ಮುಂಬೈ: ಹಿರಿಯ ನಟ ಮತ್ತು ನಿರ್ಮಾಪಕ ಧೀರಜ್ ಕುಮಾರ್ (79) ಮಂಗಳವಾರ ನಿಧನರಾದರು.
ನ್ಯುಮೋನಿಯಾದಿಂದ ಬಳಲುತ್ತಿದ್ದ ಕುಮಾರ್ ಅವರ ಸ್ಥಿತಿ ಬಿಗಡಾಯಿಸಿದ ಕಾರಣ, ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು,
1970 ಮತ್ತು 80 ರ ದಶಕಗಳಲ್ಲಿ ಧೀರಜ್ ಕುಮಾರ್ ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಸೂಪರ್ ಹಿಟ್ ಚಿತ್ರ ‘ರೋಟಿ ಕಪ್ಡಾ ಔರ್ ಮಕಾನ್’ (1974) ನಂತಹ ಚಲನಚಿತ್ರಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸ್ವಾಮಿ, ಕ್ರಾಂತಿ ಮತ್ತು ಹೀರಾ ಪನ್ನಾ ಮುಂತಾದವು ಅವರ ಇತರ ಪ್ರಮುಖ ಚಿತ್ರಗಳು. ಇತ್ತೀಚೆಗೆ ಅನೇಕ ಟೀವಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು.
ಸೇನೆಗೆ ಅವಮಾನ ಕೇಸ್: ರಾಹುಲ್ ಗಾಂಧಿಗೆ ಜಾಮೀನು
ಲಖನೌ: ಗಲ್ವಾನ್ ವ್ಯಾಲಿ ಗಲಾಟೆ ವಿಚಾರ ಮುಂದಿಟ್ಟುಕೊಂಡು ಭಾರತೀಯ ಯೋಧರಿಗೆ ಅವಮಾನ ಮಾಡಿದ ಆರೋಪದ ಮೇರೆಗೆ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಕೇಸಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ಜಾಮೀನು ಸಿಕ್ಕಿದೆ.ಈ ಸಂಬಂಧ ಲಖನೌ ಕೋರ್ಟ್‌ಗೆ ಖುದ್ದು ವಕೀಲರ ಜತೆಗೆ ಹಾಜರಾದ ರಾಹುಲ್ ಅವರು ಜಾಮೀನು ಪಡೆದುಕೊಂಡಿದ್ದಾರೆ.
‘ನಾವು ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದು ಏಕೆ ಎಂಬುದಾಗಿ ಜನ ಪ್ರಶ್ನಿಸುತ್ತಾರೆ. ಆದರೆ, ಚೀನಾ ಯೋಧರು ನಮ್ಮ ಯೋಧರನ್ನು ಹೊಡೆದಿದ್ದನ್ನು ಯಾರೂ ಪ್ರಶ್ನಿಸಲ್ಲ’ ಎಂದು ಹೇಳಿದ್ದರು. ಇದು ಯೋಧರಿಗೆ ಮಾಡಿದ ಅವಮಾನ ಎಂದು ಅನಿಸಿಕೆ ವ್ಯಕ್ತವಾಗಿತ್ತು. ಈ ಸಂಬಂಧ ಡಿ.16, 2022ರಂದು ರಾಹುಲ್ ಗಾಂಧಿ ವಿರುದ್ಧ ವಕೀಲ ಪ್ರಾಂಶು ಅಗರ್‌ವಾಲ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಅಂತರಿಕ್ಷಕ್ಕೆ ದಲಿತನನ್ನೇ ಕಳಿಸಲಿಲ್ಲ: ಕಾಂಗ್ರೆಸ್ಸಿಗ ವಿವಾದ
ನವದೆಹಲಿ: ಇಡೀ ದೇಶ ಶುಭಾಂಶು ಶುಕ್ಲಾ ಯಶಸ್ವಿಯಾಗಿ ಭೂಮಿಗೆ ಹಿಂದಿರುಗಿದ ಸಂಭ್ರಮದಲ್ಲಿರುವಾಗಲೇ, ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಅಪಸ್ವರ ನುಡಿದಿದ್ದು, ಶುಕ್ಲಾ ಬದಲಿಗೆ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಬೇಕಿತ್ತು ಎಂದಿದ್ದಾರೆ. ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಕೇಶ್ ಶರ್ಮಾರನ್ನು ಈ ಹಿಂದೆ ಕಳುಹಿಸಿದಾಗ, ಎಸ್‌ಸಿ, ಎಸ್‌ಟಿ, ಒಬಿಸಿ ಜನರು ಅಷ್ಟೊಂದು ವಿದ್ಯಾವಂತರಾಗಿರಲಿಲ್ಲ. ಈ ಬಾರಿ, ದಲಿತರನ್ನು ಕಳುಹಿಸುವ ಸರದಿ ಬಂದಿದೆ ಎಂದು ನಾನು ಭಾವಿಸಿದ್ದೆ. ಶುಕ್ಲಾ ಜಿ ಅವರ ಬದಲಿಗೆ ಯಾವುದೇ ದಲಿತ ಅಥವಾ ಒಬಿಸಿಯನ್ನು ಕಳುಹಿಸಬಹುದಿತ್ತು’ ಎಂದಿದ್ದಾರೆ.
ಸ್ತ್ರೀಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಯೂಟ್ಯೂಬರ್ ರೈನಾ ಲಿಖಿತ ಕ್ಷಮೆ
ನವದೆಹಲಿ: ಇಂಡಿಯಾ ಗಾಟ್ ಲೇಟೆಂಟ್ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮಯ್ ರೈನಾ ಮಂಗಳವಾರ ರಾಷ್ಟ್ರೀಯ ಮಹಿಳಾ ಆಯೋಗದ ಎದುರು ವಿಚಾರಣೆಗೆ ಹಾಜರಾದರು. ಈ ವೇಳೆ ಅವರು ಸ್ತ್ರೀಯರನ್ನು ಅವಮಾನಿಸಿದ್ದಕ್ಕೆ ಲಿಖಿತ ಕ್ಷಮೆಯಾಚಿಸಿದರು. ಅಲ್ಲದೇ, ‘ಮುಂದಿನ ದಿನಗಳಲ್ಲಿ ಅಂತಹ ತಪ್ಪುಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇನೆ. ಹಾಗೂ ಮಹಿಳೆಯರ ಘನತೆ ಎತ್ತಿ ಹಿಡಿಯುವ ಕೆಲಸ ಹಾಗೂ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ’ ಎಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟರು.ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂಬಂಧ ಆಯೋಗ ಸಮಯ್ ರೈನಾಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆ ವಿಚಾರಣೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷ ವಿಜಯ್ ರಾಹತ್ಕರ್ ಎದುರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ಸುಪ್ರೀಂ ಕೋರ್ಟಿಗೆ ಅವರು ಮಂಗಳವಾರ ಅಂಗವಿಕಲರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗಿದ್ದರು. ಅಲ್ಲಿ ಅವರಿಗೆ 2 ವಾರದೊಳಗೆ ಉತ್ತರಿಸಬೇಕು ಎಂದು ಕೋರ್ಟ್ ಎಚ್ಚರಿಸಿತ್ತು.
ಮೋದಿ, ಆರೆಸ್ಸೆಸ್ ಬಗ್ಗೆ ಆಕ್ಷೇಪಾರ್ಹ ವ್ಯಂಗ್ಯಚಿತ್ರ: ಕಾರ್ಟೂನಿಸ್ಟ್‌ಗೆ ಎಚ್ಚರಿಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ರ್ಯಕರ್ತರ ಬಗ್ಗೆ ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಹಂಚಿಕೊಂಡಿದ್ದ ಮಧ್ಯಪ್ರದೇಶದ ವ್ಯಂಗ್ಯಚಿತ್ರಕಾರ ಹೇಮಂತ ಮಾಳವೀಯಗೆ ಸುಪ್ರೀಂ ಕೋರ್ಟ್ ಮಂಗಳವಾರ ರಕ್ಷಣೆ ನೀಡಿದೆ. ಆದರೂ ಕೂಡ ಇಂಥದ್ದನ್ನು ಪುನರಾವರ್ತಿಸದಂತೆ ಎಚ್ಚರಿಸಿದೆ.‘ಈಗಾಗಲೇ ಅವರು ಕ್ಷಮೆ ಕೇಳಿರುವ ಕಾರಣ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ವ್ಯಕ್ತಿಯ ಕ್ರಮ ಮುಂದುವರಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮಧ್ಯಪ್ರದೇಶ ಸರ್ಕಾರ ಮುಕ್ತವಾಗಿದೆ’ ಎಂದು ದ್ಬಿಸದಸ್ಯ ಪೀಠ ಹೇಳಿದೆ.
ಜಾಲತಾಣದಲ್ಲಿ ಹೆಚ್ಚಿದ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಪೀಠ ಕಳವಳ ವ್ಯಕ್ತಪಡಿಸಿದೆ.