ಜಗತ್ತಿನ ಟಾಪ್‌ ವಿವಿ ಪಟ್ಟಿಯಲ್ಲಿ ಭಾರತದ 54 ವಿವಿಗಳಿಗೆ ಸ್ಥಾನ : ಚರಿತ್ರೇಲೇ ಮೊದಲು

KannadaprabhaNewsNetwork |  
Published : Jun 20, 2025, 12:34 AM ISTUpdated : Jun 20, 2025, 04:54 AM IST
ವಿವಿ | Kannada Prabha

ಸಾರಾಂಶ

ಲಂಡನ್ ಮೂಲದ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) 2026ನೇ ಸಾಲಿನ ಜಾಗತಿಕ ಅತ್ಯುತ್ತಮ ವಿವಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ 54 ವಿವಿಗಳು ಸ್ಥಾನ ಪಡೆದುಕೊಂಡು ದಾಖಲೆ ನಿರ್ಮಿಸಿವೆ.   ಭಾರತ 4ನೇ ಸ್ಥಾನ ಪಡೆದುಕೊಂಡಿದೆ.

ನವದೆಹಲಿ: ಲಂಡನ್ ಮೂಲದ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) 2026ನೇ ಸಾಲಿನ ಜಾಗತಿಕ ಅತ್ಯುತ್ತಮ ವಿವಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ 54 ವಿವಿಗಳು ಸ್ಥಾನ ಪಡೆದುಕೊಂಡು ದಾಖಲೆ ನಿರ್ಮಿಸಿವೆ. ಈ ಮೂಲಕ ಅತ್ಯುತ್ತಮ ವಿವಿಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಪಡೆದುಕೊಂಡಿದೆ.

ಭಾರತದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದು, ‘ಕ್ಯೂಎಸ್ ಜಾಗತಿಕ ವಿವಿ 2026ರ ಶ್ರೇಯಾಂಕ ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಶುಭಸುದ್ದಿ ತಂದಿದೆ. ಭಾರತದ ಯುವಜನರ ಪ್ರಯೋಜನಕ್ಕಾಗಿ ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ತರಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಏನಿದು ವರದಿ?:

ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಲಂಡನ್ ಮೂಲದ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆಯಾಗಿದ್ದು, ಪ್ರತಿವರ್ಷ ಜಗತ್ತಿನ ಅತ್ಯುತ್ತಮ ವಿವಿಗಳನ್ನು ಗುರುತಿಸಿ ಪಟ್ಟಿ ಬಿಡುಗಡೆ ಮಾಡುತ್ತದೆ. ವಿವಿಗಳ ಶೈಕ್ಷಣಿಕ ಸಾಧನೆ, ವಿದ್ಯಾರ್ಥಿ-ಸಿಬ್ಬಂದಿ ಅನುಪಾತ, ಸಂಶೋಧನಾ ಪರಿಣಾಮ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವೈವಿಧ್ಯ ಹಾಗೂ ಪದವೀಧರರಿಗೆ ಸಿಕ್ಕ ಉದ್ಯೋಗಾವಕಾಶ ಇತ್ಯಾದಿ ಮಾನದಂಡಗಳನ್ನು ಗುರುತಿಸಿ, ವಿವಿಗಳಿಗೆ ಶ್ರೇಯಾಂಕಗಳನ್ನು ನೀಡುತ್ತದೆ.

2026ನೇ ಸಾಲಿನ ಪಟ್ಟಿಯಲ್ಲಿ 1,500ಕ್ಕೂ ಅಧಿಕ ವಿವಿಗಳನ್ನು ಪರಿಗಣಿಸಲಾಗಿದೆ. ಮೆಸಾಚ್ಯುಸೆಟ್ಸ್‌ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿಶ್ವದ ಅತ್ಯುತ್ತಮ ವಿವಿ ಎಂಬ ಹೆಗ್ಗಳಿಕೆ ಪಡೆದಿದೆ.

ಭಾರತದ ಪ್ರಗತಿ:

ಕಳೆದ ವರ್ಷ ಭಾರತದ 46 ವಿವಿಗಳು ಸ್ಥಾನ ಪಡೆದಿದ್ದವು. ಈ ವರ್ಷ ಇನ್ನೂ 8 ವಿವಿಗಳ ಸೇರ್ಪಡೆಯಾಗಿದ್ದು, ಸಂಖ್ಯೆ 54ಕ್ಕೇರಿದೆ. ಈ ಮೂಲಕ ಅತ್ಯುತ್ತಮ ವಿವಿ ಹೊಂದಿದ ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕ (192 ವಿವಿ), ಬ್ರಿಟನ್ (90) ಹಾಗೂ ಚೀನಾ (72) ಮೊದಲ 3 ಸ್ಥಾನಗಳಲ್ಲಿವೆ. ಐಐಟಿ ದೆಹಲಿ ಭಾರತದ ವಿವಿಗಳ ಪೈಕಿ ಅತ್ಯುತ್ತಮ ವಿವಿ ಎಂಬ ಹೆಗ್ಗಳಿಕೆ ಪಡೆದಿದ್ದು, ಜಾಗತಿಕ ವಿವಿಗಳ ಪೈಕಿ 123ನೇ ಸ್ಥಾನ ಪಡೆದಿದೆ.

ಭಾರತದ ಟಾಪ್ 5 ವಿವಿಗಳು:

ಕ್ಯೂಎಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ವಿವಿಗಳಲ್ಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ (ಐಐಟಿಡಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿಬಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿಎಂ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ (ಐಐಟಿ-ಕೆಜಿಪಿ) ಹಾಗೂ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮೊದಲ 5 ಸ್ಥಾನ ಪಡೆದಿವೆ.

ಕರ್ನಾಟಕದ 3 ವಿವಿಗಳಿಗೂ ಸ್ಥಾನ!:

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಬೆಂಗಳೂರಿನ ಕ್ರೈಸ್ಟ್ ವಿವಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ