ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪೃಥ್ವಿರಾಜ್‌ ಚೌಹಾಣ್‌ ಪ್ರಮುಖ ಘಟಾನುಘಟಿಗಳಿಗೆ ಸೋಲು

KannadaprabhaNewsNetwork |  
Published : Nov 24, 2024, 01:46 AM ISTUpdated : Nov 24, 2024, 04:47 AM IST
ಕಾಂಗ್ರೆಸ್‌ | Kannada Prabha

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಘಟಾನುಘಟಿಗಳಿಗೆ ಸೋಲಾಗಿದೆ. ಅವರಲ್ಲಿ ಕರಾಡ್‌ ದಕ್ಷಿಣದಿಂದ ಸ್ಪರ್ಧೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್‌ ಪ್ರಮುಖರು.

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಘಟಾನುಘಟಿಗಳಿಗೆ ಸೋಲಾಗಿದೆ. ಅವರಲ್ಲಿ ಕರಾಡ್‌ ದಕ್ಷಿಣದಿಂದ ಸ್ಪರ್ಧೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್‌ ಪ್ರಮುಖರು.

ಇನ್ನು ಸಂಗಮ್ನಾರ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಳಾಸಾಹೇಬ್‌ ಥೋರಟ್‌, ಮಾಹಿಮ್‌ನಿಂದ ಸ್ಪರ್ಧಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಪಕ್ಷದ ಮುಖ್ಯಸ್ಥ ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆ, ಅಜಿತ್‌ ಪವಾರ್‌ ವಿರುದ್ಧ ಸ್ಪರ್ಧೆ ಮಾಡಿದ್ದ ಅವರ ಸಂಬಂಧಿ ಯುಗೇಂದ್ರ ಪವಾರ್‌, ಮುಂಬಾದೇವಿಯ ಶಿವಸೇನಾ ಅಭ್ಯರ್ಥಿ ಶೈನಾ ಎನ್‌.ಸಿ., ವಂದ್ರೆ ಪೂರ್ವದಿಂದ ಸ್ಫರ್ಧಿಸಿದ್ದ ಇತ್ತೀಚೆಗೆ ಹತ್ಯೆಗೀಡಾದ ಮಾಜಿ ಸಚಿವ ಬಾಬಾ ಸಿದ್ದಿಕಿ ಪುತ್ರ ಹಾಗೂ ಎನ್‌ಸಿಪಿ (ಅಜಿತ್‌) ಅಭ್ಯರ್ಥಿ ಜೀಶನ್‌ ಸಿದ್ದಿಕಿ, ವರ್ಲಿಯಿಂದ ಕಣಕ್ಕಿಳಿದಿದ್ದ ಶಿವಸೇನೆಯ ಮಿಲಿಂದ್‌ ದೇವ್ರಾ ಹಾಗೂ ಅನುಶಕ್ತಿ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನಟಿ ಸ್ವರಾ ಭಾಸ್ಕರ್‌ ಪತಿ, ಎನ್‌ಸಿಪಿ (ಎಸ್ಪಿ) ಅಭ್ಯರ್ಥಿ ಫಹಾದ್‌ ಅಹ್ಮದ್‌ ಪರಾಭವಗೊಂಡಿದ್ದಾರೆ.

ಮಿಲಿಂದ ದೇವ್ರಾ ವಿರುದ್ಧ ಶಿವಸೇನಾ ಯುವ ನಾಯಕ ಆದಿತ್ಯ ಠಾಕ್ರೆ ಗೆದ್ದಿದ್ದಾರೆ.

ಮಹಾರಾಷ್ಟ್ರದಲ್ಲಿ ‘ಕುಟುಂಬ ಬಡಿದಾಟ’

ಮುಂಬೈ: ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕುಟುಂಬಗಳ ಒಳಗಿನ ಕಾಳಗಕ್ಕೂ ಸಾಕ್ಷಿಯಾಗಿದೆ.ಎನ್‌ಸಿಪಿ ನಾಯಕ ಡಿಸಿಎಂ ಅಜಿತ್‌ ಪವಾರ್‌ ಅವರು ಮೊದಲ ಬಾರಿ ಕಣಕ್ಕಿಳಿದಿದ್ದ ತಮ್ಮ ಹತ್ತಿರದ ಸಂಬಂಧಿ ಯುಗೇಂದ್ರ ಪವಾರ್‌ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಈ ಮೂಲಕ 2023ರಲ್ಲಿ ಎನ್‌ಸಿಪಿ ವಿಭಜನೆಯಾದ ಬಳಿಕ ತಮ್ಮ ಚಿಕ್ಕಪ್ಪ ಶರದ್‌ ಪವಾರ್‌ ಹಾಗೂ ಅವರ ಪುತ್ರಿ ಸುಪ್ರಿಯಾ ಸುಳೆ ವಿರುದ್ಧವೇ ವಿಜಯ ಸಾಧಿಸಿದ್ದಾರೆ.

ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅಜಿತ್‌ ಪತ್ನಿ ಸುನೇತ್ರಾ ಅವರು ಬಾರಾಮತಿ ಕ್ಷೇತ್ರದಲ್ಲಿ ಸುಳೆ ಅವರನ್ನು ಮಣ್ಣುಮುಕ್ಕಿಸಿದ್ದರು.ಅತ್ತ ಛತ್ರಪತಿ ಸಾಂಭಾಜಿನಗರ ಜಿಲ್ಲೆಯ ಕನ್ನಡ್‌ ಕ್ಷೇತ್ರದಲ್ಲಿ ಶಿವಸೇನೆಯಿಂದ ಟಿಕೆಟ್‌ ಪಡೆದ ಬಿಜೆಪಿ ನಾಯಕ ರಾವ್‌ಸಾಹೇಬ್‌ ದಾನ್ವೆ ಅವರ ಪುತ್ರಿ ಸಂಜನಾ, ಸ್ವತಂತ್ರ ಅಭ್ಯರ್ಥಿಯಾಗಿರುವ ತಮ್ಮ ಪತಿಯ ವಿರುದ್ಧವೇ ಸ್ಪರ್ಧಿಸಿ ಜಯ ಗಳಿಸಿದ್ದಾರೆ.

ಗಡ್ಚಿರೋಲಿಯ ಅಹೇರಿ ಕ್ಷೇತ್ರದಲ್ಲಿ ಎನ್‌ಸಿಪಿ(ಅಜಿತ್‌ ಬಣ)ಯ ಧರ್ಮರಾವ್‌ಬಾಬಾ ಅತ್ರಂ ಎನ್‌ಸಿಪಿ(ಶರದ್‌ ಬಣ)ಯಿಂದ ಕಣಕ್ಕಿಳಿದಿದ್ದ ತಮ್ಮ ಪುತ್ರಿ ಭಾಗ್ಯಶ್ರೀಯೊಂದಿಗೆ ಸ್ಪರ್ಧಿಸಿ ಜಯಿಸಿದ್ದಾರೆ. ಲೋಹಾದಲ್ಲಿ ಎನ್‌ಸಿಪಿಯ ಪ್ರತಾಪ್‌ ಪಾಟಿಲ್‌ ತಮ್ಮ ಸಹೋದರಿ ಆಶಾಬಾಯಿ ಶಿಂಧೆಯವರನ್ನು ಸೋಲಿಸಿದ್ದಾರೆ.

ಒವೈಸಿ ಪಕ್ಷ ಪ್ರಮುಖ ಅಭ್ಯರ್ಥಿಗಳಿಗೆ ಭಾರಿ ಸೋಲು

ಮಾಲೆಂಗಾಂವ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಎಐಎಂಐಎಂ ಪಕ್ಷದ ಅಭ್ಯರ್ಥಿಗಳಾದ ಮಾಜಿ ಎನ್‌ಡಿಟೀವಿ ಪತ್ರಕರ್ತ ಇಮ್ತಿಯಾಜ್‌ ಜಲೀಲ್‌ ಹಾಗೂ ಹಿರಿಯ ಮುಖಂಡ ವಾರಿಜ್‌ ಪಠಾಣ್‌ ಭಾರಿ ಸೋಲು ಕಂಡಿದ್ದಾರೆ.ಆದರೆ, ಮಾಲೆಂಗಾವ್ ಸೆಂಟ್ರಲ್ ವಿಧಾನಸಭೆ ಚುನಾವಣೆಯಲ್ಲಿ ಅಸಾದಿದ್ದೀನ್‌ ಒವೈಸಿ ಅವರ ಎಐಎಂಐಎಂ ಪಕ್ಷದ ಅಭ್ಯರ್ಥಿ ಮೊಹಮ್ಮದ್‌ ಇಸ್ಮಾಯಿಲ್ ಅಬ್ದುಲ್‌ ಖಾಲಿಕ್ ತಮ್ಮ ಸಮೀಪದ ಸ್ಪರ್ಧಿಯಿಂದ ಕೇವಲ 162 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

2019ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಖಾಲಿಕ್ ಈ ಬಾರಿ ಅಲ್ಪ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ