ಅಮಿತ್ ಶಾ ವಿರುದ್ಧ ಮಾನಹಾನಿ ಹೇಳಿಕೆ ನೀಡಿಲ್ಲ: ಕೋರ್ಟ್‌ಗೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ

KannadaprabhaNewsNetwork |  
Published : Jul 27, 2024, 12:53 AM ISTUpdated : Jul 27, 2024, 06:18 AM IST
ರಾಹುಲ್ ಗಾಂಧಿ | Kannada Prabha

ಸಾರಾಂಶ

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಮಾನಹಾನಿ ಹೇಳಿಕೆ ಆರೋಪವನ್ನು ಎದುರಿಸುತ್ತಿರುವ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಶುಕ್ರವಾರ ಇಲ್ಲಿನ ಜನ ಪ್ರತಿನಿಧಿಗಳ ಕೋರ್ಟ್‌ಗೆ ಹಾಜರಾದರು.

ಸುಲ್ತಾನ್‌ಪುರ (ಉ.ಪ್ರ): ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಮಾನಹಾನಿ ಹೇಳಿಕೆ ಆರೋಪವನ್ನು ಎದುರಿಸುತ್ತಿರುವ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಶುಕ್ರವಾರ ಇಲ್ಲಿನ ಜನ ಪ್ರತಿನಿಧಿಗಳ ಕೋರ್ಟ್‌ಗೆ ಹಾಜರಾದರು. ಈ ವೇಳೆ ‘ನಾನು ಅಮಿತ್‌ ಶಾ ವಿರುದ್ಧ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿಲ್ಲ. ಅರ್ಜಿದಾರ ಪುಕ್ಕಟೆ ಪ್ರಚಾರಕ್ಕಾಗಿ ಈ ದಾವೆಯನ್ನು ಹೂಡಿದ್ದಾರೆ’ ಎಂದು ವಾದವನ್ನು ಮಂಡಿಸಿದರು.

ವಾದ ಆಲಿಸಿದ ಕೋರ್ಟ್‌ ವಿಚಾರಣೆಯನ್ನು ಆ.12ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆಗೆ ರಾಹುಲ್‌ ಖುದ್ದು ಹಾಜರಾಗಬೇಕಿಲ್ಲ.

2018ರಲ್ಲಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ವಿಜಯ್‌ ಮಿಶ್ರಾ, ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಹೊಸ ಬಂಗಲೆ

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸದನ ಸಮಿತಿಯು ಹೊಸ ಬಂಗಲೆಯನ್ನು ನೀಡಿದೆ. ದೆಹಲಿಯ ಸುನೆಹ್ರಿ ಬಾಗ್ ರಸ್ತೆಯಲ್ಲಿರುವ ನಂ.4 ಬಂಗಲೆಯನ್ನು ಹಂಚಿಕೆ ಮಾಡಲಾಗಿದ್ದು, ರಾಹುಲ್ ಒಪ್ಪಿಗೆಗೆ ಸದನ ಸಮಿತಿಯು ಕಾಯುತ್ತಿದೆ.ಇದೀಗ ರಾಹುಲ್ ಗಾಂಧಿ ವಿಪಕ್ಷ ನಾಯಕರಾದ ಕಾರಣ ಕ್ಯಾಬಿನೆಟ್‌ ಹುದ್ದೆ ಸ್ಥಾನವನ್ನು ಹೊಂದಿದ್ದು, ಟೈಪ್‌-8 ಬಂಗಲೆ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ಸದನ ಸಮಿತಿ ಅದೇ ರೀತಿ ಬಂಗಲೆಯನ್ನು ನೀಡಿದೆ.

ಸಂಸದರಾಗಿ ಆಯ್ಕೆಯಾದ ದಿನದಿಂದ ರಾಹುಲ್ ಗಾಂಧಿ ತುಘಲಕ್ ಲೇನ್‌ನಲ್ಲಿ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಕಳೆದ ವರ್ಷ ಅನರ್ಹತೆ ಶಿಕ್ಷೆಗೆ ಒಳಗಾದ ಬಳಿಕ ಆ ಮನೆಯನ್ನು ಖಾಲಿ ಮಾಡಿ ತಾಯಿ ಸೋನಿಯಾ ಗಾಂಧಿಯವರು ತಂಗಿದ್ದ ಜನಪಥ್‌ 10 ನಿವಾಸದಲ್ಲಿಯೇ ತಂಗಿದ್ದರು. ಅನರ್ಹತೆ ವಜಾಗೊಂಡ ಬಳಿಕವೂ ಅದೇ ನಿವಾಸದಲ್ಲಿ ವಾಸಿಸುತ್ತಿದ್ದರು.

ಇಂದು ನೀತಿ ಆಯೋಗ ಮಹತ್ವದ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ಶನಿವಾರ ದಿಲ್ಲಿಯಲ್ಲಿ ನಡೆಯಲಿದೆ. ‘ವಿಕಸಿತ ಭಾರತ’ದ ಕುರಿತ ಚರ್ಚೆ ಪ್ರಮುಖ ಅಜೆಂಡಾ ಆಗಿದೆ. ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಆಹ್ವಾನವಿದ್ದರೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರತುಪಡಿಸಿ ಮಿಕ್ಕ ಎಲ್ಲ ಪ್ರತಿಪಕ್ಷ ಮುಖ್ಯಮಂತ್ರಿಗಳು ಸಭೆಯನ್ನು ಬಹಿಷ್ಕರಿಸಲಿದ್ದಾರೆ.

ಬಜೆಟ್‌ನಲ್ಲಿ ಬಿಜೆಪಿಯೇತರ ರಾಜ್ಯಗಳಿಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿ ವಿಪಕ್ಷ ಸಿಎಂಗಳು ಬಹಿಷ್ಕಾರ ಘೋಷಣೆ ಮಾಡಿದ್ದಾರೆ. ಆದರೆ ಇಂಡಿಯಾ ಕೂಟದವರೇ ಆದ ಮಮತಾ ಬ್ಯಾನರ್ಜಿ ಅವರು ಸಭೆಗೆ ಹೋಗುವುದಗಿ ಹೇಳಿದ್ದರೂ, ‘ಸಭೆಯಲ್ಲಿ ಬಜೆಟ್‌ ತಾರತಮ್ಯ ಖಂಡಿಸಿ ಪ್ರತಿಭಟನೆ ನಡೆಸುವ ಉದ್ದೇಶದಿಂದ ಪಾಲ್ಗೊಳ್ಳಲಿದ್ದೇನೆ’ ಎಂದಿದ್ದಾರೆ. ಹೀಗಾಗಿ ಸಭೆ ಕಾವೇರುವ ಸಾಧ್ಯತೆ ಇದೆ.ಇದು ಮೋದಿ ಅವರು 3ನೇ ಬಾರಿ ಅಧಿಕಾರಕ್ಕೆ ಬಂದ ನಂತರ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮೊದಲ ನೀತಿ ಆಯೋಗದ ಸಭೆ ಆಗಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡುವ ಉದ್ದೇಶದ ‘ವಿಕಸಿತ ಭಾರತ-2047’ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಆರೆಸ್ಸೆಸ್‌ ಸೇರ್ಪಡೆ ನಿಷೇಧ ತಪ್ಪೆಂದು ಕೊನೆಗೂ ಕೇಂದ್ರಕ್ಕೆ ಅರಿವು: ಹೈಕೋರ್ಟ್‌

ಇಂದೋರ್‌

‘ಅಂತಾರಾಷ್ಟ್ರೀಯ ಖ್ಯಾತಿಯ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸೇರದಂತೆ ಸರ್ಕಾರಿ ನೌಕರರನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರವು ತನ್ನ ತಪ್ಪನ್ನು ಅರಿತುಕೊಳ್ಳಲು 5 ದಶಕಗಳನ್ನು ತೆಗೆದುಕೊಂಡಿದೆ’ ಎಂದು ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ಹೇಳಿದೆ.

ಆರೆಸ್ಸೆಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿ ಆಗುವುದನ್ನು ನಿಷೇಧಿಸಿ 1966ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆ ಆಗಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸಿದ ನ್ಯಾ। ಎಸ್‌.ಎ. ಧರ್ಮಾಧಿಕಾರಿ ಹಾಗೂ ನ್ಯಾ। ಗಜೇಂದ್ರ ಸಿಂಗ್‌ ಅವರ ಪೀಠ ಇತ್ತೀಚೆಗೆ ಈ ನಿಷೇಧ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಸ್ತಾಪಿಸಿತು.‘ಆರ್‌ಎಸ್‌ಎಸ್‌ನಂತಹ ಅಂತರಾಷ್ಟ್ರೀಯ ಖ್ಯಾತಿಯ ಸಂಘಟನೆಯನ್ನು ದೇಶದ ನಿಷೇಧಿತ ಸಂಘಟನೆಗಳ ನಡುವೆ ತಪ್ಪಾಗಿ ಇರಿಸಲಾಗಿದೆ ಮತ್ತು ಅದನ್ನು ತೆಗೆದುಹಾಕುವುದು ಉತ್ತಮ ಕೆಲಸವಾಗಿದೆ ಎಂದು ಕೇಂದ್ರ ಸರ್ಕಾರ ಈಗ ಅರಿತಿದೆ. ತನ್ನ ತಪ್ಪಿನ ಅರಿವಾಗಲು ಕೇಂದ್ರಕ್ಕೆ ಸುಮಾರು 5 ದಶಕಗಳೇ ಬೇಕಾಯಿತು. ಆದರೆ ಈ ನಿಷೇಧದ ಅವಧಿಯಲ್ಲಿ ಅನೇಕ ನೌಕರರು ಆರೆಸ್ಸೆಸ್‌ ಸೇರಲು ಆಸೆ ಪಟ್ಟಿದ್ದರು. ಅವರ ಆಸೆಗಳೆಲ್ಲ ಭಗ್ನಗೊಂಡವು’ ಎಂದಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!