- ಸುಪ್ರೀಂ ಕೋರ್ಟ್ ಸಂವಿಧಾನದ ರಕ್ಷಕ: ಸಿಜೆಐ ಗವಾಯಿ
- ಅಟಾರ್ನಿ ಜನರಲ್‌ಗೆ ಸಾಂವಿಧಾನಿಕ ಪೀಠದಿಂದ ಪ್ರಶ್ನೆ
- ಮಸೂದೆ ಅಂಗೀಕಾರಕ್ಕೆ ಕಾಲಮಿತಿ ಸರಿಯೇ ಎಂಬ ವಿವಾದನವದೆಹಲಿ: ವಿಧೇಯಕಗಳ ಕುರಿತ ನಿರ್ಧಾರ ಕೈಗೊಳ್ಳಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ಹೇರುವ ತನ್ನ ಏ.13ರ ತೀರ್ಪಿನ ಕುರಿತು ಸ್ಪಷ್ಟನೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಲ್ಲಿಸಿದ್ದ ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್, ತನ್ನ ತೀರ್ಪನ್ನು ಕಾಯ್ದಿರಿಸಿದೆ.ಕೊನೆಯ ದಿನದ ವಿಚಾರಣೆ ವೇಳೆ ತನ್ನನ್ನು ತಾನು ಸಂವಿಧಾನದ ರಕ್ಷಕ ಎಂದು ಹೇಳಿಕೊಂಡಿರುವ ನ್ಯಾಯಾಲಯವು, ‘ರಾಜ್ಯಪಾಲರಂಥ ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾದಾಗ ನಾವು ಸುಮ್ಮನೆ ಕೂತಿರಬೇಕೇ?’ ಎಂದೂ ಎಂದೂ ಖಾರವಾಗಿ ಪ್ರಶ್ನಿಸಿದೆ.
ಸಂವಿಧಾನದ 200, 201ನೇ ಪರಿಚ್ಛೇದವು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ವಿಧೇಯಕದ ಕುರಿತು ನಿರ್ಧಾರ ಕೈಗೊಳ್ಳಲು ಕಾಲಮಿತಿ ನಿಗದಿಗೆ ಅವಕಾಶ ಮಾಡಿಕೊಡುತ್ತದೆಯೇ, ಇಲ್ಲವೇ ಎಂಬ ಕುರಿತು ಸುದೀರ್ಘವಾದ ವಾದ-ಪ್ರತಿವಾದ ಆಲಿಸಿದೆ.
ಗುರುವಾರ ಕೂಡ ಸಿಜೆಐ ನ್ಯಾ.ಗವಾಯಿ ಅವರು,‘ಪ್ರಜಾಪ್ರಭುತ್ವದ ಒಂದು ವಿಭಾಗವು ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾದಾಗ ಸಂವಿಧಾನದ ರಕ್ಷಕ ಅಧಿಕಾರರಹಿತನಾಗಿರಬೇಕೇ, ಸುಮ್ಮನೆ ಕೂತಿರಬೇಕೇ’ ಎಂದು ಪ್ರಶ್ನಿಸಿದರು.
ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕೇವಲ ಮಂತ್ರಿಮಂಡಲದ ಸಲಹೆಯಂತೆ ಕಾರ್ಯನಿರ್ವಹಿಸಬೇಕು ಎಂಬ ರಾಜ್ಯಗಳ ವಾದವನ್ನೂ ತಳ್ಳಿಹಾಕಿದ ಅವರು, ‘ಒಂದು ವೇಳೆ ಶಾಸಕಾಂಗವು ನಾವು ಇನ್ನು ಮುಂದೆ ಭಾರತದಿಂದ ಪ್ರತ್ಯೇಕವಾಗುತ್ತೇವೆಂಬ ಶಾಸನ ಅಂಗೀಕರಿಸಿ ಕಳುಹಿಸಿಕೊಟ್ಟರೆ ರಾಜ್ಯಪಾಲರಿಗೆ ಆ ವಿಧೇಯಕವನ್ನು ಹಿಡಿದಿಟ್ಟುಕೊಳ್ಳದೆ ವಿಧಿಯಿಲ್ಲ’ ಎಂದರು.