ಬಂಗಾಳ ಸರ್ಕಾರ ಬದಲಾವಣೆಗೆ ದೇವಿಗೆ ಪ್ರಾರ್ಥನೆ : ದೀದಿಗೆ ಶಾ ಟಾಂಗ್

KannadaprabhaNewsNetwork |  
Published : Sep 27, 2025, 12:00 AM ISTUpdated : Sep 27, 2025, 04:55 AM IST
ಶಾ | Kannada Prabha

ಸಾರಾಂಶ

‘2026ರ ಚುನಾವಣೆ ನಂತರ ‘ಸೋನಾರ್‌ ಬಾಂಗ್ಲಾ’ (ಸುವರ್ಣ ಬಂಗಾಳ) ನಿರ್ಮಿಸಬಲ್ಲ ಸರ್ಕಾರ ರಚನೆಯಾಗಬೇಕೆಂದು ನಾನು ದುರ್ಗಾದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಈ ಮೂಲಕ ಹಾಲಿ ಸಿಎಂ ಮಮತಾ ಬ್ಯಾನರ್ಜಿ ಸೋಲಿಸಲು ಜನತೆಯಲ್ಲಿ ಪರೋಕ್ಷ ಮನವಿ ಮಾಡಿದ್ದಾರೆ.

ಕೋಲ್ಕತಾ: ‘2026ರ ಚುನಾವಣೆ ನಂತರ ‘ಸೋನಾರ್‌ ಬಾಂಗ್ಲಾ’ (ಸುವರ್ಣ ಬಂಗಾಳ) ನಿರ್ಮಿಸಬಲ್ಲ ಸರ್ಕಾರ ರಚನೆಯಾಗಬೇಕೆಂದು ನಾನು ದುರ್ಗಾದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಈ ಮೂಲಕ ಹಾಲಿ ಸಿಎಂ ಮಮತಾ ಬ್ಯಾನರ್ಜಿ ಸೋಲಿಸಲು ಜನತೆಯಲ್ಲಿ ಪರೋಕ್ಷ ಮನವಿ ಮಾಡಿದ್ದಾರೆ.

ಇಲ್ಲಿನ ಸಂತೋಷ್‌ ಮಿತ್ರಾ ಚೌಕದಲ್ಲಿ ದುರ್ಗಾ ಪೂಜೆ ಉದ್ಘಾಟಿಸಿ ಮಾತನಾಡಿದ ಅವರು, ‘ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ಸುವರ್ಣ ಬಂಗಾಳ ನಿರ್ಮಾಣವಾಗಲಿದೆ. ಈ ಬಗ್ಗೆ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ನಮ್ಮ ಬಂಗಾಳ ಮತ್ತೊಮ್ಮೆ ಸುರಕ್ಷಿತ, ಸಮೃದ್ಧ , ಶಾಂತಿಯುತ, ಸಮೃದ್ಧಿಯಿಂದ ಕೂಡಬೇಕು. ಹಾಗಾದಾಗ ಕವಿ ರವೀಂದ್ರನಾಥ್‌ ಠಾಗೋರ್‌ ಕಲ್ಪಿಸಿಕೊಂಡ ಬಂಗಾಳ ನಿರ್ಮಿಸಲು ಸಾಧ್ಯ’ ಎಂದು ಹೇಳಿದರು.

ತಂದೆಯ ನಕಲಿ ವಿಲ್‌ ಸೃಷ್ಟಿಸಿ ವಂಚನೆ: ಕರಿಷ್ಮಾ ಮಕ್ಕಳ ಕಿಡಿ

ನವದೆಹಲಿ: ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಕಪೂರ್‌ ಸಾವಿನ ಬಳಿಕ ಆರಂಭವಾಗಿರುವ 30 ಸಾವಿರ ಕೋಟಿ ರು. ಆಸ್ತಿ ವಿವಾದ ಕುರಿತು ದಿಲ್ಲಿ ಹೈಕೋರ್ಟಲ್ಲಿ ವಾದ-ಪ್ರತಿವಾದ ಮುಂದುವರಿದಿದ್ದು, ‘ನಕಲಿ ವಿಲ್‌ ಸೃಷ್ಟಿಸಿ ನಮ್ಮನ್ನು ವಂಚಿಸಲಾಗುತ್ತಿದೆ’ ಎಂದು ಆಸ್ತಿಯಲ್ಲಿ ಪಾಲು ಕೇಳಿದ್ದ ಕರಿಷ್ಮಾ ಮಕ್ಕಳು ಆರೋಪಿಸಿದ್ದಾರೆ.ಕರಿಷ್ಮಾ ಮಕ್ಕಳ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ‘ಸಂಜಯ್‌ 2ನೇ ಪತ್ನಿ ಪ್ರಿಯಾ ಅವರು ವಿಲ್‌ನ ಪ್ರಮುಖ ದಾಖಲೆಗಳನ್ನು ವಿವರಗಳನ್ನು ತಡೆ ಹಿಡಿದಿದ್ದಾರೆ. ವಿಲ್‌ಗೆ ಸಂಬಂಧಿಸಿದ ಎರಡು ಬ್ಯಾಂಕ್‌ ಖಾತೆಗಳನ್ನು ಆ.22 -26ರ ಅವಧಿಯಲ್ಲಿ ಖಾಲಿ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ಈ ವಾದ ಆಲಿಸಿದ ಕೋರ್ಟು, ‘ಸಂಜಯ್‌ ಅವರ ಎಲ್ಲ ಆಸ್ತಿ ವಿವರಗಳನ್ನು ಸೀಲ್ಡ್‌ ಕವರ್‌ನಲ್ಲಿ ಸಲ್ಲಿಸಿ’ ಎಂದು ಸೂಚಿಸಿತು ಹಾಗೂ ಅದರಲ್ಲಿನ ವಿವರ ಬಹಿರಂಗಪಡಿಸದಂತೆ ಸೂಚಿಸಿತು.

ಏಕರೂಪದ ಸಂಹಿತೆಗೆ ಇದು ಸಕಾಲವಲ್ಲವೇ?: ಹೈಕೋರ್ಟ್‌

ನವದೆಹಲಿ: ವೈಯಕ್ತಿಕ ಕಾನೂನು ಮತ್ತು ಕ್ರಿಮಿನಲ್‌ ಕಾನೂನು ನಡುವಿನ ತಿಕ್ಕಾಟ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ಇದೀಗ ಏಕರೂಪದ ನಾಗರಿಕ ಸಂಹಿತೆ ಪರ ಧ್ವನಿ ಎತ್ತಿದೆ. ‘ದೇಶಾದ್ಯಂತ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಇದು ಸರಿಯಾದ ಸಮಯ ಅಲ್ಲವೇ’ ಎಂದು ಪ್ರಶ್ನಿಸಿದೆ.ಅಪ್ರಾಪ್ತೆಯ ಮದುವೆಯಾಗಿದಕ್ಕಾಗಿ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಕೋರಿ ಹಮೀಜ್‌ ರಾಜಾ ಎಂಬ ವ್ಯಕ್ತಿ ಸಲ್ಲಿಸಿದ್ದ ಬೇಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್‌ ಮೊಂಗಾ, ‘ಕ್ರಿಮಿನಲ್‌ ಕಾನೂನು ಮತ್ತು ವೈಯಕ್ತಿಕ ಕಾನೂನು ನಡುವಿನ ವಿರೋಧಾಭಾಸಕ್ಕೆ ಏಕರೂಪದ ನಾಗರಿಕ ಸಂಹಿತೆ ಅಂತ್ಯ ಹಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಏಕರೂಪದ ನಾಗರಿಕ ಸಂಹಿತೆಯನ್ನು ವಿರೋಧಿಸುವವರು ಧಾರ್ಮಿಕ ಸ್ವಾತಂತ್ರ್ಯ ನಾಶವಾಗುವ ಅಪಾಯದ ಆತಂಕ ಹೊರಹಾಕುತ್ತಾರೆ. ಆದರೆ ಇಂಥ ಸ್ವಾತಂತ್ರ್ಯಗಳು ಯಾವುದೇ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡುವಂತಿರಬಾರದು’ ಎಂದು ನ್ಯಾ.ಮೊಗಾ ಹೇಳಿದ್ದಾರೆ.ಸುದೀರ್ಘ ಅವಧಿಯಿಂದ ಅಸ್ತಿತ್ವದಲ್ಲಿರುವ ವೈಯಕ್ತಿಕ ಕಾನೂನು ಪಾಲನೆಗಾಗಿ ಸಮಾಜವನ್ನು ಅಥವಾ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಬೇಕೇ? ಎಂಬ ಜಿಜ್ಞಾಸೆ ಪ್ರತಿ ಬಾರಿ ನಮಗೆ ಎದುರಾಗುತ್ತದೆ. ಹಾಗಿದ್ದರೆ ಇದು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸರಿಯಾದ ಸಮಯ ಅಲ್ಲವೇ? ಧಾರ್ಮಿಕ ಕಾನೂನು ಅಥವಾ ವೈಯಕ್ತಿಕ ಕಾನೂನು ರಾಷ್ಟ್ರೀಯ ಕಾನೂನಿಗಿಂತ ಮಿಗಿಲಲ್ಲ ಎಂಬ ಸ್ಪಷ್ಟ ಚೌಕಟ್ಟು ರಚನೆಯಾಗಬೇಕಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಕರಣದಲ್ಲಿ ಅರ್ಜಿದಾರನಿಗೆ ಜಾಮೀನು ನೀಡಿದ ನ್ಯಾಯಾಲಯ, ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ 15ನೇ ವಯಸ್ಸಿಗೆ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ತಲುಪುತ್ತಾರೆ. ಇಂಥ ವಿವಾಹ ವೈಯಕ್ತಿಕ ಕಾನೂನು ಪ್ರಕಾರ ಅಪರಾಧವಲ್ಲ. ಆದರೆ ಪೋಕ್ಸೋ, ಬಿಎನ್‌ಎಸ್‌ನಡಿ ಇದು ಅಪರಾಧ. ಹೀಗಾಗಿ ಎರಡು ಕಾನೂನುಗಳ ನಡುವೆ ಪದೇ ಪದೆ ತಿಕ್ಕಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟ ಚೌಕಟ್ಟಿನ ಅಗತ್ಯವಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಜುಲೈನಲ್ಲಿ ಡಾಲರ್‌ ಖರೀದಿಸದ ಆರ್‌ಬಿಐ: ದಶಕದಲ್ಲಿ ಫಸ್ಟ್‌

ನವದೆಹಲಿ: ಭಾರತ ಮತ್ತು ಅಮೆರಿಕದ ನಡುವೆ ತೆರಿಗೆಯ ಕಾರಣ ಅಸಮಾಧಾನ ಇರುವ ಹೊತ್ತಿನಲ್ಲೇ, ಜುಲೈನಲ್ಲಿ ರಾಷ್ಟ್ರೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಒಂದೂ ಅಮೆರಿಕನ್‌ ಡಾಲರ್‌ ಖರೀದಿಸಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿರುವುದು ಕಳೆದ 11 ವರ್ಷದಲ್ಲೇ ಮೊದಲ ಬಾರಿ. ಇದೇ ತಿಂಗಳು, ರುಪಾಯಿ ಬೆಲೆಯ ಸ್ಥಿರತೆ ಕಾಪಾಡಲು 22 ಸಾವಿರ ಕೋಟಿ ರು. ಮೌಲ್ಯದ ಡಾಲರ್‌ ಮಾರಿದೆ. ಆರ್‌ಬಿಐನ ಈ ನಡೆಯಿಂದಾಗಿ, ಜು.4ರಂದು 62 ಲಕ್ಷ ಕೋಟಿ ರು. ಇದ್ದ ವಿದೇಶಿ ವಿನಿಮಯ ಆ.1ರ ವೇಳೆಗೆ 61 ಲಕ್ಷ ಕೋಟಿ ರು.ಗೆ ಕುಸಿದಿದೆ.ಈ ಮೊದಲು, 2014ರ ಜುಲೈನಲ್ಲಿ ಆರ್‌ಬಿಐ ಡಾಲರ್‌ ಖರೀದಿಯಿಂದ ದೂರ ಉಳಿದಿತ್ತು.

ಉತ್ತರದಲ್ಲಿ ಸ್ತ್ರೀಯನ್ನು ಮನುಷ್ಯರೆಂದು ಪರಿಗಣಿಸಲ್ಲ: ತಮಿಳು ಸಚಿವ

ಚೆನ್ನೈ: ಉತ್ತರ ಭಾರತ ಮಹಿಳೆಯರು ಮತ್ತು ತಮಿಳುನಾಡು ಮಹಿಳೆಯರ ಸಾಮಾಜಿಕ ಸ್ಥಿತಿಯನ್ನು ಹೋಲಿಕೆ ಮಾಡಿ ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಕಾಲೇಜೊಂದರಲ್ಲಿ ಮಾತನಾಡಿದ ರಾಜಾ, ‘100 ವರ್ಷ ಹಿಂದೆ ಉತ್ತರದಲ್ಲಿ ಮಹಿಳೆಯರನ್ನು ಮನುಷ್ಯರು ಎಂದೇ ಪರಿಗಣಿಸುತ್ತಿರಲಿಲ್ಲ. ಈಗಲೂ ಆ ಸ್ಥಿತಿ ಬದಲಾಗಿಲ್ಲ. ತಮಿಳುನಾಡು ಮತ್ತು ಭಾರತದ ಇತರ ರಾಜ್ಯಗಳಲ್ಲಿ ಮಹಿಳೆಗೆ ವ್ಯತ್ಯಾಸವಿದೆ. ಉತ್ತರ ಭಾರತದಲ್ಲಿ ಮಹಿಳೆಗೆ ‘ನಿನ್ನ ಗಂಡ ಎಲ್ಲ ಕೆಲಸ ಮಾಡುತ್ತಾನೆ?’ ಎಂದು ಕೇಳುತ್ತೇವೆ. ಅದೇ ತಮಿಳುನಾಡಿನಲ್ಲಿ ಮಹಿಳೆಗೆ ‘ನೀನು ಎಲ್ಲಿ ಕೆಲಸ ಮಾಡುವೆ?’ ಎಂದು ಕೇಳುತ್ತೇವೆ. ಈ ಬದಲಾವಣೆ ರಾತ್ರೋರಾತ್ರಿ ಸಂಭವಿಸುವುದಿಲ್ಲ. ತಮಿಳುನಾಡಿನಲ್ಲಿ ಕನಿಷ್ಠ ಇದು ಶತಮಾನ ತೆಗೆದುಕೊಂಡಿದೆ’ ಎಂದರು.ರಾಜಾ ಹೇಳಿಕೆಯನ್ನು ಡಿಎಂಕೆ ನಾಯಕ ಟಿಕೆಎಸ್‌ ಇಳಂಗೋವನ್ ಬೆಂಬಲಿಸಿದ್ದಾರೆ. ‘ಉತ್ತರ ಭಾರತ ಮಹಿಳೆಯರು ಮನುಸ್ಮೃತಿ ಅನುಸರಿಸುವುದರಿಂದ ಹೀಗೆ ಮಾಡುತ್ತಾರೆ’ ಎಂದಿದ್ದಾರೆ.

ಇದಕ್ಕೆ ಬಿಜೆಪಿ ಕಿಡಿಕಾರಿದ್ದು, ‘ಉತ್ತರ ಭಾರತೀಯರನ್ನು ಅವಮಾನಿಸಿ ಡಿಎಂಕೆ ಮತ್ತೊಮ್ಮೆ ಲಕ್ಷ್ಮಣರೇಖೆ ದಾಟಿದೆ’ ಎಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಮೇಲೆ ಟ್ರಂಪ್‌ ಮಾತಲ್ಲೇ ಬಾಂಬ್‌ ದಾಳಿ
ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!