ಅಯೋಧ್ಯೆ ದೇಣಿಗೆ ಕದ್ದಿದ್ದುಯಾರೇ ಆಗಿದ್ದರೂ ಕಠಿಣಶಿಕ್ಷೆ ವಿಧಿಸಿ : ಆರೆಸ್ಸೆಸ್‌ನಿಂದ

KannadaprabhaNewsNetwork |  
Published : Jul 04, 2026, 01:45 AM ISTUpdated : Jul 04, 2026, 04:55 AM IST
Hosabale

ಸಾರಾಂಶ

ಅಯೋಧ್ಯೆ   ‘ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಇಡೀ ಸಮಾಜದ ಭಾವನೆ ಮತ್ತು ನಂಬಿಕೆಗೆ ತೀವ್ರವಾಗಿ ನೋವುಂಟುಮಾಡಿದೆ. ತನಿಖೆಯ ನಂತರ ಯಾರೇ ತಪ್ಪಿತಸ್ಥರೆಂದು ತಿಳಿದುಬಂದರೂ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಆಗ್ರಹಿಸಿದ್ದಾರೆ.

 ನವದೆಹಲಿ : ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್‌) ಶುಕ್ರವಾರ ಮೌನ ಮುರಿದಿದೆ. ‘ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಇಡೀ ಸಮಾಜದ ಭಾವನೆ ಮತ್ತು ನಂಬಿಕೆಗೆ ತೀವ್ರವಾಗಿ ನೋವುಂಟುಮಾಡಿದೆ. ತನಿಖೆಯ ನಂತರ ಯಾರೇ ತಪ್ಪಿತಸ್ಥರೆಂದು ತಿಳಿದುಬಂದರೂ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಆಗ್ರಹಿಸಿದ್ದಾರೆ.

ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಈ ಘಟನೆಯಿಂದ ನಮಗೆಲ್ಲ ತುಂಬಾ ನೋವಾಗಿದೆ, ಕೋಪ ಬಂದಿದೆ. ಆದರೆ ಇದರ ನಡುವೆ ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳು ಈ ದುರದೃಷ್ಟಕರ ಘಟನೆಯನ್ನು ಬಳಸಿಕೊಂಡು ಹಿಂದೂ ಧರ್ಮವನ್ನು ಅಪಖ್ಯಾತಿಗೊಳಿಸಲು ಯತ್ನಿಸುತ್ತಿವೆ. ಇಂತಹ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು. ಈ ಕಠಿಣ ಸಂದರ್ಭದಲ್ಲಿ ಸಮಸ್ತ ಹಿಂದೂ ಸಮಾಜ ಅಗತ್ಯವಾದ ತಾಳ್ಮೆ ಮತ್ತು ಸಂಯಮವನ್ನು ಪ್ರದರ್ಶಿಸಬೇಕು ಎಂದು ಆರ್‌ಎಸ್‌ಎಸ್ ಕರೆ ನೀಡುತ್ತದೆ’ ಎಂದು ತಿಳಿಸಿದ್ದಾರೆ.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ:

ಈ ತೀವ್ರ ಖಂಡನೀಯ ಘಟನೆಯನ್ನು ಟ್ರಸ್ಟ್ ಗಂಭೀರವಾಗಿ ಪರಿಗಣಿಸಿ, ದೇವಾಲಯದ ನಿರ್ವಹಣೆಯಲ್ಲಿನ ಎಲ್ಲಾ ಲೋಪದೋಷಗಳನ್ನು ಸರಿಪಡಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್‌ಎಸ್‌ಎಸ್ ಸೇರಿದಂತೆ ಸಮಸ್ತ ಹಿಂದೂ ಸಮಾಜ ನಿರೀಕ್ಷಿಸುತ್ತದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಬಲವಾದ ಮನವಿಯ ಮೇರೆಗೆ, ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿದೆ. ಅದರ ಶಿಫಾರಸುಗಳ ಆಧಾರದ ಮೇಲೆ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ. ಎಸ್‌ಐಟಿ ತನಿಖೆಯ ನಂತರ ಯಾರೇ ತಪ್ಪಿತಸ್ಥರೆಂದು ಕಂಡುಬಂದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ನಿಟ್ಟಿನಲ್ಲಿ ದೇಗುಲದ ಆಡಳಿತ ಹಾಗೂ ಎಸ್‌ಐಟಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. 

ಮಂದಿರ ಹೋರಾಟ, ಬಲಿದಾನದ ಫಲ:

‘ಶ್ರೀ ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾದ ಭವ್ಯ ದೇವಾಲಯವು ಇಡೀ ಹಿಂದೂ ಸಮಾಜಕ್ಕೆ ಭಕ್ತಿ, ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದೆ. ಇದಕ್ಕೆ ತಲೆಮಾರುಗಳ ಹೋರಾಟ ಮತ್ತು ಕೋಟ್ಯಂತರ ರಾಮಭಕ್ತರ ಸಮರ್ಪಣೆ, ತ್ಯಾಗ ಮತ್ತು ಬಲಿದಾನ ಕಾರಣ. ಸೂಕ್ತ ಹಣಕಾಸು ನಿರ್ವಹಣೆ, ದೋಷರಹಿತ ಮತ್ತು ಪಾರದರ್ಶಕ ಕಾರ್ಯಾಚರಣಾ ವ್ಯವಸ್ಥೆ ಮತ್ತು ಶುದ್ಧತೆ, ಪವಿತ್ರ ಮತ್ತು ನಿಜವಾದ ಧಾರ್ಮಿಕತೆಯಿಂದ ತುಂಬಿದ ವಾತಾವರಣದ ಮೂಲಕ ಟ್ರಸ್ಟ್ ಹಿಂದೂ ಸಮಾಜದ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

ಸಂಘ ಹೇಳಿದ್ದೇನು?

- ಅಯೋಧ್ಯೆ ರಾಮಜನ್ಮಭೂಮಿಯಲ್ಲಿನ ಮಂದಿರುವ ಹಿಂದು ಸಮಾಜಕ್ಕೆ ಶಕ್ತಿ, ನಂಬಿಕೆ, ಭಕ್ತಿಯ ಕೇಂದ್ರ- ದೇಗುಲದಲ್ಲಿ ನಡೆದ ದೇಣಿಗೆ ಕಳ್ಳತನ ಇಡೀ ಸಮಾಜದ ಭಾವನೆ, ನಂಬಿಕೆಗೆ ತೀವ್ರ ನೋವುಂಟು ಮಾಡಿದೆ- ರಾಮಮಂದಿರದಲ್ಲಿ ನಡೆದಿರುವ ಘಟನೆಯಿಂದ ನಮಗೆಲ್ಲಾ ತುಂಬಾ ನೋವಾಗಿದೆ, ಕೋಪ ಕೂಡ ಬಂದಿದೆ- ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಶಕ್ತಿಗಳಿಂದ ಈ ಘಟನೆ ಬಳಸಿ ಹಿಂದೂ ಧರ್ಮ ಅಪಖ್ಯಾತಿಗೆ ಪ್ರಯತ್ನ- ಇಂತಹ ಷಡ್ಯಂತ್ರಗಳನ್ನು ಹಿಂದೂ ಸಮಾಜ ವಿಫಲಗೊಳಿಸಬೇಕು: ಪ್ರಧಾನ ಕಾರ್ಯದರ್ಶಿ ಹೊಸಬಾಳೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! - 39 ಲಕ್ಷ ಹುದ್ದೆಯಲ್ಲಿ, 31 ಲಕ್ಷ ಮಾತ್ರ ಭರ್ತಿ
2027ರ ಸಪ್ತರಾಜ್ಯ ಚುನಾವಣೆಗೆ ಬಿಜೆಪಿ ಈಗಿಂದಲೇ ರಣತಂತ್ರ!