ಪ್ಲ್ಯಾನ್‌ ಮಾಡಿ ರಾಧಿಕಾ ಕೊಲೆ : ತಂದೆ ದೀಪಕ್‌ ತಪ್ಪೊಪ್ಪಿಗೆ

KannadaprabhaNewsNetwork |  
Published : Jul 13, 2025, 01:18 AM ISTUpdated : Jul 13, 2025, 05:26 AM IST
Radhika Yadav murder case

ಸಾರಾಂಶ

ರಾಷ್ಟ್ರಮಟ್ಟದ ಟೆನ್ನಿಸ್‌ ಆಟಗಾರ್ತಿ ರಾಧಿಕಾ ಯಾದವ್‌ರನ್ನು ಅವರ ತಂದೆ ದೀಪಕ್‌ ಆಕಸ್ಮಿಕವಾಗಿ ಅಥವಾ ಕ್ಷಣಿಕ ಕೋಪದಿಂದ ಕೊಂದಿದ್ದಲ್ಲ. ಬದಲಿಗೆ ಅವರು ಮೊದಲೇ ಯೋಜನೆ ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರ ವಿಚಾರಣೆ ವೇಳೆ ತಿಳಿದುಬಂದಿದೆ.

ಮಗನನ್ನು ಹಾಲು ತರಲು ಕಳಿಸಿ ಮಗಳ ಹತ್ಯೆ ನನಗೆ ಗಲ್ಲು ಶಿಕ್ಷೆಯಾಗಬೇಕು: ತಂದೆ ದೀಪಕ್‌ 

ಗುರುಗ್ರಾಮ: ರಾಷ್ಟ್ರಮಟ್ಟದ ಟೆನ್ನಿಸ್‌ ಆಟಗಾರ್ತಿ ರಾಧಿಕಾ ಯಾದವ್‌ರನ್ನು ಅವರ ತಂದೆ ದೀಪಕ್‌ ಆಕಸ್ಮಿಕವಾಗಿ ಅಥವಾ ಕ್ಷಣಿಕ ಕೋಪದಿಂದ ಕೊಂದಿದ್ದಲ್ಲ. ಬದಲಿಗೆ ಅವರು ಮೊದಲೇ ಯೋಜನೆ ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರ ವಿಚಾರಣೆ ವೇಳೆ ತಿಳಿದುಬಂದಿದೆ.

‘ಪ್ರತಿದಿನ ಬೆಳಗ್ಗೆ ದೀಪಕ್‌ ಖುದ್ದಾಗಿ ಹಾಲು ತರಲು ಹೋಗುತ್ತಿದ್ದರು. ಆದರೆ ಅಂದು ತಮ್ಮ ಮಗನನ್ನು ಕಳಿಸಿ, ಮಗಳು ಮನೆಯಲ್ಲಿ ಒಬ್ಬಳೇ ಇರುವಂತೆ ನೋಡಿಕೊಂಡಿದ್ದರು. ಆಕೆ ತಿಂಡಿ ತಯಾರಿಸುತ್ತಿದ್ದ ವೇಳೆ ಅಡುಗೆಕೋಣೆಗೆ ನುಗ್ಗಿ ಗುಂಡು ಹಾರಿಸಿದ್ದರು. ಈ ಬಗ್ಗೆ ದೀಪಕ್‌ ಒಪ್ಪಿಕೊಂಡಿದ್ದಾರೆ’ ಎಂದು ಗುರುಗ್ರಾಮದ ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್‌ ಕುಮಾರ್‌ ತಿಳಿಸಿದ್ದಾರೆ. ‘ನಾನು ಕನ್ಯಾ ವಧೆ ಮಾಡಿದ್ದೇನೆ. ನನಗೆ ಗಲ್ಲು ಶಿಕ್ಷೆ ವಿಧಿಸಬೇಕು, ಹಾಗೆ ಎಫ್‌ಐಆರ್‌ ಬರೆಯಿರಿ ಎಂದು ಪೊಲೀಸರ ಮುಂದೆ ದೀಪಕ್‌ ಹೇಳಿದ್ದರು’ ಎಂದು ಅವರ ಸಹೋದರ ಹೇಳಿದ್ದಾರೆ. 

 ಟೆನ್ನಿಸ್‌ ಕೋರ್ಟ್‌ ಬುಕ್‌ ಮಾಡಿ ಆಸಕ್ತರಿಗೆ ರಾಧಿಕಾ ಟ್ರೈನಿಂಗ್‌: ತಂದೆ ಅಸಮಾಧಾನ

ಗುರುಗ್ರಾಮ: ರಾಧಿಕಾ ಬಳಿ ಸ್ವಂತ ಟೆನ್ನಿಸ್‌ ಅಕಾಡಮಿ ಇರಲಿಲ್ಲ. ಆಕೆ ವಿವಿಧ ಕೋರ್ಟ್‌ಗಳಲ್ಲಿ ಆಸಕ್ತರಿಗೆ ಟೆನ್ನಿಸ್‌ ಹೇಳಿಕೊಡುತ್ತಿದ್ದರು. ಇದಕ್ಕೆ ಅವರ ತಂದೆ ದೀಪಕ್‌ ಆಕ್ಷೇಪಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಮೊದಲು, ರಾಧಿಕಾ ಸ್ವಂತ ಅಕಾಡಮಿ ಹೊಂದಿದ್ದರು. ಅದಕ್ಕಾಗಿ ದೀಪಕ್‌ ಕೋಟ್ಯಂತರ ರುಪಾಯಿ ವ್ಯಯಿಸಿದ್ದರು. ಆಸಕ್ತರಿಗೆ ಟೆನ್ನಿಸ್‌ ಕಲಿಸಿ ರಾಧಿಕ ಗಳಿಸುತ್ತಿದ್ದ ಹಣದಲ್ಲಿ ಬದುಕುತ್ತಿರುವುದಾಗಿ ಪರಿಚಿತರು ಹಂಗಿಸುತ್ತಿದ್ದ ಕಾರಣ ಕೋಪಗೊಂಡ ದೀಪಕ್‌ ಆಕೆಯನ್ನು ಗುಂಡಿಕ್ಕಿ ಕೊಂದಿದ್ದರು ಎಂದು ಪೊಲೀಸರು ತಿಳಿಸಿದ್ದರು. ಅವರ ಸಂಬಂಧಿಯೊಬ್ಬರು ಹೇಳಿರುವ ಪ್ರಕಾರ, ಚಿಕ್ಕದಿನಿಂದ ರಾಧಿಕಾರ ಟೆನ್ನಿಸ್‌ ವೃತ್ತಿಗೆ ತಂದೆ ದೀಪಕ್‌ ಬೆಂಬಲಿಸುತ್ತಿದ್ದರು. ಆದರೆ ಆಕೆ ಅನ್ಯರಿಗೆ ಕಲಿಸತೊಡಗಿದಾಗ ಅದು ಅವರಿಗೆ ಹಿಡಿಸಿರಲಿಲ್ಲ. ಅದನ್ನು ನಿಲ್ಲಿಸುವಂತೆ ಅನೇಕ ಬಾರಿ ಸೂಚಿಸಿದ್ದರೂ ರಾಧಿಕಾ ಒಪ್ಪಿರಲಿಲ್ಲ. ಇದು ಆಗಾಗ ತಂದೆ-ಮಗಳ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತಿತ್ತು ಎನ್ನಲಾಗಿದೆ.

ಅಕ್ಟೋಬರ್‌ನಲ್ಲಿ ವಿದೇಶಕ್ಕೆ ಹೋಗಲು ರಾಧಿಕಾ ಪ್ಲ್ಯಾನ್

ಗುರುಗ್ರಾಮ: ತಂದೆಯಿಂದಲೇ ಹತ್ಯೆಗೀಡಾದ ಹರ್ಯಾಣದ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್, ಮನೆಯ ಕಠಿಣ ವಾತಾವರಣದಿಂದ ಬೇಸತ್ತು, ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ವಿದೇಶಕ್ಕೆ ತೆರಳಲು ಯೋಚಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ರಾಧಿಕಾ ತಮ್ಮ ಕೋಚ್ ಅಜಯ್ ಯಾದವ್ ಜೊತೆ ನಡೆಸಿದ ವಾಟ್ಸಾಪ್ ಸಂಭಾಷಣೆಯಿಂದ ಈ ವಿಷಯ ಬಹಿರಂಗವಾಗಿದೆ.

‘ಏನಾದರೂ ಮಾಡಿ ನಾನು ಒಂದೆರಡು ತಿಂಗಳ ಮಟ್ಟಿಗಾದರೂ ಇಲ್ಲಿಂದ ಹೊರಹೋಗಬೇಕು. ಕೆಲ ಸಮಯ ಸ್ವತಂತ್ರವಾಗಿ ಬದುಕಬೇಕು. ಇಲ್ಲಿ (ಮನೆಯಲ್ಲಿ) ತುಂಬಾ ನಿರ್ಬಂಧಗಳಿವೆ. ನನಗೆ ಲೈಫ್ ಎಂಜಾಯ್ ಮಾಡಬೇಕಿದೆ. ಚೀನಾಕ್ಕೆ ಹೋದರೆ ಆಹಾರದ ಸಮಸ್ಯೆಯಾಗುತ್ತದೆ. ದುಬೈ, ಆಸ್ಟ್ರೇಲಿಯಾ ಮೊದಲಾದ ದೇಶಗಳು ಓಕೆ. ಆಸ್ಟ್ರೇಲಿಯಾದಲ್ಲಿ ನನಗೆ ಕುಟುಂಬವಿದೆ. ದುಬೈನಲ್ಲಿ ನೀವಿದ್ದೀರ’ ಎಂದು ರಾಧಿಕಾ ಅಜಯ್ ಯಾದವ್‌ಗೆ ಸಂದೇಶ ಕಳಿಸಿದ್ದಾರೆ.‘ಅಪ್ಪನ ಜೊತೆ ಮಾತಾಡಿದೆ. ಆದರೆ ನನ್ನ ಮಾತನ್ನು ಕೇಳಲು ಅವರು ಸಿದ್ಧರಿಲ್ಲ. ಸಾಕಷ್ಟು ದುಡ್ಡು ಇಲ್ಲ ಎನ್ನುತ್ತಾರೆ’ ಎಂತಲೂ ರಾಧಿಕಾ ಮೆಸೇಜ್‌ನಲ್ಲಿ ಉಲ್ಲೇಖಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ