸಹಿಷ್ಣುತೆ ಇರಬಾರದು: ಮೋದಿ

KannadaprabhaNewsNetwork | Updated : May 07 2024, 06:47 AM IST

ಸಾರಾಂಶ

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಇದ್ದಾಗ ವಿಡಿಯೋ ಸಂಗ್ರಹಿಸಿ ಈಗ ಹೊರಗೆ ಹರಿಬಿಟ್ಟಿದ್ದಾರೆ. ಪ್ರಜ್ವಲ್‌ ವಿದೇಶಕ್ಕೆ ಹೋಗಲು ಕಾಂಗ್ರೆಸ್‌ ಸರ್ಕಾರದಿಂದಲೇ ಅವಕಾಶ: ನೀಡಲಾಗಿದೆ ಎಂದು ಹಾಸನ ರಾಸಲೀಲೆ ಬಗ್ಗೆ ಪ್ರಧಾನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

 ನವದೆಹಲಿ :  ಅಮಾನತಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಇದೇ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಜ್ವಲ್‌ರಂಥವರ ಬಗ್ಗೆ ಸಹಿಷ್ಣುತೆಯೇ ಇರಬಾರದು’ ಎಂದಿದ್ದಾರೆ. 

ಅಲ್ಲದೆ, ‘ಮೋದಿ ಸರ್ಕಾರವೇ ಪ್ರಜ್ವಲ್‌ರನ್ನು ದೇಶ ಬಿಟ್ಟು ಹೋಗಲು ಅನುವು ಮಾಡಿಕೊಟ್ಟಿದೆ’ ಎಂಬ ಕಾಂಗ್ರೆಸ್‌ ಆರೋಪ ತಿರಸ್ಕರಿಸಿರುವ ಅವರು, ‘ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಜೆಡಿಎಸ್ ಸಂಸದನನ್ನು ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮತದಾನ ಮುಗಿದ ನಂತರ ರಾಸಲೀಲೆ ವಿಡಿಯೋಗಳನ್ನು ಬಿಡುಗಡೆ ಮಾಡಿದೆ’ ಎಂದು ಆರೋಪಿಸಿದ್ದಾರೆ.‘

ಟೈಮ್ಸ್‌ ನೌ’ ಸುದ್ದಿವಾಹಿನಿಗೆ ಸೋಮವಾರ ಸಂದರ್ಶನ ನೀಡಿದ ಮೋದಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಸುದೀರ್ಘವಾಗಿ ಉತ್ತರಿಸಿ, ‘ಪ್ರಜ್ವಲ್‌ ಮೇಲಿನ ಆರೋಪದ ಪ್ರಕರಣವು ರಾಜ್ಯವೊಂದರ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವ ಹೊಣೆ ರಾಜ್ಯ ಸರ್ಕಾರದ್ದು’ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಸಾವಿರಾರು ವಿಡಿಯೋಗಳು ಈ ಪ್ರಕರಣದಲ್ಲಿ ಇವೆ ಎಂದಾದಲ್ಲಿ ಅದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲೇ ಸಂಗ್ರಹಿಸಿದ್ದಿರಬೇಕು. ಯಾವಾಗ ಒಕ್ಕಲಿಗರ ಮತದಾನ ಮುಗಿಯಿತೋ ಆ ನಂತರ ಬಿಡುಗಡೆ ಮಾಡಲಾಯಿತು’ ಎಂದಿದ್ದಾರೆ.

‘ವಿಡಿಯೋಗಳು ಬಿಡುಗಡೆ ಆಗಿದ್ದು ಅವರು ದೇಶ ಬಿಟ್ಟು ಹೋದ ನಂತರ. ಹೀಗಾಗಿ ಇಡೀ ಪ್ರಕರಣವೇ ಸಂದೇಹಾಸ್ಪದವಾಗಿದೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇದ್ದರೆ ಅವರ ಮೇಲೆ ಕಣ್ಣಿಡಬೇಕಾಗಿತ್ತು. ವಿಮಾನ ನಿಲ್ದಾಣದಲ್ಲೂ ಕಟ್ಟೆಚ್ಚರ ವಹಿಸಬೇಕಾಗಿತ್ತು’ ಎಂದಿದ್ದಾರೆ.

‘ಆದರೆ ನೀವು (ಕಾಂಗ್ರೆಸ್) ಏನೂ ಮಾಡಲಿಲ್ಲ. ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಿಲ್ಲ. ಇದು ನೀವು ರಾಜಕೀಯ ಆಟ ಆಡುತ್ತಿದ್ದೀರಿ ಎಂಬುದರ ಸಂಕೇತ. ಅಲ್ಲದೆ, ಈ ವಿಡಿಯೋಗಳನ್ನು ನೀವು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದಾಗಲೇ ಸಂಗ್ರಹಿಸಿದ್ದೀರಿ ಎಂದರ್ಥ. ಆದರೆ ನನ್ನ ಪ್ರಕಾರ ಇದು ವಿಷಯವಲ್ಲ. ಯಾವುದೇ ಅಪರಾಧಿಯನ್ನು ಸುಮ್ಮನೇ ಬಿಡಬಾರದು ಎಂಬುದು ನನ್ನ ಉದ್ದೇಶ. ಇಂಥ ಆಟಗಳು ದೇಶದಲ್ಲಿ ನಿಲ್ಲಬೇಕು’ ಎಂದಿದ್ದಾರೆ.

‘ಇಂಥ ವ್ಯಕ್ತಿಗಳ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಅಲ್ಲದೆ, ಎಲ್ಲ ಕಾನೂನು ಆಯ್ಕೆಗಳನ್ನು ಬಳಸಿಕೊಂಡು ಇಂಥವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದೂ ಮೋದಿ ಆಗ್ರಹಿಸಿದ್ದಾರೆ.

‘ಅವರನ್ನು (ಪ್ರಜ್ವಲ್‌ರನ್ನು) ಮರಳಿ ಕರೆತರಬೇಕು ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಮೀನಮೇಷ ಸಲ್ಲದು’ ಎಂದೂ ಮೋದಿ ಸ್ಪಷ್ಟಪಡಿಸಿದ್ದಾರೆ.

ಮೋದಿ ಹೇಳಿದ್ದೇನು?1. ಪ್ರಜ್ವಲ್‌ ವಿರುದ್ಧದ ಪ್ರಕರಣ ರಾಜ್ಯವೊಂದರ ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವ ಹೊಣೆ ರಾಜ್ಯ ಸರ್ಕಾರದ್ದು2. ಸಾವಿರಾರು ವಿಡಿಯೋಗಳು ಈ ಪ್ರಕರಣದಲ್ಲಿ ಇವೆ ಎಂದಾದಲ್ಲಿ ಅದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲೇ ಸಂಗ್ರಹಿಸಿದ್ದಿರಬೇಕು3. ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮತದಾನ ಮುಗಿದ ನಂತರ, ದೇಶ ತೊರೆದ ಬಳಿಕ ರಾಸಲೀಲೆ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ4. ಇಡೀ ಪ್ರಕರಣವೇ ಸಂದೇಹಾಸ್ಪದವಾಗಿದೆ. ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದರೆ ಪ್ರಜ್ವಲ್‌ ಮೇಲೆ ಕಣ್ಣಿಡಬೇಕಾಗಿತ್ತು. ವಿಮಾನ ನಿಲ್ದಾಣದಲ್ಲೂ ಕಟ್ಟೆಚ್ಚರ ವಹಿಸಬೇಕಾಗಿತ್ತು5. ಪ್ರಜ್ವಲ್‌ರಂಥ ವ್ಯಕ್ತಿಗಳ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಅಲ್ಲದೆ, ಎಲ್ಲ ಕಾನೂನು ಆಯ್ಕೆಗಳನ್ನು ಬಳಸಿಕೊಂಡು ಇಂಥವರಿಗೆ ಕಠಿಣ ಶಿಕ್ಷೆ ವಿಧಿಸಬೇಕು

Share this article