;Resize=(412,232))
ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರದ ನೌಕಾನೆಲೆಯಲ್ಲಿ ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರಯಾನ ಕೈಗೊಳ್ಳಲಿದ್ದಾರೆ ಎಂದು ರಾಷ್ಟ್ರಪತಿ ಭವನ ಶುಕ್ರವಾರ ಪ್ರಕಟಿಸಿದೆ. ಈ ಮೂಲಕ, ಮುರ್ಮು ಅವರು ಜಲಾಂತರ್ಗಾಮಿಯಲ್ಲಿ ಸಾಗಲಿರುವ ಮೊದಲ ಮಹಿಳಾ ರಾಷ್ಟ್ರಪತಿ ಎನ್ನಿಸಿಕೊಳ್ಳಲಿದ್ದಾರೆ.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜಲಾಂತರ್ಗಾಮಿ ನೌಕೆಯಲ್ಲಿ ಯಾನ ಕೈಗೊಂಡ ಮೊದಲ ರಾಷ್ಟ್ರಪತಿ ಎನ್ನಿಸಿಕೊಂಡಿದ್ದರು. ಅವರು 2006ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಐಎನ್‌ಎಸ್ ಸಿಂಧುರಕ್ಷಕ್ ಸಬ್‌ಮರೀನ್‌ನಲ್ಲಿ 3.5 ತಾಸು ಯಾನ ಮಾಡಿದ್ದರು. ಆದರೆ ಈಗ ಈ ಸಾಹಸ ಮಾಡಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಕಿರೀಟ ಮುರ್ಮು ಮುಡಿಗೇರಲಿದೆ.
ಮುರ್ಮು ಅವರು ಶನಿವಾರ ಸಂಜೆ ಗೋವಾಗೆ ಬಂದಿಳಿಯಲಿದ್ದು, ಡಿ.28ರಂದು ಕಾರವಾರಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಕದಂಬ ನೌಕಾ ನೆಲೆಯಲ್ಲಿ ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರದಲ್ಲಿ ಸಂಚರಿಸಲಿದ್ದಾರೆ. ಯುದ್ಧ ನೌಕೆಗಳ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ರಾಷ್ಟ್ರಪತಿ ಭವನ ಹೇಳಿದೆ. ಆದರೆ ಯಾವ ಜಲಾಂತರ್ಗಾಮಿಯಲ್ಲಿ ಅವರು ಸಂಚರಿಸಲಿದ್ದಾರೆ ಎಂಬ ಮಾಹಿತಿ ನೀಡಿಲ್ಲ.
ದ್ರೌಪದಿ ಮುರ್ಮು ಅವರು ಈ ಹಿಂದೆ 2023ರ ಏ.8ರಂದು ಅಸ್ಸಾಂನ ತೇಜ್‌ಪುರದಲ್ಲಿ ಸುಖೋಯ್ 30 ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದರು. ನಂತರ ಇದೇ ವರ್ಷ ಅ.29ರಂದು ಹರ್ಯಾಣದ ಅಂಬಾಲಾದಲ್ಲಿ ರಫೇಲ್ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದರು. ಈ ಮೂಲಕ 2 ಜೆಟ್‌ಗಳಲ್ಲಿ ಪ್ರಯಾಣಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿ ಗಳಿಸಿದ್ದರು.