ನಾವು ಬರಿ ಘೋಷಣೆಯಲ್ಲ, ಅಭಿವೃದ್ಧಿ ಮಾಡ್ತೇವೆ: ಕೈಗೆ ಮೋದಿ ತಿರುಗೇಟು

KannadaprabhaNewsNetwork |  
Published : Feb 05, 2025, 12:31 AM IST
ಮೋದಿ | Kannada Prabha

ಸಾರಾಂಶ

‘ನಾವು ಕೇವಲ ಘೋಷಣೆಗಳನ್ನು ಕೊಡುವುದಿಲ್ಲ, ಬದಲಿಗೆ ಅಭಿವೃದ್ಧಿ ಮಾಡುತ್ತೇವೆ. 5 ದಶಕಗಳ ಕಾಲ ಗರೀಬೀ ಹಟಾವೋ ಘೋಷಣೆಯಷ್ಟೇ ಕೇಳುತ್ತಿತ್ತು. ಆದರೆ ಈಗ 25 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ನವದೆಹಲಿ: ‘ನಾವು ಕೇವಲ ಘೋಷಣೆಗಳನ್ನು ಕೊಡುವುದಿಲ್ಲ, ಬದಲಿಗೆ ಅಭಿವೃದ್ಧಿ ಮಾಡುತ್ತೇವೆ. 5 ದಶಕಗಳ ಕಾಲ ಗರೀಬೀ ಹಟಾವೋ ಘೋಷಣೆಯಷ್ಟೇ ಕೇಳುತ್ತಿತ್ತು. ಆದರೆ ಈಗ 25 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಸಭೆಯಲ್ಲಿ, ‘ಮೇಕ್‌ ಇನ್‌ ಇಂಡಿಯಾ ಯೋಜನೆ ಸೋತಿದೆ’ ಎಂದಿದ್ದ ರಾಹುಲ್‌ ಗಾಂಧಿಗೆ, ಅವರ ಪಕ್ಷ ಜಾರಿಗೆ ತಂದಿದ್ದ ಗರೀಬೀ ಹಟಾವೋ ಕೂಡ ಬಡತನ ನಿವಾರಣೆಯಲ್ಲಿ ವಿಫಲವಾಗಿದ್ದನ್ನು ಮೋದಿ ನೆನಪಿಸಿದ್ದಾರೆ.

‘ಈವರೆಗೆ 4 ಕೋಟಿ ಬಡವರಿಗೆ ಮನೆ ಸಿಕ್ಕಿದೆ. ಬಡವರ ನೋವು, ಜನಸಾಮಾನ್ಯರ ಕಷ್ಟಗಳು ಎಲ್ಲರಿಗೂ ಅರ್ಥವಾಗದು. ಅಂತಹ ಜೀವನವನ್ನು ನಡೆಸಿದವರಿಗೇ ತಲೆ ಮೇಲಿನ ಛಾವಣಿಯ ಮಹತ್ವ ತಿಳಿದಿರುತ್ತದೆ’ ಎಂದ ಮೋದಿ, ‘ಬಡವರ ಗುಡಿಸಲುಗಳಲ್ಲಿ ಫೋಟೋ ತೆಗೆಸಿಕೊಂಡು ಸಂಭ್ರಮಿಸುವವರಿಗೆ ಸಂಸತ್ತಿನಲ್ಲಿ ಬಡವರ ಬಗೆಗಿನ ಭಾಷಣ ನೀರಸ ಎನಿಸುತ್ತದೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಕುರಿತ ರಾಹುಲ್‌ ಹೇಳಿಕೆಯನ್ನು ಟೀಕಿಸಿದ್ದಾರೆ.

ಕಾಂಗ್ರೆಸ್‌ನದ್ದು ನಗರ ನಕ್ಸಲ್‌ ಭಾಷೆ:

‘ಕೆಲವರು ಬಹಿರಂಗವಾಗಿ ನಗರ ನಕ್ಸಲರ ಭಾಷೆಯಲ್ಲಿ ಮಾತಾಡುತ್ತಾರೆ. ಭಾರತದ ವಿರುದ್ಧ ಯುದ್ಧ ಘೋಷಿಸುವವರಿಗೆ ಸಂವಿಧಾನ ಅಥವಾ ದೇಶದ ಏಕತೆಯ ಬಗ್ಗೆ ಅರ್ಥವಾಗುವುದಿಲ್ಲ’ ಎಂದು ಪ್ರಧಾನಿ ಹೇಳಿದ್ದಾರೆ. ಈ ಮೂಲಕ, ‘ನಾವು ಬಿಜೆಪಿ ಅಥವಾ ಆರೆಸ್ಸೆಸ್‌ ವಿರುದ್ಧವಲ್ಲ, ಭಾರತ ದೇಶದ ವಿರುದ್ಧವೇ ಹೋರಾಡುತ್ತಿದ್ದೇವೆ’ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸಂವಿಧಾನ ಹಿಡಿದು ತಿರುಗಿದರೆ ಸಾಲದು:

‘ಸಂವಿಧಾನವನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗುವವರಿಗೆ, ತಾವು ಮುಸ್ಲಿಂ ಮಹಿಳೆಯರನ್ನು ಕಷ್ಟದ ಜೀವನಕ್ಕೆ ತಳ್ಳಿದ್ದು ಗೊತ್ತಿಲ್ಲ. ಅವರಿಗೆ ಹಕ್ಕುಗಳನ್ನು ನೀಡಲು ನಾವು ತ್ರಿವಳಿ ತಲಾಕ್‌ ಕಾನೂನು ತಂದೆವು’ ಎಂದು ಪ್ರಧಾನಿ ಮೋದಿ ಟಾಂಗ್‌ ನೀಡಿದರು. ಜೊತೆಗೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮೇಲೂ ವಾಗ್ದಾಳಿ ನಡೆಸಿ, ‘21ನೇ ಶತಮಾನದ ಜಪ ಮಾಡುತ್ತಿದ್ದ ಪ್ರಧಾನಿಗೆ 20ನೇ ಶತಮಾನದ ಅಗತ್ಯತೆಗಳನ್ನೇ ಪೂರೈಸಲಾಗಲಿಲ್ಲ’ ಎಂದು ಹೇಳಿದರು.

ಒಂದೇ ಪರಿವಾರದ ಮೂವರು ಸಂಸತ್ತಲ್ಲಿ:

‘ಒಂದೇ ಪರಿವಾರದ ಮೂವರು ಒಟ್ಟಿಗೇ ಸಂಸತ್ತಿನಲ್ಲಿದ್ದಾರೆ. ಆದರೆ ಅವರ ಪಕ್ಷದಿಂದ ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ಸಮುದಾಯದ 3 ಮಂದಿ ಏಕಕಾಲಕ್ಕೆ ಸದನದಲ್ಲಿ ಇದ್ದದ್ದನ್ನು ನೋಡಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿರುವುದನ್ನು ಟೀಕಿಸಿದ್ದಾರೆ. ಅಂತೆಯೇ, ಸದನವು ಉತ್ತರಾಧಿಕಾರತ್ವದ ಮೇಲೆ ನಡೆದರೆ ಪ್ರಜಾಪ್ರಭುತ್ವ ಅಂತ್ಯವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜಾತಿ ಬಗ್ಗೆ ಮಾತು ಫ್ಯಾಶನ್‌:

ಜಾತಿಗಣತಿಗೆ ಆಗ್ರಹಿಸುತ್ತಿರುವ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ ಮೋದಿ, ‘ನಮ್ಮ ಅವಧಿಯಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387ರಿಂದ 780ಕ್ಕೆ ಏರಿಕೆಯಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಮೀಸಲಿರುವ ಎಂಬಿಬಿಎಸ್‌ ಸೀಟುಗಳ ಸಂಖ್ಯೆಯನ್ನು ಕ್ರಮವಾಗಿ 7,700ರಿಂದ 17,000ಕ್ಕೆ, 3,800ರಿಂದ 9,000ಕ್ಕೆ, 14,000ರಿಂದ 32,000ಕ್ಕೆ ಏರಿಸಲಾಗಿದೆ’ ಎಂದರು.

ನಾವು ಗಾಜಿನರಮನೆ ಕಟ್ಟಲಿಲ್ಲ, ಜನರಿಗಾಗಿ ಹಣ ವ್ಯಯಿಸಿದೆವು: ಕೇಜ್ರಿ ವಿರುದ್ಧ ಮೋದಿ ವಾಗ್ದಾಳಿನವದೆಹಲಿ: ವಿಧಾನಸಭೆ ಚುನಾವಣೆಗೆ ದೆಹಲಿಯಲ್ಲಿ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಮಾಜಿ ಪ್ರಧಾನಿ, ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ಐಶಾರಾಮಿ ಜೀವನಶೈಲಿಯನ್ನು ಟೀಕಿಸಿರುವ ಪ್ರಧಾನಿ ಮೋದಿ, ‘ಅವರು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಬದಲು ದುಬಾರಿ ಬಾತ್‌ ಟಬ್‌, ಶವರ್‌ ಹಾಗೂ ಗಾಜಿನರಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಮೊದಲು ವಂಚನೆ, ಭ್ರಷ್ಟಾಚಾರಗಳು ಸುದ್ದಿ ಮಾಡುತ್ತಿದ್ದವು. ಆದರೆ ಕಳೆದ 10 ವರ್ಷಗಳಲ್ಲಿ ನಾವು ನಕಲಿ ಫಲಾನುಭವಿಗಳಿಗೆ ದೊರೆಯುತ್ತಿದ್ದ ಹಲವು ಕಲ್ಯಾಣ ಯೋಜನೆಗಳ ಸೌಲಭ್ಯವನ್ನು ರದ್ದುಗೊಳಿಸುವ ಮೂಲಕ 3 ಲಕ್ಷ ಕೋಡಿ ರು. ಉಳಿಸಿದೆ ಹಾಗೂ ಆ ಹಣವನ್ನು ಉಳಿಸಿ ಜನರಿಗಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ವ್ಯಯಿಸಿದ್ದೇವೆ’ ಎಂದರು.

ರಾಷ್ಟ್ರಪತಿ ಮುರ್ಮುಗೆ ಅವಮಾನ: ಸೋನಿಯಾ ವಿರುದ್ಧವೂ ವಾಗ್ದಾಳಿನವದೆಹಲಿ: ಬಜೆಟ್‌ ಅಧಿವೇಶನದ ಹಿಂದಿನ ದಿನ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಬಡಪಾಯಿ ಮಹಿಳೆ’ ಎಂದು ಕರೆದಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಮೊದಲ ಮಹಿಳೆಯನ್ನು ಅವಮಾನಿಸಲಾಗಿದೆ’ ಎಂದರು. ‘ಬಡ ಪರಿವಾರದಿಂದ ಬಂದಿರುವ ಮಹಿಳಾ ರಾಷ್ಟ್ರಪತಿಯನ್ನು ಗೌರವಿಸುವುದು ನಿಮಗೆ ಬಿಟ್ಟ ವಿಚಾರ. ಆದರೆ ಬಡಪಾಯಿ ಮಹಿಳೆ ಎನ್ನುವ ಮೂಲಕ ಅವರನ್ನು ಅವಮಾನಿಸಲಾಗುತ್ತಿದೆ. ರಾಜಕೀಯ ಹತಾಶೆ ನನಗೂ ಅರ್ಥವಾಗುತ್ತದೆ. ಆದರೆ ರಾಷ್ಟ್ರಪತಿಗಳ ವಿರುದ್ಧವೂ ಅದು ಯಾಕಿದೆ?’ ಎಂದು ಮೋದಿ ಟೀಕಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

‘ಜಿ ರಾಮ್‌ ಜಿ’ ವಿರುದ್ಧ ಕಾಂಗ್ರೆಸ್‌ನದು ಕೇವಲ ಅಪಾಲಾಪ
ದೆಹಲಿ ದಂಗೆ: ಶಾರ್ಜೀಲ್‌, ಉಮರ್‌ ಬೇಲಿಲ್ಲ