;Resize=(412,232))
ಚೆನ್ನೈ: ದಕ್ಷಿಣ ಭಾರತದ ರಾಜ್ಯಗಳ ನಡುವಿನ ಸೌಹಾರ್ದತೆ ಮತ್ತು ನದಿ ನೀರು ಹಂಚಿಕೆ ವಿಚಾರದಲ್ಲಿ ಕಾನೂನಾತ್ಮಕ ನಿಯಮಗಳ ಪಾಲನೆ ಅತ್ಯಗತ್ಯ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಪ್ರತಿಪಾದಿಸಿದ್ದಾರೆ.
ಇಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ‘ಮೇಕೆದಾಟು ಯೋಜನೆಯು ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ಸಹಾಯ ಮಾಡುತ್ತದೆ. ನಿಮಗೆ ನೆರವಾಗಲು ನಮಗೆ ಅವಕಾಶ ನೀಡಿ’ ಎಂದು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, ‘ನೀರು ಕೋಟ್ಯಂತರ ಜನರ ಜೀವನಾಡಿ ಮತ್ತು ಕೃಷಿಗೆ ಆಧಾರವಾಗಿದೆ. ಹೀಗಾಗಿ ಅಂತಾರಾಜ್ಯ ನದಿಗಳ ನಿರ್ವಹಣೆಯಲ್ಲಿ ಸಹಕಾರದೊಂದಿಗೆ ಕಾನೂನಿನ ಚೌಕಟ್ಟನ್ನು ಕಟ್ಟುನಿಟ್ಟಾಗಿ ಗೌರವಿಸುವುದು ಮುಖ್ಯ. ಕಾವೇರಿ ನೀರನ್ನು ನೆಚ್ಚಿಕೊಂಡಿರುವ ತಮಿಳುನಾಡಿನಂತಹ ಕೆಳಭಾಗದ ರಾಜ್ಯಗಳ ಹಕ್ಕುಗಳು ಮತ್ತು ರೈತರ ಜೀವನೋಪಾಯಕ್ಕೆ ಯಾವುದೇ ಧಕ್ಕೆಯಾಗದಂತೆ ಸಂಪೂರ್ಣ ರಕ್ಷಣೆ ನೀಡಬೇಕು’ ಎಂದರು.
ಅಲ್ಲದೆ, ‘ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ನಿರ್ದೇಶನಗಳು ಹಾಗೂ ನ್ಯಾಯಾಧಿಕರಣದ ಆದೇಶಗಳನ್ನು ಪ್ರತಿಯೊಂದು ರಾಜ್ಯವೂ ಅಕ್ಷರಶಃ ಮತ್ತು ಪ್ರಾಮಾಣಿಕವಾಗಿ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.