16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳ 22,23ರಂದು ರಷ್ಯಾ ಪ್ರವಾಸ

KannadaprabhaNewsNetwork |  
Published : Oct 19, 2024, 12:15 AM ISTUpdated : Oct 19, 2024, 05:29 AM IST
PM-Modi-releases-the-18th-installment-of-PM-Kisan-Samman-Nidhi

ಸಾರಾಂಶ

16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳ 22,23ರಂದು ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ.

ನವದೆಹಲಿ: 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳ 22,23ರಂದು ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಮೋದಿ ತಮ್ಮ ರಷ್ಯಾ ಭೇಟಿ ಸಂದರ್ಭದಲ್ಲಿ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳೊಂದಿಗೆ ಮತ್ತು ಕಝಾನದ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಈ ವರ್ಷ ಬ್ರಿಕ್ಸ್‌ ಶೃಂಗಸಭೆಯು, ‘ಕೇವಲ ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು’ ಎನ್ನುವ ಥೀಮ್‌ನಲ್ಲಿ ನಡೆಯಲಿದೆ.

ಕರ್ತಾರ್ಪುರ್‌ ಸರ್ಕೀಟ್‌ಗೆ ಗುರು ನಾನಕ್‌ರ ಜನ್ಮಸ್ಥಳ ಸೇರಿಸಲು ಪಾಕ್‌ ಒಲವು

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಮಹತ್ವದ ಒಪ್ಪಂದಗಳಲ್ಲಿ ಒಂದಾಗಿರುವ ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರ ಸಾಹೀಬ್‌ ಕಾರಿಡಾರ್‌ ಒಪ್ಪಂದ ನವೀಕರಣ ಮಾಡಲು ಪಾಕಿಸ್ತಾನ ಉತ್ಸುಕತೆ ವ್ಯಕ್ತಪಡಿಸಿದೆ. ಇದೇ ಒಪ್ಪಂದಕ್ಕೆ ಗುರು ನಾನಕರ ಜನ್ಮಸ್ಥಳವಾಗಿರುವ ನನ್ಕನಾ ಸಾಹೀಬ್‌ ಗುರುದ್ವಾರ ಸೇರಿಸಲು ಆಸಕ್ತಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ. 2019ರ ನ.9ರಂದು ಅಂದಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಈ ಒಪ್ಪಂದವು ಬರುವ ನವೆಂಬರ್‌ನಲ್ಲಿ ಅಂತ್ಯಗೊಳ್ಳಲಿದ್ದು, ನವೀಕರಿಸಲು ಪಾಕಿಸ್ತಾನವು ಹೆಚ್ಚಿನ ಆಸಕ್ತಿ ತೋರಿಸಿದೆ ಎನ್ನಲಾಗಿದೆ.

ನಿಷೇಧವಿದ್ದರೂ ಮಹಾ ಸಿಎಂ ಪುತ್ರ ಉಜ್ಜಯಿನಿ ದೇಗುಲ ಗರ್ಭಗುಡಿಗೆ: ಕಾಂಗ್ರೆಸ್‌ ಕಿಡಿ

ಉಜ್ಜಯಿನಿ: ಇಲ್ಲಿನ ಮಹಾಕಾಳೇಶ್ವರ ದೇಗುಲದ ಗರ್ಭಗುಡಿ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧವಿದ್ದರೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಪುತ್ರ ಶ್ರೀಕಾಂತ್‌ ಶಿಂಧೆಗೆ ಗರ್ಭಗುಡಿ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಇದಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗುರುವಾರ ಸಂಜೆ ದೇಗುಲಕ್ಕೆ ಆಗಮಿಸಿದ ಶ್ರೀಕಾಂತ್‌ ಶಿಂಧೆ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಕಾರ್ಯಕರ್ತರೊಂದಿಗೆ ಗರ್ಭಗುಡಿಗೆ ಪ್ರವೇಶಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಮಾನ್ಯ ನಾಗರಿಕರು ದೇವರ ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇದ್ದು, ನಿಷೇಧದ ನಡೆವೆಯೂ ವಿಐಪಿಗಳಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದಿದೆ.

ಬಿಹಾರ ಕಳ್ಳಬಟ್ಟಿ ಸಾವಿನ ಸಂಖ್ಯೆ 35ಕ್ಕೆ ಏರಿಕೆ: 15 ಆರೋಪಿಗಳ ಬಂಧನ

ಪಟನಾ: ಮದ್ಯ ಮಾರಾಟ ನಿಷೇಧವಿರುವ ಬಿಹಾರದಲ್ಲಿ ಸಂಭವಿಸಿದ ಕಳ್ಳಬಟ್ಟಿ ಸೇವನೆ ಪ್ರಕರಣದಲ್ಲಿ ಶುಕ್ರವಾರ ಮತ್ತೆ 10 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೂರು ದಿನಗಳಲ್ಲಿ ದುರ್ಘಟನೆಗೆ ಬಲಿಯಾದವರ ಸಂಖ್ಯೆ 35ಕ್ಕೆ ತಲುಪಿದೆ. ಸಿವಾನ್‌ ಜಿಲ್ಲೆಯ ಮಘರ್‌ ಹಾಗೂ ಔರಿಯಾ ಪಂಚಾಯತ್‌ ವ್ಯಾಪ್ತಿಯಲ್ಲಿ 28, ಸರಣ್‌ ಜಿಲ್ಲೆಯ ಇಬ್ರಾಹಿಂಪುರ ಪ್ರದೇಶದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ 15 ಮಂದಿಯನ್ನು ಬಂಧಿಸಲಾಗಿದೆ. ಮೂವರು ಹೆಡ್‌ಕಾನ್ಸ್‌ಟೇಬಲ್‌ರನ್ನು ಅಮಾನತು ಗೊಳಿಸಲಾಗಿದೆ. ಈ ಘಟನೆ ಡಬಲ್‌ ಎಂಜಿನ್‌ ಸರ್ಕಾರದ ಆಡಳಿತ ವೈಫಲ್ಯಕ್ಕೆ ಉದಾಹರಣೆ ಎಂದು ವಿಪಕ್ಷ ಕಾಂಗ್ರೆಸ್‌ ಕಿಡಿಕಾರಿದೆ.

ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ರಷ್ಯಾಗೆ ಉ. ಕೊರಿಯಾದ 10000 ಯೋಧರು: ವರದಿ

ಸಿಯೋಲ್‌: ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡುವ ಸಲುವಾಗಿ ಉತ್ತರ ಕೊರಿಯಾ ಸರ್ಕಾರ ಈಗಾಗಲೇ 1500 ಯೋಧರನ್ನು ಕಳುಹಿಸಿಕೊಟ್ಟಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ಹೇಳಿದೆ. ಅ.8ರಿಂದ 13ರ ವರೆಗೆ ರಷ್ಯಾ ನೌಕಾಪಡೆಯ ಹಡಗುಗಳು ಉತ್ತರ ಕೊರಿಯಾದ 1500 ಸೈನಿಕರನ್ನು ರಷ್ಯಾಗೆ ಕರೆದೊಯ್ದಿವೆ. ಜೊತೆಗೆ ಅವರಿಗೆ ತನ್ನ ಸೇನೆಯ ಸಮವಸ್ತ್ರ, ಶಸ್ತ್ರಾಸ್ತ್ರ ಹಾಗೂ ನಕಲಿ ಗುರುತಿನ ಚೀಟಿ ನೀಡಿದೆ. ಪ್ರಸ್ತುತ ಈ ಸೈನಿಕರು ರಷ್ಯಾದ ಹಲವು ಸೇನಾ ನೆಲೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಬಳಿಕ ಅವರಯ ಯುದ್ಧ ಭೂಮಿಗೆ ನಿಯೋಜಿಸಬಹುದು ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ. ಈ ನಡುವೆ ಉತ್ತರ ಕೊರಿಯಾ ತನ್ನ 10000 ಯೋಧರನ್ನು ರಷ್ಯಾಕ್ಕೆ ಕಳುಹಿಸಲಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್ಸ್ಕಿಆರೋಪ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!