ಬಿಜೆಪಿ, ಆರೆಸ್ಸೆಸ್‌ ಸಂಘಟನೆ ಹೊಗಳಿದ ದಿಗ್ವಿಜಯ್ ಸಿಂಗ್!

KannadaprabhaNewsNetwork |  
Published : Dec 28, 2025, 02:45 AM IST
Digvijay singh

ಸಾರಾಂಶ

ಪಕ್ಷದಲ್ಲಿ ಆಂತರಿಕ ಸುಧಾರಣೆಯ ಅಗತ್ಯದ ಕುರಿತು ಪ್ರತಿಪಾದನೆ ಬೆನ್ನಲ್ಲೇ, ಕಾಂಗ್ರೆಸ್‌ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿನ ಸಂಘಟನಾ ಶಕ್ತಿಯನ್ನು ಮೆಚ್ಚಿಕೊಂಡು ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ.  

 ನವದೆಹಲಿ: ಪಕ್ಷದಲ್ಲಿ ಆಂತರಿಕ ಸುಧಾರಣೆಯ ಅಗತ್ಯದ ಕುರಿತು ಪ್ರತಿಪಾದನೆ ಬೆನ್ನಲ್ಲೇ, ಕಾಂಗ್ರೆಸ್‌ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿನ ಸಂಘಟನಾ ಶಕ್ತಿಯನ್ನು ಮೆಚ್ಚಿಕೊಂಡು ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಸಾಮಾನ್ಯ ಕಾರ್ಯಕರ್ತ ಕೂಡಾ ಹೇಗೆ ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಬಹುದು ಎಂಬುದನ್ನು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್‌ನ ಅತ್ಯಂತ ಉನ್ನತ ಮಟ್ಟದ ಸಿಡಬ್ಲ್ಯುಸಿ ಸಭೆಯ ದಿನವೇ ಸಿಂಗ್‌ ಇಂಥ ಪೋಸ್ಟ್‌ ಹಾಕಿದ್ದರ ಹಿಂದೆ, ಪಕ್ಷದ ಹಿರಿಯ ನಾಯಕರಿಗೆ ಸಂದೇಶ ರವಾನಿಸುವ ಯತ್ನವಿದೆ ಎಂದು ವಿಶ್ಲೇಷಿಸಲಾಗಿದೆ.

ಸಂಘಟನೆಗೆ ಪ್ರಶಂಸೆ:

1996ರಲ್ಲಿ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ಶಂಕರ್‌ಸಿನ್ಹ ವಘೇಲಾ ಅವರ ಪ್ರಮಾಣವಚನದ ಫೋಟೋವೊಂದನ್ನು ದಿಗ್ವಿಜಯ್‌ ಸಿಂಗ್‌ ಎಕ್ಸ್‌ನಲ್ಲಿ ಹಂಚಿಕಕೊಂಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್‌.ಕೆ. ಅಡ್ವಾಣಿ ಕುರ್ಚಿಯ ಮೇಲೆ ಕುಳಿತಿದ್ದರೆ, ಅವರ ಕಾಲ ಬಳಿ, ಆಗ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನರೇಂದ್ರ ಮೋದಿ, ಸಾಮಾನ್ಯರಂತೆ ಕುಳಿತಿದ್ದನ್ನು ಆ ಫೋಟೋದಲ್ಲಿ ಕಾಣಬಹುದು.

ಇದಕ್ಕೆ ಅಡಿಬರಹ ಕೊಟ್ಟಿರುವ ಸಿಂಗ್, ‘ಕೋರಾ ಸೈಟ್‌ನಲ್ಲಿ ನನಗೆ ಈ ಚಿತ್ರ ಸಿಕ್ಕಿತು. ಇದು ಬಹಳ ಪ್ರಭಾವಶಾಲಿಯಾಗಿದೆ. ನಾಯಕರ ಪಾದದ ಕೆಳಗೆ, ನೆಲದ ಮೇಲೆ ಕುಳಿತ ಆರ್‌ಎಸ್‌ಎಸ್‌ನ ತಳಮಟ್ಟದ ಸ್ವಯಂಸೇವಕರು ಮತ್ತು ಜನಸಂಘದ (ಬಿಜೆಪಿ) ಕಾರ್ಯಕರ್ತರು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಯಾಗುವ ರೀತಿಯನ್ನು ಇಲ್ಲಿ ಕಾಣಬಹುದು. ಇದು ಸಂಘಟನೆಯ ಶಕ್ತಿ. ಜೈ ಸಿಯಾ ರಾಮ್’ ಎಂದು ಬರೆದುಕೊಂಡಿದ್ದಾರೆ.

ಹೈಕಮಾಂಡ್‌ಗೆ ಸಂದೇಶ?:

ವಾರದ ಹಿಂದಷ್ಟೇ ರಾಹುಲ್ ಗಾಂಧಿಯವರನ್ನುದ್ದೇಶಿಸಿ ಪೋಸ್ಟ್ ಮಾಡಿದ್ದ ಸಿಂಗ್‌, ‘ಪಕ್ಷದಲ್ಲಿ ಆಂತರಿಕ ಸುಧಾರಣೆಯಾಗಬೇಕು. ಇದನ್ನು ರಾಹುಲ್ ಮಾಡಬಲ್ಲರು. ಆದರೆ ಅವರನ್ನು ಒಪ್ಪಿಸುವುದೇ ಕಷ್ಟ’ ಎಂದು ಬರೆದುಕೊಂಡಿದ್ದರು. ಇದೀಗ ತಮ್ಮ ವಿವಾದಾತ್ಮಕ ಟ್ವೀಟ್‌ನಲ್ಲಿ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರನ್ನು ಟ್ಯಾಗ್ ಮಾಡಿದ್ದಾರೆ. ಇದು ಹೈಕಮಾಂಡ್‌ಗೆ ಪರೋಕ್ಷವಾಗಿ ಸಂದೇಶ ರವಾನಿಸುವ ಯತ್ನವೇ ಎಂಬ ಗುಮಾನಿ ಎದ್ದಿದೆ.

ರಾಹುಲ್‌ಗೆ ಬಿಜೆಪಿ ತಿವಿತ:

ಬಿಜೆಪಿ ಸಿಂಗ್‌ ಅವರ ಟ್ವೀಟ್‌ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಮೇಲೆ ತಿವಿತ ಮುಂದುವರಿಸಿದೆ. ‘ಸಿಂಗ್ ಹೇಳಿಕೆಯು ನಿರಂಕುಶಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್‌ ನಾಯಕತ್ವವನ್ನು ಬಹಿರಂಗಪಡಿಸಿದೆ. ಇದಕ್ಕೆ ಉತ್ತರಿಸುವ ಧೈರ್ಯವನ್ನು ರಾಹುಲ್ ತೋರುತ್ತಾರೆಯೇ?’ ಎಂದು ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪ್ರಶ್ನಿಸಿದ್ದಾರೆ.

ಸಿಂಗ್ ಸ್ಪಷ್ಟನೆ:

ತಮ್ಮ ಫೋಟೋ ಸಂಚಲನ ಸೃಷ್ಟಿಸುತ್ತಿದ್ದಂತೆ ಸ್ಪಷ್ಟನೆ ನೀಡಿರುವ ದಿಗ್ವಿಜಯ ಸಿಂಗ್, ‘ನಾನು ಪಕ್ಷದ ಸಂಘಟನೆಯನ್ನು ಹೊಗಳಿದ್ದೇನಷ್ಟೆ. ಇದನ್ನು ನೀವು ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ. ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕಟ್ಟಾ ವಿರೋಧಿ’ ಎಂದು ಸಮಜಾಯಿಷಿ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಷ್ಯಾದ ಯಾಕುಟಿಯಾದಲ್ಲಿ-56 ಡಿ.ಸೆ. ತಾಪ ದಾಖಲು
ಹಾರುವ ಮೊದಲೇ ಕೇರಳದವಿಮಾನ ಸಂಸ್ಥೆ ಸಂಕಷ್ಟದಲ್ಲಿ