ಕರ್ನಾಟಕದ ರೀತಿ ಎಸ್‌ಸಿ, ಎಸ್ಟಿಗೆ ಬಜೆಟ್‌ ಯೋಜನೆ ರೂಪಿಸಿ : ರಾಹುಲ್‌ ಆಗ್ರಹ

KannadaprabhaNewsNetwork | Updated : Apr 05 2025, 05:36 AM IST

ಸಾರಾಂಶ

ದಲಿತರು, ಆದಿವಾಸಿಗಳಿಗೆ ಯೋಜನೆಗಳಲ್ಲಿ ನ್ಯಾಯಯುತ ಹಂಚಿಕೆ ಮಾಡುವ ಬಜೆಟ್‌ಗಾಗಿ ಕಾನೂನಿನ ಅಗತ್ಯವಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದ್ದಾರೆ.

ನವದೆಹಲಿ: ದಲಿತರು, ಆದಿವಾಸಿಗಳಿಗೆ ಯೋಜನೆಗಳಲ್ಲಿ ನ್ಯಾಯಯುತ ಹಂಚಿಕೆ ಮಾಡುವ ಬಜೆಟ್‌ಗಾಗಿ ಕಾನೂನಿನ ಅಗತ್ಯವಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ‘ಈ ಕುರಿತ ಕಾನೂನು ಈಗಾಗಲೇ ಕರ್ನಾಟಕ, ತೆಲಂಗಾಣದಲ್ಲಿದೆ. ಇದರಿಂದ ಈ ಸಮುದಾಯಗಳು ಪ್ರಯೋಜನ ಪಡೆಯುತ್ತಿವೆ. ಯುಪಿಎ ಸರ್ಕಾರದ ಅವಧಿಯಲ್ಲೂ ಈ ಯೋಜನೆ ರೂಪಿಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಯೋಜನೆ ಬಡವಾಯಿತು’ ಎಂದು ರಾಹುಲ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ರಾಹುಲ್‌ ಅವರು ಇತ್ತೀಚೆಗೆ ಆದಿವಾಸಿಗಳು, ದಲಿತರ ಸಂಪರ್ಕ ಹೊಂದಿದ ಸಂಶೋಧಕರು, ಸಾಮಾಜಿಕ ಕಾರ್ಯಕರ್ತರನ್ನು ಭೇಟಿಯಾಗಿದ್ದರು.

ಇಂದು ಕಾರವಾರದಲ್ಲಿ ನೌಕಾ ಕಮಾಂಡರ್‌ಗಳ ಸಮ್ಮೇಳನ

ನವದೆಹಲಿ: ನೌಕಾ ಕಮಾಂಡರ್‌ಗಳ ಮೊದಲ ಹಂತದ ಸಮ್ಮೇಳನ ಶನಿವಾರ ಕರ್ನಾಟಕದ ಕಾರವಾರದ ನೌಕಾ ನೆಲೆಯಲ್ಲಿ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಲಿದ್ದು, ಸಚಿವರು ಈ ಸಂದರ್ಭದಲ್ಲಿ ಹಿಂದೂ ಮಹಾಸಾಗರ ಹಡಗು (ಐಒಎಸ್‌) ಸಾಗರ್‌ ಉದ್ಘಾಟಿಸಲಿದ್ದಾರೆ. ಇದು ಭದ್ರತೆಗಾಗಿ ಮತ್ತು ಸಮಗ್ರ ಪ್ರಗತಿಗಾಗಿ ಹಿಂದೂ ಮಹಾಸಾಗರ ಪ್ರದೇಶಗಳೊಂದಿಗೆ ನಿರಂತರ ಸಹಕಾರವನ್ನು ನೀಡಲಿದೆ. 2025ನೇ ಸಾಲಿನ ಮೊದಲ ಆವೃತ್ತಿಯ ನೌಕಾ ಕಮಾಂಡರ್‌ಗಳ ಸಮ್ಮೇಳನವನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಮೊದಲ ಹಂತವು ಏ.5ರಂದು ಕಾರವಾರದಲ್ಲಿ ಮತ್ತು ಎರಡನೇ ಹಂತವು 7-10ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಈ ಸಮ್ಮೇಳನವು ಉನ್ನತ ಮಟ್ಟದ ದ್ವೈವಾರ್ಷಿಕ ಕಾರ್ಯಕ್ರಮವಾಗಿದ್ದು, ನೌಕಾ ಪಡೆಯ ಉನ್ನತ ಮಟ್ಟದ ಕಮಾಂಡರ್‌ಗಳು ಮಹತ್ವದ ಕಾರ್ಯತಂತ್ರ, ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ವಿಷಯಗಳ ಕುರಿತು ಚರ್ಚಿಸಲು ಒಗ್ಗೂಡುತ್ತಾರೆ.

1000 ಕೋಟಿ ರು. ಅಕ್ರಮ: ಎಂಪುರಾನ್ ನಿರ್ಮಾಪಕರ ಕಚೇರಿ ಮೇಲೆ ಇ.ಡಿ. ದಾಳಿ

ನವದೆಹಲಿ: 1000 ಕೋಟಿ ರು. ಮೌಲ್ಯದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ( ಫೆಮಾ) ನಿಯಮ ಉಲ್ಲಂಘಿಸಿರುವ ಆರೋಪದ ಮೇಲೆ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಶುಕ್ರವಾರ ಎಲ್‌2: ಎಂಪುರಾನ್ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ ಗೋಪಾಲನ್ ಚಿಟ್‌ ಫಂಡ್‌ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ತಮಿಳುನಾಡಿನ ಚೆನ್ನೈ, ಕೇರಳದ ಕೊಚ್ಚಿ ಸೇರಿದಂತೆ ವಿವಿಧ ರಾಜ್ಯಗಳ ಐದು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಗೋಪಾಲನ್ ಮತ್ತು ಅವರ ಗೋಪಾಲನ್ ಚಿಟ್‌ ಆ್ಯಂಡ್‌ ಫೈನಾನ್ಸ್‌ ಕಂಪನಿ ಲಿಮಿಟೆಡ್‌ ಕೆಲವು ಅನಿವಾಸಿ ಭಾರತೀಯರೊಂದಿಗೆ 1000 ಕೋಟಿ ರು.ಗಳ ವಹಿವಾಟು ಫೆಮಾ ನಿಯಮ ಉಲ್ಲಂಘನೆಯಾಗಿದೆ ಎಂದು ಇ.ಡಿ. ಈ ದಾಳಿ ನಡೆಸಿದೆ.

ಹೆಚ್ಚು ಟಿಕೆಟ್‌ ಆದಾಯದ ಪೈಕಿ ತಾಜ್‌ ಮಹಲ್‌ ಅಗ್ರ: 5 ವರ್ಷದಲ್ಲಿ ₹279 ಕೋಟಿ

ನವದೆಹಲಿ: ದೇಶದಲ್ಲಿ ಪುರಾತತ್ವ ಇಲಾಖೆ ಅಧೀನದ ಪ್ರವಾಸಿ ಕೇಂದ್ರಗಳ ಟಿಕೆಟ್‌ ಆದಾಯದ ಪೈಕಿ ಆಗ್ರಾದಲ್ಲಿನ ತಾಜ್‌ ಮಹಲ್‌ ಅಗ್ರಸ್ಥಾನದಲ್ಲಿದೆ. ತಾಜ್‌ಮಹಲ್‌ಗೆ ಕಳೆದ 5 ವರ್ಷದಲ್ಲಿ ಟಿಕೆಟ್‌ ಮಾರಾಟದಿಂದ 279 ಕೋಟಿ ರು. ಆದಾಯ ಹರಿದುಬಂದಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಹಣಕಾಸು ವರ್ಷ 2019-2024ರವರೆಗೆ ತಾಜ್‌ ಮಹಲ್‌ ಮೊದಲ ಸ್ಥಾನ ಪಡೆದುಕೊಂಡಿದೆ. 2023-24ನೇ ಸಾಲಿನಲ್ಲಿ ದೆಹಲಿಯ ಕುತುಬ್‌ ಮಿನಾರ್‌ 23.80 ಕೋಟಿ ರು. ಆದಾಯದಿಂದ 2ನೇ ಸ್ಥಾನದಲ್ಲಿ, ಕೆಂಪು ಕೋಟೆಯು 18.08 ಕೋಟಿ ರು.ನಿಂದ 3ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಸೋನಿಯಾ ಹೇಳಿಕೆ ವಿವಾದದೊಂದಿಗೆ ಸಂಸತ್‌ ಬಜೆಟ್‌ ಅಧಿವೇಶನ ಸಮಾಪ್ತಿ

ನವದೆಹಲಿ: ಭಾರೀ ಚರ್ಚೆಗೆ ಕಾರಣವಾಗಿದ್ದ ವಕ್ಫ್‌ ತಿದ್ದುಪಡಿ ವಿಧೇಯಕ ಸೇರಿ ಹಲವು ಮಹತ್ವದ ವಿಧೇಯಕ ಅಂಗೀಕರಿಸಿರುವ ಸಂಸತ್ತಿನ ಬಜೆಟ್‌ ಅಧಿವೇಶನ ಶುಕ್ರವಾರ ಅಧಿಕೃತವಾಗಿ ಸಮಾಪನಗೊಂಡಿದೆ.

ಈ ಮಧ್ಯೆ, ವಕ್ಫ್‌ ತಿದ್ದುಪಡಿ ವಿಧೇಯಕವನ್ನು ಬಲವಂತವಾಗಿ ಅಂಗೀಕರಿಲಾಯಿತು ಎಂಬ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿಕೆ ಅಧಿವೇಶನದ ಕೊನೆಯ ದಿನ ಕೆಲಕಾಲ ಗದ್ದಲಕ್ಕೂ ಕಾರಣವಾಯಿತು. ಗುರುವಾರ ಕಾಂಗ್ರೆಸ್‌ ಸಂಸದರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಸೋನಿಯಾ ಗಾಂಧಿ ಅವರು, ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ವಿಧೇಯಕವನ್ನು ಬಲವಂತವಾಗಿ ಪಾಸ್‌ ಮಾಡಲಾಗಿದೆ. ಆದರೆ ಈ ವಿಧೇಯಕವು ಸಂವಿಧಾನಕ್ಕೆ ಮಾಡಿದ ಹಲ್ಲೆ ಎಂಬುದು ನಮ್ಮ ಪಕ್ಷದ ಸ್ಪಷ್ಟ ನಿಲುವು ಎಂದು ಹೇಳಿದ್ದರು. ಶುಕ್ರವಾರ ಈ ವಿಷಯ ಪ್ರಸ್ತಾಪಿಸಿದ ಸಚಿವ ರಿಜಿಜು ಸೋನಿಯಾ ಗಾಂಧಿ ಹೇಳಿಕೆ ಪ್ರಸ್ತಾಪಿಸಿ ರೂಲಿಂಗ್‌ ನೀಡುವಂತೆ ಸ್ಪೀಕರ್‌ ಅವರನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಅ‍ವರು ಸೋನಿಯಾ ಗಾಂಧಿ ಅವರ ಹೆಸರೇಳದೆ ಹೇಳಿಕೆ ಕುರಿತು ಅಸಮಾಧಾನ ಹೊರಹಾಕಿದರು. ಈ ರೀತಿಯ ಹೇಳಿಕೆ ದುರದೃಷ್ಟಕರ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಘನತೆಗೆ ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.---

ಲೋಕಸಭೆಯಲ್ಲಿ 16ವಿಧೇಯಕ ಮಂಡನೆ

ಜ.31ರಂದು ಆರಂಭವಾಗಿ 26 ದಿನಗಳ ಕಾಲ ನಡೆದ ಈ ಬಜೆಟ್‌ ಅಧಿವೇಶನದಲ್ಲಿ 10 ವಿಧೇಯಕಗಳು ಮರುಮಂಡನೆಯಾಗಿದ್ದು, 16 ವಿಧೇಯಕಗಳಿಗೆ ಒಪ್ಪಿಗೆ ನೀಡಲಾಗಿದೆ.--

ರಾಜ್ಯಸಭೆಯ ಉತ್ಪಾದಕತೆಶೇ.119: ಜಗದೀಪ್‌ ಧನಕರ್‌

ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್‌ ಧನ್‌ಕರ್‌ ಅವರು ಬಜೆಟ್‌ ಅಧಿವೇಶನದ ಸಮಾರೋಪ ನುಡಿಗಳನ್ನಾಡಿ, ಬಜೆಟ್‌ ಅಧಿವೇಶನದ ಉತ್ಪಾದಕತೆ ಶೇ.119 ಆಗಿದೆ. ವಕ್ಫ್‌ ತಿದ್ದುಪಡಿ ವಿಧೇಯಕ ಮಂಡನೆಯಾದ ದಿನ ಬೆಳಗ್ಗೆ 11 ಗಂಟೆಗೆ ಆರಂಭವಾದ ಕಲಾಪವು ಮರುದಿನ ಬೆಳಗ್ಗೆ 4.02 ಗಂಟೆವರೆಗೆ ನಡೆದು ದಾಖಲೆ ಬರೆದಿದೆ. ಇದು ಸಂಸದೀಯ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸಲಿದೆ ಎಂದರು.

Share this article