ಚಂಡೀಗಢ: ಬೆಳೆಗಳಿಗೆ ಬೆಂಬಲ ಬೆಲೆಗೆ ಕಾನೂನು ರೂಪ ನೀಡುವ ಬೇಡಿಕೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕರೆ ನೀಡಿದ್ದ ‘ಗ್ರಾಮೀಣ ಭಾರತ ಬಂದ್’ ಶುಕ್ರವಾರ ಪಂಜಾಬ್ ಮತ್ತು ಹರ್ಯಾಣ ಭಾಗಗಳಲ್ಲಿ ಯಶಸ್ವಿಯಾಗಿ ನಡೆಯಿತು.
ಉತ್ತರ ಪ್ರದೇಶದ ಕೆಲವು ಕಡೆ ಪ್ರತಿಭಟನೆಗಳು ನಡೆದವು. ಆದರೆ ದೇಶದ ಉಳಿದ ಭಾಗಗಳಲ್ಲಿ ಬಂದ್‌ಗೆ ತೀವ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಹೀಗಾಗಿ ದೇಶದ ಇತರ ಗ್ರಾಮೀಣ ಭಾಗಗಳಲ್ಲಿ ಬಂದ್ ನಡೆಯಲಿಲ್ಲ.
ಪ್ರತಿಭಟನಾ ನಿರತ ರೈತರಿಗೆ ಒಗ್ಗಟ್ಟು ವ್ಯಕ್ತಪಡಿಸಿ ಪಂಜಾಬ್ ಹಾಗೂ ಹರ್ಯಾಣದ ಖಾಸಗಿ ಸಾರ್ವಜನಿಕ ಸಾರಿಗೆ ಸೇರಿ ಇತರ ಸಾರಿಗೆ ಬಸ್ ನಿರ್ವಾಹಕರು ಶುಕ್ರವಾರ ಮುಷ್ಕರ ನಡೆಸಿದರು. ಇದರಿಂದ 5,000 ಕ್ಕೂ ಹೆಚ್ಚು ಬಸ್ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಕರೆ ನೀಡಲಾಗಿದ್ದ ‘ಗ್ರಾಮೀಣ ಭಾರತ್ ಬಂದ್’ ಹರ್ಯಾಣದಲ್ಲೂ ಯಶಸ್ವಿಯಾಗಿದ್ದು ಅನೇಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬಂದ್ ಮಾಡಲಾಗಿತ್ತು.
ಇನ್ನು ಪಂಜಾಬ್‌ನಲ್ಲಿ ಇಂಧನ ವಿತರಕರು ಬಂದ್‌ಗೆ ಬೆಂಬಲ ಸೂಚಿಸಿ ಅನೇಕ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಲಾಗಿತ್ತು. ಇದೇ ವೇಳೆ ರೈತರು ಪ್ರಮುಖ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪಟಿಯಾಲ, ಲುಧಿಯಾನ, ಬಠಿಂಡಾ, ಮೊಗಾ, ಹೋಶಿಯಾರ್‌ಪುರ, ಜಲಂಧರ್ ಮತ್ತು ಇತರ ಸ್ಥಳಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಇನ್ನು ಯಾವುದೇ ಅಹಿತಕರ ಘಟನೆ ತಪ್ಪಿಸಲು ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಹಲವು ರೈತ ಸಂಘಟನೆಗಳು ಬಂದ್‌ನಲ್ಲಿ ಭಾಗಿಯಾಗಿದ್ದವು.