ಬಾಂಗ್ಲಾ ವಿದ್ಯಾರ್ಥಿ ಹಿಂಸಾಚಾರ ಹಿಂದೆ ಮೀಸಲಾತಿ ವ್ಯವಸ್ಥೆಯ ವಿರುದ್ಧದ ಆಕ್ರೋಶದ ಕತೆ

KannadaprabhaNewsNetwork |  
Published : Aug 06, 2024, 12:34 AM ISTUpdated : Aug 06, 2024, 06:13 AM IST
ಬಾಂಗ್ಲಾ ದಂಗೆ | Kannada Prabha

ಸಾರಾಂಶ

ಬಾಂಗ್ಲಾದೇಶದಲ್ಲಿ 300ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಹಾಗೂ ಪ್ರಧಾನಿ ಶೇಖ್‌ ಹಸೀನಾ ಪದತ್ಯಾಗ ಮತ್ತು ಪಲಾಯನಕ್ಕೆ ಕಾರಣವಾದ ವಿದ್ಯಾರ್ಥಿ ಹಿಂಸಾಚಾರ ಹಿಂದೆ ಮೀಸಲಾತಿ ವ್ಯವಸ್ಥೆಯ ವಿರುದ್ಧದ ಆಕ್ರೋಶದ ಕತೆಯಿದೆ.

ಢಾಕಾ: ಬಾಂಗ್ಲಾದೇಶದಲ್ಲಿ 300ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಹಾಗೂ ಪ್ರಧಾನಿ ಶೇಖ್‌ ಹಸೀನಾ ಪದತ್ಯಾಗ ಮತ್ತು ಪಲಾಯನಕ್ಕೆ ಕಾರಣವಾದ ವಿದ್ಯಾರ್ಥಿ ಹಿಂಸಾಚಾರ ಹಿಂದೆ ಮೀಸಲಾತಿ ವ್ಯವಸ್ಥೆಯ ವಿರುದ್ಧದ ಆಕ್ರೋಶದ ಕತೆಯಿದೆ. -ಬಾಂಗ್ಲಾ ವಿಮೋಚನಾ ಹೋರಾಟಗಾರರ ಕುಟುಂಬಕ್ಕೆ ಶೇ.30 ಮೀಸಲು ನೀಡುವ ಹಸೀನಾ ಇರಾದೆಯು ದೇಶವನ್ನು ಅರಾಜಕತೆಗೆ ತಳ್ಳಿದೆ.ಬಾಂಗ್ಲಾದೇಶವು ಪಾಕಿಸ್ತಾನದಿಂದ ಪ್ರತ್ಯೇಕಗೊಂಡು 1971ರಲ್ಲಿ ಪ್ರತ್ಯೇಕ ದೇಶವಾಗಿ ಉದಯವಾಯಿತು. 

ಇದಕ್ಕೆ ಬಾಂಗ್ಲಾ ವಿಮೋಚನಾ ಹೋರಾಟ ಎಂದೂ ಹೆಸರು. ಹೊಸ ಬಾಂಗ್ಲಾದೇಶ ರಚನೆ ನಂತರ ಅಧಿಕಾರಕ್ಕೆ ಬಂದ ಶೇಖ್‌ ಮುಜಿಬುರ್‌ ರೆಹಮಾನ್‌ ಅವರು (ಶೇಖ್‌ ಹಸೀನಾ ತಂದೆ), ವಿಮೋಚನಾ ಹೋರಾಟಗಾರರಿಗೆ ಹಾಗೂ ಪಾಕ್‌ನಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ನೀಡಿದರು. 

ಆದರೆ ರೆಹಮಾನ್‌ ನಂತರ ಬಂದ ಸರ್ಕಾರಗಳು ಸಮಾಜದ ವಿವಿಧ ವರ್ಗಗಳಿಗೆ ಮೀಸಲು ವಿಸ್ತರಿಸಿದ್ದವು.ಆದರೆ ವಿವಿಧ ವರ್ಗಗಳಿಗೆ ಇದ್ದ ಮೀಸಲನ್ನು ಇತ್ತೀಚೆಗೆ ರದ್ದು ಮಾಡಿದ್ದ ಶೇಖ್ ಹಸೀನಾ, 1971ರ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರಿಗೆ ಮಾತ್ರ 30 ಪ್ರತಿಶತದಷ್ಟು ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ತೀರ್ಮಾನ ಕೈಗೊಂಡರು. 

ಈಗ ಸೃಷ್ಟಿ ಆಗಿರುವ ಅರಾಜಕತೆಯ ಮೂಲವು ಈ ವಿವಾದಾತ್ಮಕ ಕೋಟಾದಲ್ಲಿ ಅಡಗಿದೆ.ಈ ವ್ಯವಸ್ಥೆಯು ತಾರತಮ್ಯದಿಂದ ಕೂಡಿದೆ ಮತ್ತು ಪ್ರಧಾನಿ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಅನುಕೂಲವಾಗಿದೆ ಎಂದು ಜಮಾತೆ ಇಸ್ಲಾಮಿ ಎಂಬ ಕಟ್ಟರ್‌ವಾದಿ ಮುಸ್ಲಿಂ ಪಕ್ಷ ಹಾಗೂ ಅದರ ಅಧೀನದಲ್ಲಿ ಕೆಲಸ ಮಾಡುವ ವಿದ್ಯಾರ್ಥಿ ಹೋರಾಟಗಾರರು ಕಳೆದ ತಿಂಗಳು ಪ್ರತಿಭಟನೆ ಆರಂಭಿಸಿದರು.

 ವಿಮೋಚನಾ ಹೋರಾಟಗಾರರ ಕೋಟಾ ಬದಲು ಅರ್ಹತೆ ಆಧಾರಿತ ಮೀಸಲಿಗೆ ಆಗ್ರಹಿಸಿದರು. ಆಗ ಪ್ರತಿಭಟನಾಕಾರರನ್ನು ಹಸೀನಾ ರಜಾಕಾರರು (1971ರಲ್ಲಿ ಪಾಕ್‌ ಸೇನೆಯನ್ನು ಬೆಂಬಲಿಸಿದ ದೇಶದ್ರೋಹಿಗಳು) ಎಂದು ಕರೆದರು. ಹೀಗಾಗಿ ಹೋರಾಟವು ಹಿಂಸಾಚಾರಕ್ಕೆ ತಿರುಗಿ ಮೊದಲ ಹಂತದ ಹೋರಾಟದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವಿಗೀಡಾದರು.ಈ ಹಂತದಲ್ಲಿ ಬಾಂಗ್ಲಾ ಕೋರ್ಟ್‌ ಮಧ್ಯಪ್ರವೇಶಿಸಿ ಮೀಸಲನ್ನು ಶೇ.5ಕ್ಕೆ ಇಳಿಸುವ ಆದೇಶ ಹೊರಡಿಸಿತ್ತು. 

ಆಗ ಹೋರಾಟ ಕೊಂಚ ತಣ್ಣಗಾದಂತೆ ಕಂಡುಬಂದರೂ ಬೂದಿ ಮುಚ್ಚಿದ ಕೆಂಡದಂತಿತ್ತು. ಇದರ ನಡುವೆ ಮೀಸಲು ವಿರುದ್ಧ ಹೋರಾಡಿದ ಜಮಾತೆ ಇಸ್ಲಾಮಿ ಪಕ್ಷ ಹಾಗೂ ವಿದ್ಯಾರ್ಥಿ ಸಂಘಟನೆಗಳನ್ನು ಹಸೀನಾ ನಿಷೇಧಿಸಿದರು ಹಾಗೂ ಹೋರಾಟದಲ್ಲಿನ ಬಂಧಿತ ನಾಯಕರನ್ನು ಬಿಡಬೇಕು ಎಂದು ವಿದ್ಯಾರ್ಥಿಗಳು ಹಿಡಿದ ಪಟ್ಟಿಗೆ ಹಸೀನಾ ಮಣಿಯಲಿಲ್ಲ. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಶನಿವಾರ ಮತ್ತೆ ಹಿಂಸಾತ್ಮಕ ಹೋರಾಟ ಆರಂಭವಾಯಿತು ಹಾಗೂ 100 ಜನರನ್ನು ಬಲಿಪಡೆಯಿತು. ಪ್ರತಿಭಟನಾಕಾರರು ಹಸೀನಾ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಅವರು ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ