ಗರ್ಭಕಂಠ ಕ್ಯಾನ್ಸರ್‌ಗೆ ಪೂನಂ ಬಲಿ ಎಂಬುದು ಸುಳ್ಳುಸುದ್ದಿಯಾಗಿದ್ದು, ರೋಗದ ಜಾಗೃತಿಗೆ ಹೀಗೆ ಮಾಡಿದ್ದೆ, ಕ್ಷಮೆ ಕೇಳುವೆ ಎಂದು ನಟಿ ಪೂನಂ ಪಾಂಡೆ ತಿಳಿಸಿದ್ದಾರೆ. ಪೂನಂ ವರ್ತನೆ ಬಗ್ಗೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮುಂಬೈ: ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ನಟಿ, ಮಾಡೆಲ್ ಪೂನಂ ಪಾಂಡೆ ಅವರು ದಿಢೀರನೇ ‘ನಾನು ಸತ್ತಿಲ್ಲ, ಜೀವಂತವಾಗಿದ್ದೇನೆ’ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ನಟಿಯ ಸಾವಿನ ಸುದ್ದಿ ಸಂಪೂರ್ಣ ಸುಳ್ಳು ಎಂಬುದು ಗೊತ್ತಾಗಿದೆ.
ಅಲ್ಲದೇ ಗರ್ಭಕಂಠದ ಕ್ಯಾನ್ಸರ್ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೇಕೆಂದೇ ತಾನು ಸಾವನ್ನಪ್ಪಿರುವ ರೀತಿ ಸುದ್ದಿ ಹಬ್ಬಿಸಿದೆವು ಎಂದು ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ, ಹೀಗೆ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.
ಆದರೆ ಪೂನಂ ನಡೆ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಸಾವಿನ ನೆಪ ಹೇಳಿ ಪುಕ್ಕಟೆ ಪ್ರಚಾರ ಪಡೆಯವುದು ಸರಿಯಲ್ಲ ಎಂದು ಜನರು ಕಿಡಿಕಾರಿದ್ದಾರೆ.
ಪೂನಂ ಹೇಳೋದೇನು?
ಶನಿವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಪೂನಂ ‘ನಿಮಗೆಲ್ಲ ಮಹತ್ವದ ವಿಷಯ ಹೇಳಲಿದ್ದೇನೆ. ನಾನು ಇಲ್ಲಿದ್ದೇನೆ, ಜೀವಂತವಾಗಿದ್ದೇನೆ.
ಗರ್ಭಕಂಠದ ಕ್ಯಾನ್ಸರ್‌ನಿಂದ ನಾನು ಸಾವನ್ನಪ್ಪಿಲ್ಲ. ಆದರೆ ದುರಂತವೆಂದರೆ, ಈ ರೋಗವನ್ನು ಹೇಗೆ ನಿಭಾಯಿಸುವುದು ಎಂಬುದರ ಜ್ಞಾನದ ಕೊರತೆಯಿಂದ ಸಾವಿರಾರು ಮಹಿಳೆಯರು ಬಲಿಯಾಗಿದ್ದಾರೆ. ಹೀಗಾಗಿ ರೋಗವನ್ನು ತಡೆಗಟ್ಟಲು ಪ್ರಯತ್ನಿಸೋಣ. ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವು ಸಂಭವಿಸುತ್ತದೆ’ ಎಂದಿದ್ದಾರೆ.
ಅಲ್ಲದೇ ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಸೃಷ್ಟಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಶುಕ್ರವಾರ ಮುಂಜಾನೆ ಪೂನಂ ಕೊನೆಯುಸಿರೆಳೆದಿದ್ದಾರೆಂದು ಅವರ ಮ್ಯಾನೇಜರ್, ಪೂನಂ ಅವರದೇ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.